ನಾಳೆ ಕೋಲಾರ ಕ್ಷೇತ್ರ ಜೆಡಿಎಸ್‌ ಅಭ್ಯರ್ಥಿ ಪ್ರಕಟ

KannadaprabhaNewsNetwork | Published : Mar 24, 2024 1:31 AM

ಸಾರಾಂಶ

ದೆಹಲಿಗೆ ಸಂಸದ ಎಸ್.ಮುನಿಸ್ವಾಮಿರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಡ್ಡಾ ಕರೆಸಿಕೊಂಡು ಚರ್ಚಿಸಿದ್ದು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವುದಾಗಿ ಅವರಿಗೆ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ

ಕನ್ನಡಪ್ರಭ ವಾರ್ತೆ ಮುಳಬಾಗಲು

ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹಾಸನದಿಂದ ಪ್ರಜ್ವಲ್ ರೇವಣ್ಣ, ಸ್ಪರ್ಧೆಮಾಡಲಿದ್ದು, ಕೋಲಾರದಿಂದ ತಾವು ಅಥವಾ ಮಲ್ಲೇಶ್ ಬಾಬು ಸ್ಪರ್ಧಿಸುವುದು ಗ್ಯಾರಂಟಿ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.

ತಾಲೂಕಿನ ಕಾಂತರಾಜ ಸರ್ಕಲ್ ಬಳಿ ಇರುವ ಸಾಯಿ ಕುಟೀರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಚೆನ್ನೈನ ಆಸ್ಪತ್ರೆಯಿಂದ ಭಾನುವಾರ ಸಂಜೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸೋಮವಾರ ಬೆಳಗ್ಗೆ ೧೧ ಗಂಟೆಗೆ ಅಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದ್ದಾರೆಂದು ತಿಳಿಸಿದರು.

ಬಾಬುಗೆ ಟಿಕೆಟ್‌ ನೀಡಿದರೆ ಬೆಂಬಲ

ಮಲ್ಲೇಶ್‌ಬಾಬುರಿಗೆ ಟಿಕೇಟ್ ನೀಡಿದರೆ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರಲ್ಲದೆ ನಾನು ಸ್ಪರ್ಧೆ ಮಾಡಿದರೆ ಅವರು ಸಹ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಮುನಿಸ್ವಾಮಿಗೂ ಬೆಂಬಲ

ದೆಹಲಿಗೆ ಸಂಸದ ಎಸ್.ಮುನಿಸ್ವಾಮಿರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಡ್ಡಾ ಕರೆಸಿಕೊಂಡು ಚರ್ಚಿಸಿದ್ದು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವುದಾಗಿ ಅವರಿಗೆ ಆಶ್ವಾಸನೆ ನೀಡಿದ್ದಾರೆ. ಕಳೆದ ವಾರ ಎಸ್.ಮುನಿಸ್ವಾಮಿ ನಾನು ದೂರವಾಣಿ ಮೂಲಕ ಚರ್ಚಿಸಿ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಿಗೆ ಕೆಲಸ ಮಾಡೋಣ ಎಂದು ನಿರ್ಧರಿಸಿದ್ದೇವೆ. ಒಂದು ವೇಳೆ ಬಿಜೆಪಿಯಿಂದ ಎಸ್.ಮುನಿಸ್ವಾಮಿರಿಗೆ ಟಿಕೆಟ್ ನೀಡಿದರೆ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ ೯೭ ಸಾವಿರ ಮಂದಿ ಮತ ನೀಡಿ ನನ್ನನ್ನು ಬಹುಮತದಿಂದ ವಿಧಾನಸೌಧಕ್ಕೆ ಆರಿಸಿ ಕಳುಹಿಸಿದ್ದಾರೆ, ಈಗ ಇನ್ನೂ ೧ ವರ್ಷ ಕಳೆಯದೇ ಇದ್ದರೂ ಸಹ ತಾಲೂಕಿನ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ದಿ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಿದ್ದೇನೆ. ನನಗೆ ಸಂಸದನಾಗಬೇಕೆಂಬ ಆಸೆ ಏನೂ ಇಲ್ಲ. ಅದರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಎಂದು ತಿಳಿಸಿದರು.

ಬಿಜೆಪಿ- ಜೆಡಿಎಸ್‌ ಮುಖಂಡರ ಸಭೆ

ಲೋಕಸಭಾ ಚುನಾವಣಾ ಪ್ರಚಾರ ಕುರುಡುಮಲೆ ವಿನಾಯಕನಿಗೆ ಪೂಜೆ ಮಾಡುವುದರ ಮೂಲಕ ಪ್ರಾರಂಭ ಮಾಡುವುದಾಗಿ ಈಗಾಗಲೇ ಮಾಜಿ ಸಿ.ಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ವರ್ತೂರ್ ಪ್ರಕಾಶ್, ಮಂಜುನಾಥ್‌ಗೌಡ, ಸಂಪಂಗಿ, ಹೂಡಿ ವಿಜಯ್ ಕುಮಾರ್ ಸೇರಿದಂತೆ ಇತರೆ ಬಿಬಿಪಿ ಪ್ರಮುಖರನ್ನು ಹಾಗೂ ಜೆಡಿಎಸ್ ಮುಖಂಡರನ್ನು ಒಟ್ಟಿಗೆ ಸೇರಿಸಿ ಸಭೆ ಮಾಡಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ಪಕ್ಷ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿಸಿದರು.

ನಾನು ಸಂಸದನಾಗಿ ಆಯ್ಕೆಯಾದರೆ ಕಾಂಗ್ರೇಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳು ಶಾಸಕರಾಗಲು ಹಗಲು ಕನಸು ಕಾಣುತ್ತಿದ್ದಾರೆ ಇದಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಪರ್ಯಾಯವಾಗಿ ನಮ್ಮ ಕುಟುಂಬದ ಸದಸ್ಯರನ್ನೇ ಸ್ಪರ್ಧಿಸಲು ಅವಕಾಶ ನೀಡುತ್ತೇನೆ ಎಂದು ತಿಳಿಸಿದರು.

ದೇಶದ ಅಭಿವೃದ್ದಿಗೆ ನರೇಂದ್ರ ಮೋದಿಯ ಅಗತ್ಯವಿದೆ, ಈ ಹಿನ್ನಲೆಯಲ್ಲಿ ದೇಶದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಬೇಕಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಹೇಳಿಕೊಂಡು ಜನರ ಬೆಂಬಲ ಕೋರಿದರೂ ಸಹ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ನೀರಿನ ಸಮಸ್ಯೆಗೆ ಪರಿಹಾರ

ತಾಲೂಕಿನ ೮೪ ಗ್ರಾಮ ಹಾಗೂ ನಗರದ ಬಹುತೇಕ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ಪ್ರತಿದಿನ ದೂರುಗಳು ಬರುತ್ತಿದ್ದು, ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಹೊಸ ಬೋರ್‌ವೆಲ್ ಕೊರೆಸುವುದು ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಅರಣ್ಯ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವವಾಗದಂತೆ ತಡೆಗಟ್ಟಲು ನರೇಗಾ ಯೋಜನೆಯಡಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು ಹಾಯಿಸಲು ಕ್ರಮ ತೆಗೆದುಕೊಳ್ಳುವಂತೆ ಅರಣ್ಯಾಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ ಎಂದರು.

Share this article