ಮೈತ್ರಿ ಯಶಸ್ಸಿಗೆ ಜೆಡಿಎಸ್‌ ಅಷ್ಟಸೂತ್ರ

KannadaprabhaNewsNetwork |  
Published : Mar 26, 2024, 01:45 AM ISTUpdated : Mar 26, 2024, 08:00 AM IST
ಜೆಡಿಎಸ್‌ | Kannada Prabha

ಸಾರಾಂಶ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮೈತ್ರಿ ಧರ್ಮಪಾಲನೆ ಮಾಡುವ ಉದ್ದೇಶದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಎಲ್ಲ ಹಂತದ ಮುಖಂಡರಿಗೆ ಎಂಟು ಪ್ರಮುಖ ಅಂಶಗಳನ್ನು ಒಳಗೊಂಡ ನಿರ್ದೇಶನಗಳನ್ನು ರವಾನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮೈತ್ರಿ ಧರ್ಮಪಾಲನೆ ಮಾಡುವ ಉದ್ದೇಶದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಎಲ್ಲ ಹಂತದ ಮುಖಂಡರಿಗೆ ಎಂಟು ಪ್ರಮುಖ ಅಂಶಗಳನ್ನು ಒಳಗೊಂಡ ನಿರ್ದೇಶನಗಳನ್ನು ರವಾನಿಸಿದ್ದಾರೆ.

ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ, ಹಾಸನ ಮತ್ತು ಕೋಲಾರ (ಮೀಸಲು) ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಉಳಿದ 25 ಲೋಕಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. 

ಈ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿಕೂಟದ ಎರಡೂ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಬೆಂಬಲಿಸುತ್ತ ಮೈತ್ರಿಧರ್ಮ ಪಾಲನೆ ಮಾಡಬೇಕಾಗುತ್ತದೆ.

ಈ ಸಂಬಂಧ ಜೆಡಿಎಸ್‌ನ ತತ್ವ, ಸಿದ್ಧಾಂತ ಮತ್ತು ಬದ್ಧತೆಗೆ ಧಕ್ಕೆಯಾಗದ ರೀತಿಯಲ್ಲಿ ಚುನಾವಣೆ ಪ್ರಚಾರವನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಪತ್ರದ ಮೂಲಕ ತಿಳಿಸಿದ್ದಾರೆ.

ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸುವ ಸಾರ್ವಜನಿಕ ಸಭೆ ಮತ್ತು ಪ್ರಚಾರ ಸಭೆಗಳಲ್ಲಿ ಉಭಯ ಪಕ್ಷಗಳ ನಾಯಕರು ಯಾವುದೇ ವಿವಾದಾತ್ಮಕ ಹೇಳಿಕೆಗಳಿಗೆ ಆಸ್ಪದ ನೀಡದೆ ಸಮನ್ವಯತೆಯಿಂದ ಚುನಾವಣೆಯನ್ನು ನಡೆಸಬೇಕು. 

ಮೈತ್ರಿ ಅಭ್ಯರ್ಥಿಗಳ ಬಗ್ಗೆ ಯಾವುದೇ ಅಸಮಾಧಾನವನ್ನು ಯಾವುದೇ ಸಂದರ್ಭದಲ್ಲಿ ವ್ಯಕ್ತಪಡಿಸಬಾರದು ಎಂದು ಸೂಚಿಸಿದ್ದಾರೆ. 

ಜೆಡಿಎಸ್‌ನ ಜಿಲ್ಲಾಧ್ಯಕ್ಷರು ಮತ್ತು ಲೋಕಸಭಾ ಉಸ್ತುವಾರಿಗಳು ಬಿಜೆಪಿಯಿಂದ ಲೋಕಸಭೆ ಪ್ರಭಾರಿಗಳಾಗಿ ನೇಮಕವಾಗಿರುವವರೊಂದಿಗೆ ಸಮನ್ವಯ ಸಭೆಗಳನ್ನು ಆಯೋಜಿಸಿ ಈ ಕೆಳಕಂಡ ನಿಯಮಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಅಷ್ಟ ಸೂತ್ರಗಳು

1.ಎರಡೂ ಪಕ್ಷಗಳು ಎರಡೂ ಪಕ್ಷದ ಚಿಹ್ನೆಗಳನ್ನು ಸಮಅಳತೆಯಲ್ಲಿ ಬಳಸಬೇಕು
2.ಸಾರ್ವಜನಿಕ ಸಭೆ ಮತ್ತು ಚುನಾವಣಾ ಪ್ರಚಾರ ಸಭೆಗಳಲ್ಲಿ ಎರಡೂ ಪಕ್ಷಗಳ ಬಾವುಟಗಳನ್ನು ಪ್ರದರ್ಶಿಸಬೇಕು 
3.ಜೆಡಿಎಸ್ ಮತ್ತು ಬಿಜೆಪಿ ನಾಯಕರ ಫೋಟೋಗಳನ್ನು ಭೇದವಿಲ್ಲದೇ ಉಪಯೋಗಿಸಿಕೊಳ್ಳಬೇಕು
4.ಸಭೆಗಳಲ್ಲಿ ಕಡ್ಡಾಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಪಕ್ಷದ ಶಾಲುಗಳನ್ನು ಬಳಸಬೇಕು
5.ರಾಷ್ಟ್ರ ಮತ್ತು ರಾಜ್ಯಮಟ್ಟದ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಾಧನೆಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು
6. ಕ್ಷೇತ್ರ/ಜಿಲ್ಲಾ/ವಿಧಾನಸಭಾವಾರು ಮುಖಂಡರ ಫೋಟೋಗಳನ್ನು ಕ್ಷೇತ್ರವಾರು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಬಳಸಬೇಕು
7. ಮೈತ್ರಿ ಪಕ್ಷದೊಂದಿಗೆ ಚರ್ಚಿಸಿ, ಮತಗಟ್ಟೆ ಸಮಿತಿಗಳನ್ನು ರಚಿಸಿ, ಮತದಾರರನ್ನು ಮತಗಟ್ಟೆಗೆ ಕರೆತಂದು ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡುವಂತೆ ಕ್ರಮ ವಹಿಸುವುದು
8. ಗೊಂದಲ ಉಂಟು ಮಾಡಿಕೊಳ್ಳಬಾರದು. ಕಠಿಣ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಪಕ್ಷದ ಕೇಂದ್ರ ಕಚೇರಿಯ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌
ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ