;Resize=(412,232))
ರಾಮನಗರ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮಧ್ಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ನಡೆಸುತ್ತಿರುವ ಹೋರಾಟ ತೀವ್ರ ಕಾವು ಪಡೆದುಕೊಳ್ಳುತ್ತಿದೆ.
ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೂನ್ 21ರಂದು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಅಂಚಿಪುರ ಗ್ರಾಮದಿಂದ ಭಾನುವಾರ ಬೆಳಗ್ಗೆ 9 ಗಂಟೆಗೆ ಆರಂಭವಾಗುವ ಪಾದಯಾತ್ರೆಯಲ್ಲಿ ಸುಮಾರು 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಅಂಚಿಪುರ ಕಾಲೊನಿ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಮೂಲಕ ಪಾದಯಾತ್ರೆ ಹೊಸೂರು ತಲುಪಿ, ಬಹಿರಂಗ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ.
ನಮ್ಮ ಭೂಮಿ ನಮ್ಮ ಹಕ್ಕು, ರೈತರ ಬದುಕು ಮತ್ತು ಕೃಷಿ ಚಟುವಟಿಕೆಗಳನ್ನು ಉಳಿಸಲು ಈ ಹೋರಾಟ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಈ ಪಾದಯಾತ್ರೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಅಕಲಗೂಡು ಕ್ಷೇತ್ರ ಶಾಸಕ ಎ.ಮಂಜು, ಶ್ರವಣಬೆಳಗೊಳ ಕ್ಷೇತ್ರ ಶಾಸಕ ಸಿ.ಎನ್.ಬಾಲಕೃಷ್ಣ, ಹುಣಸೂರು ಕ್ಷೇತ್ರ ಶಾಸಕ ಜಿ.ಡಿ.ಹರೀಶ್ ಗೌಡ, ಕೆ.ಆರ್.ಪೇಟೆ ಕ್ಷೇತ್ರ ಶಾಸಕ ಎಚ್.ಟಿ.ಮಂಜು, ಹನೂರು ಕ್ಷೇತ್ರ ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕರಾದ ಸಿ.ಎಂ.ಪುಟ್ಟರಾಜು, ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಸಾ.ರಾ.ಮಹೇಶ್ , ಬಂಡೆಪ್ಪ ಕಾಶಂಪುರ್, ನಿಸರ್ಗ, ಶ್ರೀನಿವಾಸ್ ಸೇರಿದಂತೆ ಅನೇಕ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಪಕ್ಷದ ಮಹಿಳಾ ಘಟಕ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಳ್ಳುವರು. ಈ ಭಾಗದ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಸಹಸ್ರಾರು ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವರು. ರೈತ ಮತ್ತು ಕನ್ನಡಪರ ಸಂಘಟನೆಗಳು ಹೋರಾಟದಲ್ಲಿ ಭಾಗವಹಿಸಲಿವೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಐದು ತಾಲೂಕು ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಪಕ್ಷದ ಕಾರ್ಯಕರ್ತರು ಸೇರಿದಂತೆ ಸುಮಾರು 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಬಿಡದಿ ಟೌನ್‌ಶಿಪ್ ಯೋಜನೆಯಡಿ ಅಂಚಿಪುರ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 518 ಎಕರೆ ಕೃಷಿ ಭೂಮಿಗೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಜೊತೆಗೆ ಹೆಚ್ಚುವರಿ 7,481 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ 755 ರೈತ ಕುಟುಂಬಗಳು, ಮಾಸಿಕ 6 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಹೈನುಗಾರಿಕೆ, ರೇಷ್ಮೆ-ತೋಟಗಾರಿಕೆ ಹಾಗೂ 10 ಲಕ್ಷ ಹಸಿರು ವೃಕ್ಷಗಳಿಗೆ ಧಕ್ಕೆಯಾಗಲಿದೆ ಎಂದು ನಿಖಿಲ್ ಕುಮಾರ್ ಆರೋಪಿಸಿದ್ದಾರೆ.
ಕಳೆದ 470 ದಿನಗಳಿಂದ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಯೋಜನೆಯಿಂದ ರೈತರ ಬದುಕಿಗೆ ತೊಂದರೆಯಾಗಲಿದ್ದು, ನಮ್ಮ ಈ ಹೋರಾಟ ಪಕ್ಷಾತೀತವಾಗಿ ನಡೆಯಲಿದ್ದು, ಸರ್ಕಾರದ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಂಚಿಪುರದಿಂದ ಹೊಸೂರಿಗೆ ನಡೆಯುವ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸುವಂತೆ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಮೊದಲ ಹಂತದ ಈ ಬೃಹತ್ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾಗವಹಿಸುವ ಸಾಧ್ಯತೆಗಳಿವೆ. ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಕುಮಾರಸ್ವಾಮಿ ಮೊದಲಿನಿಂದಲೂ ಬೆಂಬಲ ನೀಡಿದ್ದಾರೆ. ಒಂದು ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಳವಳಿಗಾರರನ್ನು ಉದ್ದೇಶಿಸಿ ಮಾತನಾಡಿದ್ದ ಕುಮಾರಸ್ವಾಮಿ, ಮತ್ತೊಮ್ಮೆ ಧರಣಿಯಲ್ಲಿಯೂ ಪಾಲ್ಗೊಂಡು ರೈತರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಇದೀಗ ಪಾದಯಾತ್ರೆಯಲ್ಲಿ ಕುಮಾರಸ್ವಾಮಿ ಭಾಗಿಯಾಗುವ ನಿರೀಕ್ಷೆಗಳಿವೆ. ಮೊದಲೇ ನಿಗದಿಯಾಗಿರುವ ಒಂದೆರೆಡು ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಕುಮಾರಸ್ವಾಮಿ ವೈದ್ಯರ ಸಲಹೆ ಮೇರೆಗೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಡಿನೋಟಿಫೈ ಮಾಡಿ ಜೈಲಿಗೆ ಹೋಗಲಾ?
ಎಚ್.ಡಿ.ಕುಮಾರಸ್ವಾಮಿ ಅವರೇ ಬಿಡದಿ ಟೌನ್‌ಶಿಪ್‌ನ ಪಿತಾಮಹ. ಸರಿಯಿಲ್ಲ ಅನ್ನಿಸಿದ್ದರೆ, ಅವರು ಮುಖ್ಯಮಂತ್ರಿ ಆಗಿದ್ದಾಗ ಟೌನ್ ಶಿಪ್ ಜಮೀನನ್ನು ಏಕೆ ಡಿನೋಟಿಫೈ ಮಾಡಲಿಲ್ಲ, ರೆಡ್ ಝೋನ್ ಏಕೆ ಮಾಡಿದರು. ಈಗ ನಾನು ಡಿನೋಟಿಫೈ ಮಾಡಿ ಜೈಲಿಗೆ ಹೋಗಲಾ.
ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ