ಗೆದ್ದ 1 ತಿಂಗಳಲ್ಲೇ ಅದಾನಿ ಹಗರಣ ತನಿಖೆ: ಕಾಂಗ್ರೆಸ್‌

KannadaprabhaNewsNetwork | Updated : May 23 2024, 04:52 AM IST

ಸಾರಾಂಶ

 ಅದಾನಿ ಸಮೂಹವು ವಿದೇಶಗಳಿಂದ ಆಮದು ಮಾಡಿಕೊಂಡ ಕಡಿಮೆ ಗುಣಮಟ್ಟದ ಕಲ್ಲಿದ್ದಲ್ಲನ್ನು, ‘ಉತ್ಕೃಷ್ಟ ಗುಣಮಟ್ಟದ ಕಲ್ಲಿದ್ದಲು’ ಎಂದು ಬಿಂಬಿಸಿ ಅದಾನಿ ಸಮೂಹ ಸಾವಿರಾರು ಕೋಟಿ ರು. ಲಾಭ ಮಾಡಿಕೊಂಡಿದೆ ಎಂದು  ಒಸಿಸಿಆರ್‌ಪಿ  ವರದಿ ಆಧರಿಸಿ ‘ಫೈನಾನ್ಷಿಯಲ್‌ ಟೈಮ್ಸ್‌’ ಪತ್ರಿಕೆ ವರದಿ  ಪ್ರಕಟಿಸಿದೆ.

ನವದೆಹಲಿ: ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹವು ವಿದೇಶಗಳಿಂದ ಆಮದು ಮಾಡಿಕೊಂಡ ಕಡಿಮೆ ಗುಣಮಟ್ಟದ ಕಲ್ಲಿದ್ದಲ್ಲನ್ನು, ‘ಉತ್ಕೃಷ್ಟ ಗುಣಮಟ್ಟದ ಕಲ್ಲಿದ್ದಲು’ ಎಂದು ಬಿಂಬಿಸಿ ತಮಿಳುನಾಡಿನ ಸರ್ಕಾರ ಸ್ವಾಮ್ಯದ ಕಂಪನಿಗೆ 3 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿದೆ. ಇದರಿಂದ ಅದಾನಿ ಸಮೂಹ ಸಾವಿರಾರು ಕೋಟಿ ರು. ಲಾಭ ಮಾಡಿಕೊಂಡಿದೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್‌ಪಿ) ವರದಿ ಆಧರಿಸಿ ‘ಫೈನಾನ್ಷಿಯಲ್‌ ಟೈಮ್ಸ್‌’ ಪತ್ರಿಕೆ ವರದಿಯೊಂದನ್ನು ಪ್ರಕಟಿಸಿದೆ.

ವರದಿಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ಕಾಂಗ್ರೆಸ್‌, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಅದಾನಿ ಸಮೂಹದ ಇಂಥ ಹಗರಣ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲಾಗುವುದು ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ನಾಯಕ ರಾಹುಲ್‌ ಗಾಂಧಿ, ‘ಬಿಜೆಪಿ ಸರ್ಕಾರದ ಅಡಿಯಲ್ಲಿ ಬೃಹತ್‌ ಕಲ್ಲಿದ್ದಲು ಹಗರಣ ಬೆಳಕಿಗೆ ಬಂದಿದೆ. ಈ ಹಗರಣದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಸ್ನೇಹಿತ ಅದಾನಿ ಸಾವಿರಾರು ಕೋಟಿ ರು. ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಜೊತೆಗೆ, ‘ಇಂಥ ಬಹಿರಂಗ ಭ್ರಷ್ಟಾಚಾರದ ವಿಷಯದಲ್ಲಿ ಇ.ಡಿ., ಸಿಬಿಐ, ಮತ್ತು ಆದಾಯ ತೆರಿಗೆ ಇಲಾಖೆಯನ್ನು ಸುಮ್ಮನಿರಿಸಲು ಎಷ್ಟು ಟೆಂಪೋ ಹಣ ಬಳಸಲಾಗಿದೆ ಎಂಬುದರ ಬಗ್ಗೆ ಪ್ರಧಾನಿ ಹೇಳಲಿದ್ದಾರೆಯೇ? ಜೂ.4ರಂದು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆಯಾದರೆ ಇಂಥ ದೊಡ್ಡ ಹಗರಣಗಳ ಕುರಿತು ತನಿಖೆ ನಡೆಸಲಾಗುವುದು ಮತ್ತು ಜನರಿಂದ ಲೂಟಿ ಮಾಡಿದ ಪ್ರತಿ ಪೈಸೆಗೂ ಲೆಕ್ಕ ಕೇಳಲಾಗುವುದು’ ಎಂದು ಹೇಳಿದ್ದಾರೆ.

ವರದಿಯಲ್ಲಿ ಏನಿದೆ?

2014ರಲ್ಲಿ ಅದಾನಿ ಸಮೂಹವು ಇಂಡೋನೇಷ್ಯಾದಿಂದ ಕಡಿಮೆ ಗುಣಮಟ್ಟದ ಕಲ್ಲಿದ್ದಲ್ಲನ್ನು ಆಮದು ಮಾಡಿಕೊಂಡಿತ್ತು. ಬಳಿಕ ಅದನ್ನು ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ‘ತಮಿಳುನಾಡು ಜನರೇಷನ್‌ ಆ್ಯಂಡ್‌ ಡಿಸ್ಟ್ರಿಬ್ಯೂಷನ್‌ ಕಾರ್ಪೊರೇಷನ್‌’ಗೆ ಉತ್ಕೃಷ್ಟ ಗುಣಮಟ್ಟದ ಕಲ್ಲಿದ್ದಲು ಎಂದು ಸುಳ್ಳು ಹೇಳಿ 3 ಪಟ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Share this article