- ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಮರ್ಥನೆ - ಕೆಆರ್‌ಎಸ್ ನೃತ್ಯಕಾರಂಜಿ ಉದ್ಘಾಟನೆ ವೇದಿಕೆಯಲ್ಲಿ ಗೌರವ ಕನ್ನಡಪ್ರಭ ವಾರ್ತೆ ಮಂಡ್ಯ ಆಹ್ವಾನ ಪತ್ರಿಕೆಯಲ್ಲಿ ರೌಡಿ ಶೀಟರ್ ಹೆಸರಿಲ್ಲದಿದ್ದರೂ ವೇದಿಕೆಗೆ ಕರೆತಂದು ಗೌರವ, ಸಚಿವ ಚಲುವರಾಯಸ್ವಾಮಿ ಜೊತೆ ರೌಡಿ ಶೀಟರ್ ಫೋಟೋಗೆ ಫೋಸ್, ಡೀಸಿ, ಎಸ್‌ಪಿ ಸಮ್ಮುಖದಲ್ಲೇ ಗೌರವ ಸಮರ್ಪಣೆಯಿಂದ ಮುಜುಗರ, ಆರೋಪವಿದ್ದ ಮಾತ್ರಕ್ಕೆ ಆತ ಅಪರಾಧಿಯೇ ಎಂದು ತಮ್ಮನ್ನೇ ಉದಾಹರಿಸಿಕೊಂಡು ರೌಡಿ ಶೀಟರ್‌ನನ್ನು ಸಮರ್ಥಿಸಿಕೊಂಡ ಶಾಸಕ ರಮೇಶ್ ಬಂಡಿಸಿದ್ದೇಗೌಡ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬೃಂದಾವನದಲ್ಲಿ ನವೀಕರಣಗೊಂಡ ಸಂಗೀತ ಕಾರಂಜಿಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ರೌಡಿ ಶೀಟರ್ ಮತ್ತು ಗ್ರಾಪಂ ಸದಸ್ಯ ದೇವರಾಜು ಅಲಿಯಾಸ್ ಬುಲ್ಲಿಯನ್ನು ವೇದಿಕೆಗೆ ಕರೆದು ಸನ್ಮಾನಿಸಿರುವುದು ವಿವಾದಕ್ಕೆ ಕಾರಣವಾಗಿರುವುದಲ್ಲದೇ, ಆತನ ಪರ ವಕಾಲತ್ತು ವಹಿಸಿ ಮಾತನಾಡಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದಿದ್ದರೂ ರೌಡಿ ಶೀಟರ್ ದೇವರಾಜು ಅವರನ್ನು ವೇದಿಕೆಗೆ ಕರೆದು ಗೌರವ ಸಮರ್ಪಣೆ ಮಾಡಲಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ ಸನ್ಮಾನ ನಡೆದಿರುವುದು ಇರುಸು-ಮುರುಸು ಉಂಟುಮಾಡಿದೆ. ಶಾಸಕರ ಸೂಚನೆ ಮೇರೆಗೆ ದೇವರಾಜುಗೆ ಕಾವೇರಿ ನೀರಾವರಿ ನಿಗಮದಿಂದ ಅಭಿನಂದಿಸಲಾಗಿದೆ. ಗೌರವ ಸ್ವೀಕರಿಸಿದ ಬಳಿಕ ದೇವರಾಜು ಶಾಸಕ ರಮೇಶ್ ಬಂಡಿಸಿದ್ದೇಗೌಡ ಕಾಲಿಗೆ ನಮಸ್ಕರಿಸಿದ್ದಾನೆ. ಸಚಿವ ಎನ್. ಚಲುವರಾಯಸ್ವಾಮಿ ಜೊತೆ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾನೆ. ರೌಡಿ ಶೀಟರ್‌ವೊಬ್ಬನನ್ನು ಸನ್ಮಾನಿಸಿರುವ ಬಗ್ಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ತಮ್ಮನ್ನೇ ಉದಾಹರಣೆ ಕೊಟ್ಟುಕೊಂಡು ಆತನನ್ನು ಸಮರ್ಥಿಸಿಕೊಂಡರು. ಆರೋಪ ಇದ್ದ ಮಾತ್ರಕ್ಕೆ ಯಾರೂ ಅಪರಾಧಿಯಾಗುವುದಿಲ್ಲ. ನನ್ನ ಮೇಲೂ ಸಿಬಿಐ ಪ್ರಕರಣ ಇದೆ. ಹಾಗಾದರೆ ನಾನು ಯಾವ ಕಾರ್ಯಕ್ರಮಕ್ಕೂ ಹೋಗಬಾರದೆ. ಆತ ಇನ್ನೂ ಅಪರಾಧಿ ಎಂದು ಸಾಬೀತಾಗಿಲ್ಲ. ಕೋರ್ಟ್ ಶಿಕ್ಷೆ ಕೊಟ್ಟಿಲ್ಲ. ಹಾಗಾಗಿ ಸನ್ಮಾನಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಕೊಲೆ ಪ್ರಕರಣದಲ್ಲಿ ಆರೋಪಿ: ಕಳೆದ ಅಕ್ಟೋಬರ್ ೨ರಂದು ನಡೆದ ಪಾಲಹಳ್ಳಿಯ ರೌಡಿ ವಿನಯ್ ಕೊಲೆ ಪ್ರಕರಣದಲ್ಲಿ ದೇವರಾಜು ೧೨ನೇ ಆರೋಪಿಯಾಗಿದ್ದಾನೆ. ಎಫ್‌ಐಆರ್‌ನಲ್ಲಿ ಹೆಸರಿದ್ದರೂ ಪೊಲೀಸರ ಎದುರಿನಲ್ಲೇ ರಾಜಾರೋಷವಾಗಿ ಓಡಾಡುತ್ತಿದ್ದಾನೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಎಂಎಲ್‌ಎ ಆಪ್ತ ಎಂಬ ಕಾರಣಕ್ಕೆ ಪೊಲೀಸರು ಬಂಧಿಸಿಲ್ಲವೆಂಬ ಆರೋಪಗಳು ಕೇಳಿಬಂದಿವೆ. ಆರೋಪಿ ದೇವರಾಜುನನ್ನು ಬಂಧಿಸದಿರುವ ಬಗ್ಗೆ ಪೊಲೀಸರನ್ನು ಪ್ರಶ್ನೆ ಮಾಡಿದರೆ ಆತನಿಗೂ ಕೊಲೆ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ಹೇಳುವ ಮೂಲಕ ವಿಚಾರಣೆ ನಡೆಸದೆ ದೇವರಾಜುಗೆ ಕ್ಲೀನ್ ಚೀಟ್ ನೀಡಿದ್ದಾರೆ.