ಸಿದ್ದರಾಮಯ್ಯ ಅವರೂ, ಕ್ರೈಸ್ತರೂ ಹಾಗೂ ವಚನವೂ.. ನಿಮಗೆ ವಚನಗಳು ಬರುತ್ತವೋ ? ಕಂಠ ಪಾಠ ಮಾಡಿದ್ದೀರೇನ್ರೀ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಸಾರ್ವಜನಿಕ ಭಾಷಣದಲ್ಲಿ ಸಹಜವಾಗಿ ಅವರ ಬಾಲ್ಯ, ಮೇಷ್ಟ್ರು ಪಾಠ ಹೇಳಿಕೊಟ್ಟ ರೀತಿ, ತಾವು ಅಕ್ಷರ ಲೋಕಕ್ಕೆ ತೆರೆದುಕೊಂಡ ಸಂಗತಿಗಳ ಮೆಲುಕು ಇದ್ದೇ ಇರುತ್ತವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಸಾರ್ವಜನಿಕ ಭಾಷಣದಲ್ಲಿ ಸಹಜವಾಗಿ ಅವರ ಬಾಲ್ಯ, ಮೇಷ್ಟ್ರು ಪಾಠ ಹೇಳಿಕೊಟ್ಟ ರೀತಿ, ತಾವು ಅಕ್ಷರ ಲೋಕಕ್ಕೆ ತೆರೆದುಕೊಂಡ ಸಂಗತಿಗಳ ಮೆಲುಕು ಇದ್ದೇ ಇರುತ್ತವೆ.

ಈಚೆಗೆ ಬಳ್ಳಾರಿಯ ಕ್ರೈಸ್ತ ಧರ್ಮಕ್ಷೇತ್ರದ ಅಮೃತ ಮಹೋತ್ಸವಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲ್ಯದ ಬೆಳವಣಿಗೆಯ ಜೊತೆಗೆ ಬಸವಾದಿ ಶರಣರ ಹತ್ತಾರು ವಚನಗಳನ್ನು ನಿರರ್ಗಳವಾಗಿ ಹೇಳಿದರು.ಅಷ್ಟೇ ಅಲ್ಲ; ನನ್ನಂತೆ ನೀವೂ ವಚನಗಳನ್ನು ಹೇಳಿ ನೋಡೋಣ ಎನ್ನುತ್ತಲೇ ಪ್ರೇಕ್ಷಕರಿಂದಲೂ ವಚನಗಳನ್ನು ಹೇಳಿಸಿದರು.

ಒಂದು ರೀತಿಯಲ್ಲಿ ಧರ್ಮಕ್ಷೇತ್ರದ ಅಮೃತಮಹೋತ್ಸವ ಸಭಾ ಕಾರ್ಯಕ್ರಮ ತರಗತಿ ಕೋಣೆಯಂತೆ ಬದಲಾಯಿತು. ನಿಮಗೆ ವಚನ ಗೊತ್ತೋ ? ನಿಮಗೆ ಶಾಲೆಯಲ್ಲಿ ಹೇಳಿಕೊಟ್ಟಿದ್ದಾರೋ? ನಿಮಗೆ ಮೇಷ್ಟ್ರು ಕನ್ನಡ ವ್ಯಾಕರಣ ಸರಿಯಾಗಿ ಕಲಿಸಿದ್ದಾರೋ? ಬಸವಾದಿ ಶರಣರ ವಚನಗಳನ್ನು ನೀವು ಕಂಠಪಾಠ ಮಾಡಿದ್ದೀರೋ ? ಎಂದು ಪ್ರೇಕ್ಷಕರನ್ನು ಕೇಳುತ್ತಲೇ ಸಭೆಯಲ್ಲಿದ್ದವರ ಕಡೆ ನೋಡಿದರು.

ಹೇಳ್ರೀ...ನಿಮಗೆ ವಚನಗಳು ಬರುತ್ತವೋ ? ಕಂಠ ಪಾಠ ಮಾಡಿದ್ದೀರೇನ್ರೀ ...? ಎಂದು ಪ್ರಶ್ನಿಸುತ್ತಿದ್ದಂತೆಯೇ ಸಭೆಯಲ್ಲಿದ್ದ ಸಚಿವರು, ಶಾಸಕರು, "ಇಲ್ಲ ಸಾರ್‌..." ಎಂದು ತಲೆತಗ್ಗಿಸಿಕೊಳ್ಳುತ್ತಿದ್ದರು.

ತರಗತಿಯ ಕೋಣೆಯಲ್ಲಿ ಪಾಠ ನಡೆದಂತೆ ಬರೋಬ್ಬರಿ 40 ನಿಮಿಷದ ಮುಖ್ಯಮಂತ್ರಿ ಭಾಷಣದ ಭಾಗಶಃ ಬಸವಾದಿ ಶರಣರ ವಚನ, ತಮ್ಮ ಬಾಲ್ಯದ ಬೆಳವಣಿಯ ಸುತ್ತಲೇ ಗಿರಕಿ ಹೊಡೆದಿತ್ತು. ಕೊನೆಗೂ ಎಚ್ಚೆತ್ತ ಮುಖ್ಯಮಂತ್ರಿ, ಕಾರ್ಯಕ್ರಮದ ವೇದಿಕೆ ಕಡೆ ನೋಡಿ; " ಕ್ರೈಸ್ತ ಸಮುದಾಯ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ" ಎಂದು ಹೇಳಿ ಮಾತು ಮುಗಿಸಿದರು.

ದೇವಸ್ಥಾನ ಕೆಡವಿ ಮಾಯವಾದ ರೆಡ್ಡಿ ಸಾಹೇಬ!

ಈ ರಾಜಕೀಯ ನಾಯಕರು ಚುನಾವಣೆ ಸಂದರ್ಭದಲ್ಲಿ ಏನು ಬೇಕಾದರೂ ಹೇಳಿ ಬಿಡ್ತಾರೆ. ಗೋಲ್ಗುಂಬಜನ್ನೇ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಾಲಿ ಜನಾರ್ದನ ರೆಡ್ಡಿ ಪ್ರಚಾರದ ವೇಳೆ ಕ್ಷೇತ್ರದ ಭೀಮನೂರು ಗ್ರಾಮಕ್ಕೂ ಹೋಗಿದ್ದರು. ಗ್ರಾಮದ ಶಿಥಿಲಗೊಂಡ ಆಂಜನೇಯ ದೇವಸ್ಥಾನ ನೋಡಿದ್ದ ರೆಡ್ಡಿ, ಇದನ್ನು ತೆರವು ಮಾಡಿ, ಹೊಸದಾಗಿ ಕಟ್ಟಿ, ಎಷ್ಟು ಖರ್ಚಾದರೂ ನಾನು ಕೊಡುತ್ತೇನೆ ಎಂದು ಹೇಳಿದ್ದರು.

ಹೀಗೆ ಹೇಳಿದ ಜನಾರ್ದನ ರೆಡ್ಡಿ ಚುನಾವಣೆಯಲ್ಲಿ ಗೆದ್ದುಬಿಟ್ಟರು. ಶಾಸಕರೂ ಆದರು. ಭೀಮನೂರು ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತೆ ಆಯಿತು. ಹೇಗೂ ಗೆದ್ದಿದ್ದಾರೆ. ನಮ್ಮೂರ ದೇವಸ್ಥಾನಕ್ಕೆ ದುಡ್ಡು ಕೊಟ್ಟೇ ಕೊಡುತ್ತಾರೆ ಎಂದು ಚೆನ್ನಾಗಿಯೇ ಇದ್ದ ದೇವಸ್ಥಾನ ತೆರವು ಮಾಡಿಯೇ ಬಿಟ್ಟರು. ಗೋಪುರ ತೆಗೆದು, ಹೊಸಗೋಪುರ ನಿರ್ಮಾಣಕ್ಕೆ ಮುಂದಾದರು. ದೇವಸ್ಥಾನ ನಿರ್ಮಾಣಕ್ಕಾಗಿ ಕೊಟ್ಟ ಭವರಸೆಯಂತೆ ಹಣ ನೀಡುತ್ತಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡುವುದಕ್ಕೆ ಶತಾಯಗತಾಯ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಆದರೆ, ಈವರೆಗೂ ಆಗಿಯೇ ಇಲ್ಲ. ಪರಿಣಾಮ ಗ್ರಾಮದಲ್ಲಿನ ದೇವಸ್ಥಾನ ಪಾಳುಬಿದ್ದಂತೆ ಆಗಿದೆ. ಈಗ ನಿತ್ಯ ದರ್ಶನ ನೀಡುತ್ತಿದ್ದ ದೇವರ ದೇವಸ್ಥಾನವೂ ಇಲ್ಲ. ದೇವಸ್ಥಾನ ಕಟ್ಟಿಸಿಕೊಡುತ್ತೇನೆ ಎಂದಿದ್ದ ರೆಡ್ಡಿ ದರ್ಶನವೂ ಗ್ರಾಮಸ್ಥರಿಗೆ ಇಲ್ಲದಂತಾಗಿದೆ.

ಒಂದ್‌ ಕಾಲು ಒಳಗಾ, ಒಂದ್‌ ಕಾಲು ಹೊರಗಿಟ್ಟ ಸಾಕಾಗೇದ...!

ಮೊನ್ನೆ ಶುಕ್ರವಾರ ಯಾದಗಿರಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ.) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆದಿತ್ತು. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಗೆ ಎಲ್ಲ ಘಟಾನುಘಟಿಗಳು ಬಂದಿದ್ದರು. ನಿಗದಿಯಂತೆ, ಸಚಿವರು, ವಿಪಕ್ಷ ನಾಯಕ, ಶಾಸಕರು, ಅಧಿಕಾರಿಗಳ ಹೆಸರಿನ (ನೇಮ್‌ ಪ್ಲೇಟ್‌) ಬಳಿ ವೇದಿಕೆ ಮೇಲಿನ ಟೇಬಲ್‌ಗೆ ಹೊಂದಿಕೊಂಡಂತೆ ಆಸೀನರಾದರು. ಆದರೆ ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ್‌ ಅವರು ಟೇಬಲ್‌ನ ಅಂಚಿಗೆ ಅರ್ಧಮರ್ಧ ಸಾವರಿಸಿಕೊಂಡು ಕುಳಿತರು.

ಆದರೆ, ಅವರಿಗೆ ನೀಡಲಾಗಿದ್ದ ಪುಸ್ತಿಕೆಯ ಹಾಗೂ ವಿವರಗಳ ಪರಿಶೀಲನೆ ವೇಳೆ ಇದು ಅವರಿಗೆ ತೊಡಕಾಗುತ್ತಿತ್ತು. ಒಂದು ಕಾಲು ಟೇಬಲ್‌ ಒಳಗೆ, ಒಂದು ಕಾಲು ಟೇಬಲ್‌ನ ಹೊರಗೆ ಇಟ್ಟಿದ್ದ ಅವರು, ಸರಿಯಾಗಿ ಕೂಡಲು ಪಡಿಪಾಟಲು ಪಡುತ್ತಿದ್ದರು. ತಮಗಾದ ಇಂತಹ (ಅ)ವ್ಯವಸ್ಥೆಯಿಂದ ತುಸು ಕೋಪಗೊಂಡ ಬಿ.ಜಿ.ಪಾಟೀಲರು, "ಡೀಸಿಯವ್ರೇ ಏನಿದು ಹೀಗೆ? ನಮಗೆ ನೆಕ್ಸ್ಟ್‌ಟೈಮ್‌ ಕೆಳಗಡೆ ಕೂರಲು ಹೇಳಿಬಿಡಿ... ಒಂದು ಕಾಲು ಹೊರಗಿಟ್ಟು, ಒಂದು ಕಾಲು ಒಳಗಿಟ್ಟು ಕೂತು ಕೂತು ಸಾಕಾಗೇದ..." ಎಂದೆನ್ನುತ್ತಾ ತಮ್ಮ ಕೋಪ-ತಾಪ ಪ್ರದರ್ಶಿಸಿದರು. ಇದಕ್ಕೆ ಸಚಿವ ದರ್ಶನಾಪುರ, ಬಿ.ಜಿ.ಪಾಟೀಲರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಅಲ್ಲಿಯೇ ಇದ್ದ ಸಿಬ್ಬಂದಿ ತಕ್ಷಣವೇ ಟೇಬಲ್‌ವೊಂದನ್ನು ತಂದಿಟ್ಟರು. ಅದೂ ವೇದಿಕೆ ಮೇಲಿನ ಟೇಬಲ್‌ಗಿಂತ ತುಸು ಚಿಕ್ಕದಾಗಿದ್ದರಿಂದ ಅತ್ತಿತ್ತ ಹೊರಳಾಡುತ್ತ ಪಾಟೀಲರು, ನೇಮ್‌ಪ್ಲೇಟ್‌ ಕಾಲು ಬಳಿ ಇಟ್ಟುಕೊಂಡು ಹೇಗೋ ಹೊಂದಿಕೊಂಡು-ಸಹಿಸಿಕೊಂಡು ಕುಳಿತರು.

ಇದಿಷ್ಟೆ ಆಗಿದ್ದರೆ ಓಕೆ ಆಗಿತ್ತು. ಆದರೆ ಈ ಸಭೆ ಕುರಿತ ಸುದ್ದಿ-ಫೋಟೋಗಳಲ್ಲೂ ಪಾಪ ಬಿ.ಜಿ.ಪಾಟೀಲರ ಫೋಟೋಗೂ ಕೊಕ್ಕೆ ಹಾಕಲಾಗಿತ್ತು! ಫೋಟೋ ಫ್ರೇಮ್‌ನಲ್ಲಿ ಕೊನೆಗೆ ಕುಳಿತಿದ್ದ ಹತ್ತು ಜನರಲ್ಲಿ ಪಾಟೀಲರು ಕಾಣಲೇ ಇಲ್ಲ. ಇದನ್ನು ಪಾಟೀಲರು ಹೇಗೆ ಸಹಿಸಬೇಕು?

-ಮಂಜುನಾಥ ಕೆ.ಎಂ.

-ಸೋಮರೆಡ್ಡಿ ಅಳವಂಡಿ

ಆನಂದ್‌ ಎಂ. ಸೌದಿ

Share this article