ಕನ್ನಡ ರಾಜ್ಯೋತ್ಸವ, ಕರ್ನಾಟಕ ಸಂಭ್ರಮ-50 ಅಭಿಯಾನ

KannadaprabhaNewsNetwork | Updated : Oct 28 2023, 01:17 AM IST

ಸಾರಾಂಶ

ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-೫೦ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ ಸರ್ವರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.
ಹೆಸರಾಯಿತು ಕನ್ನಡ, ಉಸಿರಾಯಿತು ಕನ್ನಡ ಹೆಸರಿನಲ್ಲಿ ವರ್ಷವಿಡೀ ರಾಜ್ಯೋತ್ಸವ ಆಚರಣೆ । ಡೀಸಿ ಶಿಲ್ಪಾನಾಗ್ ಸೂಚನೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-೫೦ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ ಸರ್ವರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಸಂಬಂಧ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸುತ್ತೋಲೆ ಅನುಸಾರ, ‘ಹೆಸರಾಯಿತು ಕರ್ನಾಟಕ’ ‘ಉಸಿರಾಯಿತು ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಕರ್ನಾಟಕ ಸಂಭ್ರಮ-50 ಅಭಿಯಾನದ ಅಂಗವಾಗಿ ನ. 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಧ್ವಜಾರೋಹಣ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾಡಿನ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣರಾಯರು ರಚಿಸಿರುವ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ಅವರ ‘ಎಲ್ಲಾದರು ಇರು, ಎಂತಾದರು ಇರು’, ದ.ರಾ. ಬೇಂದ್ರೆ ಯವರ ‘ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕ ಅವರ ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ಹಾಗೂ ಚನ್ನವೀರಕಣವಿ ಅವರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಗೀತೆಗಳನ್ನು ಹಾಡುವ ಮೂಲಕ ನುಡಿನಮನ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ನ. 1 ರಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ದತೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮವನ್ನು ಜಿಲ್ಲೆಯಲ್ಲೂ ಯಶಸ್ವಿಯಾಗಿ ಕೈಗೊಳ್ಳಲು ಸಂಘಟನೆಗಳ ಮುಖಂಡರು ಅಗತ್ಯ ಸಲಹೆ, ಅಭಿಪ್ರಾಯ ನೀಡಬೇಕೆಂದು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಕನ್ನಡ ಗೀತ ಗಾಯನ ಕಾರ್ಯಕ್ರಮಕ್ಕೆ ಹೆಚ್ಚು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು. ನವೆಂಬರ್ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳು ಮಾತ್ರ ಪ್ರದರ್ಶನಗೊಳ್ಳಬೇಕು. ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡ ಜಾಗೃತಿ ಮೂಡಿಸಬೇಕು. ಬ್ಯಾಂಕುಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಾಗಬೇಕು. ರಾಜ್ಯೋತ್ಸವ ದಿನದಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ, ಜೈ ಭುವನೇಶ್ವರಿ ಪುತ್ಥಳಿಗೆ ಮಾಲಾರ್ಪಣೆ ಮಾಡಬೇಕು ಎಂಬುದು ಸೇರಿದಂತೆ ಇತರೆ ಸಲಹೆಗಳನ್ನು ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಭೆಯಲ್ಲಿಯೇ ಇದ್ದ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿ, ಎಲ್ಲಾ ಬ್ಯಾಂಕುಗಳಲ್ಲಿ ನವೆಂಬರ್ ೧ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದರು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ಸಲಹೆಗಳನ್ನು ಆಧರಿಸಿ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಬಸವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಮುಖಂಡರಾದ ಸಿ.ಎಂ. ಮಹದೇವಶೆಟ್ಟಿ, ಗು. ಪುರುಷೋತ್ತಮ್, ಸಿ.ಎಂ. ಕೃಷ್ಣಮೂರ್ತಿ, ಸಿ.ಕೆ. ಮಂಜುನಾಥ್, ಸಿ.ಎಂ. ನರಸಿಂಹಮೂರ್ತಿ, ಚಾ.ಗು. ನಾಗರಾಜು, ಪಣ್ಯದಹುಂಡಿ ರಾಜು, ಕೆ.ಆರ್. ನಾರಾಯಣ, ಶಿವಣ್ಣ, ಸಿದ್ದಶೆಟ್ಟಿ, ಘಟಂ ಕೃಷ್ಣ, ಚಾ.ಹ. ಶಿವರಾಜು, ಎಸ್. ಮಹೇಶ್‌ಗೌಡ, ಮಲ್ಲಣ್ಣ, ಬಂಗಾರ ನಾಯಕ, ಶಿವಸ್ವಾಮಿ, ಇತರೆ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ----------- 27ಸಿಎಚ್‌ಎನ್‌55 ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮದ ವಿಷಯವಾಗಿ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ಸಭೆಯನ್ನು ನಡೆಸಿದರು. ----------

Share this article