ಲೋಕಸಭಾ ಚುನಾವಣೆಗೆ ಸಿದ್ಧತೆ ಕೈಗೊಂಡಿರುವ ರಾಜ್ಯ ಬಿಜೆಪಿ ಫೆ.3ರಿಂದ ಮೂರು ದಿನಗಳ ಕಾಲ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ ಹಾಗೂ ಫೆಬ್ರವರಿಯಲ್ಲಿ ‘ನಾರಿ ಶಕ್ತಿ ವಂದನಾ’ ಸಮಾವೇಶಗಳನ್ನು ನಡೆಸುವ ತೀರ್ಮಾನವನ್ನು ಕೈಗೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆಗೆ ಸಿದ್ಧತೆ ಕೈಗೊಂಡಿರುವ ರಾಜ್ಯ ಬಿಜೆಪಿ ಫೆ.3ರಿಂದ ಮೂರು ದಿನಗಳ ಕಾಲ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ ಹಾಗೂ ಫೆಬ್ರವರಿಯಲ್ಲಿ ‘ನಾರಿ ಶಕ್ತಿ ವಂದನಾ’ ಸಮಾವೇಶಗಳನ್ನು ನಡೆಸುವ ತೀರ್ಮಾನವನ್ನು ಕೈಗೊಂಡಿದೆ.
ಶನಿವಾರ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದೇ ವೇಳೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೊಧಿ, ದಲಿತ ವಿರೋಧಿ ನೀತಿಯನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಶಾಸಕ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿದ್ದು, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸಭೆಯನ್ನು ಉದ್ಘಾಟಿಸಿದರು.
ಸಭೆಯಲ್ಲಿ ಸುಮಾರು 800 ಮಂದಿ ಭಾಗಿಯಾಗಿದ್ದು, ಶೇ.85ಕ್ಕೂ ಹೆಚ್ಚು ಹಾಜರಾತಿಯೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಸಂಸದರು, ಶಾಸಕರು, ಮಾಜಿ ಸಚಿವರು, ರಾಜ್ಯ ಪದಾಧಿಕಾರಿಗಳು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಭಾಗವಹಿಸಿದ್ದರು.
ಲೋಕಸಭೆ ಚುನಾವಣೆವರೆಗೆ ಪ್ರತಿಯೊಬ್ಬ ಪದಾಧಿಕಾರಿಗಳು ಶ್ರಮಿಸಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ತರಲು ಪಣ ತೊಡಲಾಯಿತು.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರು, ಸ್ವಸಹಾಯ ಸಂಘಗಳನ್ನು ಭೇಟಿಯಾಗಿ ಅವರ ತಾಲೂಕು, ಜಿಲ್ಲಾ ಮಟ್ಟದ ‘ನಾರಿ ಶಕ್ತಿ ವಂದನಾ’ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಫೆ.3ರಿಂದ 5ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ ನಡೆಸಲು ನಿರ್ಧರಿಸಲಾಗಿದೆ.
ಈ ವೇಳೆ ಕೇಂದ್ರದ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರು, ಸ್ವಸಹಾಯ ಸಂಘಗಳನ್ನು ಭೇಟಿ ಮಾಡಿ ಅವರ ತಾಲ್ಲೂಕು, ಜಿಲ್ಲಾ ಮಟ್ಟದ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ, ಭಾರತಿ ಮುಗ್ದುಂ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ನಾರಿ ಶಕ್ತಿ ವಂದನಾ ಎಂಬ ಸಮಾವೇಶವನ್ನು ಫೆ.25ರೊಳಗೆ ನಡೆಸಲು ನಿರ್ಣಯಿಸಲಾಗಿದೆ ಎಂದು ವಿವರಿಸಿದರು.
ಪ್ರತಿ ಬೂತ್ ಮಟ್ಟದಲ್ಲಿ ಒಂದು ಅಥವಾ ಎರಡು ಕಡೆ ಗೋಡೆಬರಹ ಬರೆಯಲು ನಿಶ್ಚಯಿಸಲಾಗಿದೆ. ‘ಮೂರನೇ ಬಾರಿಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ, ಮತ್ತೊಮ್ಮೆ ಮೋದಿ’ ಎಂಬ ಗೋಡೆಬರಹ ಬರೆಸಲಾಗುವುದು.
ಇದಕ್ಕಾಗಿ ತಂಡ ರಚಿಸಿದ್ದು, ನಂದೀಶ್ ರೆಡ್ಡಿ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಡಾ.ಶೈಲೇಂದ್ರ ಬೆಲ್ದಾಳೆ, ಮಹೇಂದ್ರ ಕವತಾಳ, ಹರಿಕೃಷ್ಣ ಸಹ ಸಂಚಾಲಕರಾಗಿರುವರು.
ಜ.30ರಂದು ಎಲ್ಲ ಪದಾಧಿಕಾರಿಗಳು ಇದನ್ನು ಆಂದೋಲನವಾಗಿ ನಡೆಸಲು ಸೂಚಿಸಲಾಗಿದೆ. ರಾಜ್ಯದಲ್ಲಿ 58 ಸಾವಿರ ಬೂತ್‌ಗಳಿದ್ದು, ಹೊಸ ಮತದಾರರ ಸೇರ್ಪಡೆಯಿಂದ ಇನ್ನೂ ಕೆಲವು ಬೂತ್‌ಗಳ ಸೇರ್ಪಡೆ ಸಾಧ್ಯತೆ ಇದೆ. ಅಲ್ಲಿ ಸಹ ಬೂತ್‌ಗಳನ್ನು ಗುರುತಿಸಿ ಗೋಡೆ ಬರಹ ಬರೆಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಕೆ.ಸಿ.ರಾಮಮೂರ್ತಿ ಉಪಸ್ಥಿತರಿದ್ದರು.
ಸಭೆಯಲ್ಲಿ ಎರಡು ನಿರ್ಣಯ ಅಂಗೀಕಾರ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲಾಗಿದೆ.
550 ವರ್ಷಗಳ ಭಾರತೀಯರ, ಹಿಂದೂ ಸಮಾಜದ ಬಹುನಿರೀಕ್ಷಿತ ಬೇಡಿಕೆ ಈಡೇರಿಸಿ ಮಂದಿರ ಲೋಕಾರ್ಪಣೆ ಮಾಡಿದ ಪ್ರಧಾನಿ ಅವರನ್ನು ಅಭಿನಂದಿಸಲಾಗಿದೆ. ಸರ್ವಾನುಮತದಿಂದ ಇದನ್ನು ಅಂಗೀಕರಿಸಲಾಗಿದೆ ಎಂದು ವಿವರಿಸಿದರು.
ಇನ್ನು, ಕಾಂಗ್ರೆಸ್ ಸರ್ಕಾರದ ರೈತವಿರೋಧಿ, ದಲಿತ ವಿರೋಧಿ ನೀತಿ ಖಂಡಿಸಿ ನಿರ್ಣಯ ಅಂಗೀಕರಿಸಿದ್ದೇವೆ. ದಲಿತ ಮತ್ತು ಶೋಷಿತ ವರ್ಗಕ್ಕೆ ಮೀಸಲಿಟ್ಟ 11 ಸಾವಿರ ಕೋಟಿ ರು.ಗಿಂತ ಹೆಚ್ಚು ಹಣವನ್ನು ಗ್ಯಾರಂಟಿಗಾಗಿ ಉಪಯೋಗ ಮಾಡಿ ದಲಿತ ಮತ್ತು ಶೋಷಿತರಿಗೆ ವಂಚಿಸಿದ್ದನ್ನು ಖಂಡಿಸಲಾಗಿದೆ.
ಈ ನಿರ್ಧಾರದ ವಿರುದ್ಧ ಖಂಡನಾ ನಿರ್ಣಯ ಅನುಮೋದಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದರು.