;Resize=(412,232))
ಬೆಂಗಳೂರು : ಬಹು ನಿರೀಕ್ಷಿತ ಎರಡನೇ ಹಂತದ ಸಚಿವ ಸಂಪುಟ ರಚನೆ ಕುರಿತು ರಾಜ್ಯ ನಾಯಕರು ಮುಂದಿನ ವಾರ ದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಮಾಸಾಂತ್ಯಕ್ಕೆ ಸಂಪುಟ ರಚನೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ವಾಸ್ತವವಾಗಿ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಜೂ. 21ಕ್ಕೆ ಪದಗ್ರಹಣ ಮಾಡಲಿದ್ದು, ಇದಾದ ನಂತರವೇ ಸಂಪುಟ ವಿಸ್ತರಣೆ ವಿಚಾರ ರಂಗಕ್ಕೆ ಬರಲಿದೆ. ಇದಾದ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುವ ಸಾಧ್ಯತೆಯಿದೆ.
ಈ ಪದಗ್ರಹಣ ಸಮಾರಂಭದ ನಂತರ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೇವಾಲಾ ಸೇರಿ ಪ್ರಮುಖ ನಾಯಕರು ದೆಹಲಿಯಲ್ಲಿ ಲಭ್ಯವಿರುವ ದಿನಾಂಕ ನೋಡಿಕೊಂಡು ದೆಹಲಿ ಭೇಟಿ ನಿಗದಿಯಾಗಲಿದೆ. ಮೂಲಗಳ ಪ್ರಕಾರ, ಜೂ. 23 ಅಥವಾ 24ರಂದು ಈ ನಾಯಕರು ದೆಹಲಿಗೆ ತೆರಳುವ ಸಾಧ್ಯತೆಯಿದೆ.
ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳಿಗೆ ಪ್ರಾದೇಶಿಕ, ಧಾರ್ಮಿಕ ಹಾಗೂ ಜಾತಿ ಸಮೀಕರಣದ ಆಧಾರದ ಮೇಲೆ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಈಗಾಗಲೇ ಪ್ರಾಥಮಿಕ ಚರ್ಚೆ ನಡೆದಿದೆ. ಹೀಗಾಗಿ ವರಿಷ್ಠರ ಭೇಟಿ ವೇಳೆ ಒಂದೆರಡು ದಿನದಲ್ಲೇ ಪಟ್ಟಿ ಅಂತಿಮ ಆಗುವ ಸಾಧ್ಯತೆಯಿದೆ. ಹೀಗಾದರೆ ಮಾಸಾಂತ್ಯದ ಒಳಗೆ ಅಂದರೆ ಬಹುತೇಕ ಜೂ. 25 ಅಥವಾ 26ರಂದು ಸಂಪುಟ ಭರ್ತಿ ಆಗಲಿದ್ದು, ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಎರಡನೇ ಹಂತದ ಸಂಪುಟ ರಚನೆ ವೇಳೆ ಶತಾಯಗತಾಯ ಸ್ಥಾನ ಗಿಟ್ಟಿಸಲು ಸಚಿವಾಕಾಂಕ್ಷಿಗಳು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಲಾಬಿಗೆ ಯತ್ನಿಸುತ್ತಿದ್ದಾರೆ.
ಜತೆಗೆ ವಿವಿಧ ಸಮುದಾಯಗಳ ಮಠಾಧೀಶರು, ಬೆಂಬಲಿಗರು ಸುದ್ದಿಗೋಷ್ಠಿಗಳು ನಡೆಸುತ್ತಿದ್ದು, ಕೆಲವು ಆಕಾಂಕ್ಷಿಗಳ ಬೆಂಬಲಿಗರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ಕಸರತ್ತು ತೀವ್ರಗೊಂಡಿದೆ.==
ಇಂದಿನಿಂದ 3 ದಿನ ‘ಕೈ’ ಶಾಸಕರ ರೆಸಾರ್ಟ್ ವಾಸ
ಬೆಂಗಳೂರು: ವಿಧಾನಪರಿಷತ್‌ನ 7 ಸ್ಥಾನಗಳಿಗೆ ಜೂ.18ರಂದು ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಮಂಗಳವಾರ ಬಿಡದಿಯ ವಂಡರ್ ಲಾ ರೆಸಾರ್ಟ್‌ರೆ ಕರೆದೊಯ್ಯಲು ನಿರ್ಧರಿಸಲಾಗಿದೆ. ಮತದಾನದ ದಿನ ಶಾಸಕರು ನೇರವಾಗಿ ರೆಸಾರ್ಟ್‌ನಿಂದ ಬಂದು ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಮಂಗಳವಾರ ರೆಸಾರ್ಟ್‌ನಲ್ಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.