₹30 ಲಕ್ಷಕ್ಕೆ ತಲಾ 30 ಹುದ್ದೆ ಮಾರಿದ ನಂಜೇಗೌಡ: ಇ.ಡಿ.

KannadaprabhaNewsNetwork |  
Published : Jan 12, 2024, 01:46 AM ISTUpdated : Jan 12, 2024, 10:52 AM IST
ಕಾಂಗ್ರೆಸ್‌ ಶಾಸಕ ನಂಜೇಗೌಡ | Kannada Prabha

ಸಾರಾಂಶ

ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ನೇತೃತ್ವದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ (ಕೋಮುಲ್‌)ದ ನೇಮಕಾತಿ ಸಮಿತಿಯು 30 ಹುದ್ದೆಗಳನ್ನು ತಲಾ 20-30 ಲಕ್ಷ ರು. ಲಂಚಕ್ಕೆ ಮಾರಿಕೊಂಡಿದೆ.

ಪಿಟಿಐ ನವದೆಹಲಿ

ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ನೇತೃತ್ವದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ (ಕೋಮುಲ್‌)ದ ನೇಮಕಾತಿ ಸಮಿತಿಯು 30 ಹುದ್ದೆಗಳನ್ನು ತಲಾ 20-30 ಲಕ್ಷ ರು. ಲಂಚಕ್ಕೆ ಮಾರಿಕೊಂಡಿದೆ. 

ಅಲ್ಲದೆ ನಂಜೇಗೌಡ ಅಧ್ಯಕ್ಷತೆಯ ಭೂಹಂಚಿಕೆ ಸಮಿತಿಯು 150 ಕೋಟಿ ರು. ಮೌಲ್ಯದ 80 ಎಕರೆ ಜಮೀನನ್ನು ಬೋಗಸ್‌ ದಾಖಲೆಗಳನ್ನು ಸೃಷ್ಟಿಸಿ ಅನರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸ್ಫೋಟಕ ಆರೋಪ ಮಾಡಿದೆ. 

ಹುದ್ದೆ ಗಿಟ್ಟಿಸಿದ ಅಭ್ಯರ್ಥಿಗಳು ಕೆಲವು ರಾಜಕಾರಣಿಗಳಿಂದ ಶಿಫಾರಸಾದವರಾಗಿದ್ದಾರೆ. ಈ ಕುರಿತು ಮಾಹಿತಿ ಕೂಡ ಲಭ್ಯವಾಗಿದೆ ಎಂದು ತಿಳಿಸಿದೆ.61 ವರ್ಷದ ಶಾಸಕ ನಂಜೇಗೌಡ ಹಾಗೂ ಅವರ ಜತೆ ನಂಟು ಹೊಂದಿರುವ ವ್ಯಕ್ತಿಗಳ ಮೇಲೆ ಜ.8ರ ಸೋಮವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ, ಆ ದಾಳಿ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. 

ಅದರಲ್ಲಿ ಈ ಮಾಹಿತಿ ಇದೆ. ಕೋಮುಲ್‌ ಸಿಬ್ಬಂದಿ ನೇಮಕಾತಿ ಹಾಗೂ 150 ಕೋಟಿ ರು. ಮೌಲ್ಯದ ಸರ್ಕಾರಿ ಭೂಮಿ ಅಕ್ರಮ ಹಂಚಿಕೆಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಸಂಬಂಧ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ.

ಜೊತೆಗೆ ದಾಳಿ ವೇಳೆ 25 ಲಕ್ಷ ರು.ನಗದು, 50 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಚರ ಮತ್ತು ಸ್ಥಿರಾಸ್ತಿ, ಅಕ್ರಮದ ಮಾಹಿತಿ ನೀಡುವ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಹೇಳಿದೆ.

ಕೋಮುಲ್‌ ಹಗರಣ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿನ ನೇಮಕಾತಿ ಹಗರಣವೊಂದನ್ನು ತಾನು ಬಯಲಿಗೆ ಎಳೆದಿರುವುದಾಗಿ ಇ.ಡಿ. ಹೇಳಿಕೊಂಡಿದೆ.ನಂಜೇಗೌಡ ಅಧ್ಯಕ್ಷತೆಯ ಹಾಗೂ ಇತರೆ ನಾಲ್ಕು ಮಂದಿ ಸದಸ್ಯರಾಗಿರುವ ಕೋಮುಲ್‌ ನೇಮಕಾತಿ ಸಮಿತಿಯು ಸಂದರ್ಶನ ಪ್ರಕ್ರಿಯೆಯನ್ನೇ ಗಾಳಿಗೆ ತೂರಿದೆ. 

ಅಂತಿಮ ಆಯ್ಕೆಪಟ್ಟಿಯನ್ನೇ ಪ್ರಕಟಿಸದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಲಾಗಿದೆ. ಅವರನ್ನು ತರಬೇತಿಗೂ ಕಳುಹಿಸಲಾಗಿದೆ ಎಂದು ಇ.ಡಿ. ದೂರಿದೆ.ಪ್ರತಿ ಹುದ್ದೆಯನ್ನೂ ತಲಾ 20ರಿಂದ 30 ಲಕ್ಷ ರು.ನಂತೆ ಮಾರಿಕೊಳ್ಳಲಾಗಿದೆ ಎಂದು ಕೋಮುಲ್‌ ನಿರ್ದೇಶಕರು ಹಾಗೂ ನೇಮಕಾತಿ ಸಮಿತಿಯ ಸದಸ್ಯರೇ ಶೋಧ ಕಾರ್ಯಾಚರಣೆ ವೇಳೆ ಒಪ್ಪಿಕೊಂಡಿದ್ದಾರೆ. 

ನೇಮಕಾತಿ ಸಮಿತಿಯ ಅಧ್ಯಕ್ಷರಾಗಿದ್ದ ನಂಜೇಗೌಡ ಅವರು ಹುದ್ದೆಗಳ ಮಾರಾಟ ಮತ್ತು ಸಂದರ್ಶನದ ಅಂಕ ತಿರುಚುವಲ್ಲಿ ಸಕ್ರಿಯರಾಗಿ ಹಾಗೂ ನೇರವಾಗಿ ಭಾಗಿಯಾಗಿದ್ದಾರೆ ಎಂದು ತಿಳಿಸಿದೆ.

₹150 ಕೋಟಿ ಭೂಹಗರಣ: ಮಾಲೂರು ಭೂ ಹಂಚಿಕೆ ಸಮಿತಿಯ ಅಧ್ಯಕ್ಷರಾಗಿದ್ದ ನಂಜೇಗೌಡ ಅವರು ಸಮಿತಿಯ ಇನ್ನಿತರೆ ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳ ಜತೆ ಶಾಮೀಲಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. 

150 ಕೋಟಿ ರು. ಮೌಲ್ಯದ 80 ಎಕರೆ ಜಮೀನನ್ನು ಒಂದೇ ತಿಂಗಳಲ್ಲಿ ಕೇವಲ 4 ಸಭೆ ನಡೆಸಿ ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದಾರೆ. ನಕಲಿ ಹಾಗೂ ಬೋಗಸ್‌ ದಾಖಲೆಗಳನ್ನು ಬಳಸಿ ಈ ನಕಲಿ ಫಲಾನುಭವಿಗಳನ್ನು ಸೃಷ್ಟಿಸಲಾಗಿದೆ. 

ಪ್ರಾದೇಶಿಕ ಆಯುಕ್ತರ ಪರಿವೀಕ್ಷಣಾ ವರದಿಯನ್ನು ಆಧರಿಸಿ ಆ ಭೂಹಂಚಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ಇ.ಡಿ. ತಿಳಿಸಿದೆ.ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ದಾಖಲೆಗಳನ್ನು ತಿರುಚಿ ಈ ಅಕ್ರಮ ಭೂ ಮಂಜೂರಾತಿಯನ್ನು ಮಾಡಲಾಗಿದೆ. ಕರ್ನಾಟಕ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಆಧಾರದಲ್ಲಿ ಭೂ ಹಂಚಿಕ ಕುರಿತು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸಿರುವುದಾಗಿ ಹೇಳಿದೆ.

ಏನಿದು ಅವ್ಯವಹಾರ?

  • ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿನ ನೇಮಕಾತಿ ಹಗರಣ ಬಯಲಿಗೆಳೆದ ಇ.ಡಿ.
  • ಮಾಲೂರು ಕಾಂಗ್ರೆಸ್‌ ಶಾಸಕ ನಂಜೇಗೌಡ ಮೇಲೆ ಜ.8ರಂದು ಇ.ಡಿ. ದಾಳಿ
  • ಕೋಮುಲ್‌ ಸಿಬ್ಬಂದಿ ನೇಮಕ, ಅಕ್ರಮ ಭೂಹಂಚಿಕೆ ಹಗರಣದ ಬಗ್ಗೆ ತನಿಖೆ
  • ಕೋಚಿಮುಲ್‌ನ 30 ಹುದ್ದೆಗೆ ಭಾರೀ ಹಣ ಪಡೆದು ನೇಮಕಾತಿ ಮಾಡಿದ್ದು ಪತ್ತೆ
  • ಬೋಗಸ್‌ ದಾಖಲೆ ಸೃಷ್ಟಿಸಿ 150 ಕೋಟಿ ರು. ಮೌಲ್ಯದ ಜಾಗ ಹಂಚಿಕೆ ಬೆಳಕಿಗೆ
  • ದಾಳಿ ವೇಳೆ 25 ಲಕ್ಷ ರು. ನಗದು, ಅಕ್ರಮ ಆಸ್ತಿ ದಾಖಲೆಗಳು ವಶಕ್ಕೆ: ಇಡಿ ಹೇಳಿಕೆ

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ