;Resize=(412,232))
ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್ಐಆರ್)ಯ ಪೂರ್ವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿಂದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವ ಸಾಧ್ಯತೆಯಿದೆ.
ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್ ಪೂರ್ವಭಾವಿ ಪ್ರಕ್ರಿಯೆಗೆ ಚುನಾವಣಾ ಆಯೋಗ ಕಳೆದ ಡಿಸೆಂಬರ್‌ನಲ್ಲಿಯೇ ಚಾಲನೆ ನೀಡಿದೆ. ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಪೂರ್ವಭಾವಿಯಾಗಿ 2002ರ ಮತ್ತು 2025ರ ಮತದಾರರ ಪಟ್ಟಿಯನ್ನು ಹೋಲಿಕೆ ಮಾಡಲಾಗುತ್ತಿದೆ. ರಾಜ್ಯದ 5.547 ಕೋಟಿ ಮತದಾರರ ಪೈಕಿ 3.05 ಕೋಟಿ ಮತದಾರರ ವಿವರಗಳು ತಾಳೆಯಾಗಿವೆ ಎಂದು ತಿಳಿದು ಬಂದಿದೆ.
ಈ ಎಸ್‌ಐಆರ್ ಪೂರ್ವಭಾವಿ ಪ್ರಕ್ರಿಯೆಯ ಭಾಗವಾಗಿ ಮತಗಟ್ಟೆ ಅಧಿಕಾರಿಗಳು ಮನೆ-ಮನೆಗೆ ಹೋಗಿ ಮತದಾರರ ಪಟ್ಟಿ ಪರಿಶೀಲನೆ ನಡೆಸಲಿದ್ದಾರೆ. ಮೃತಪಟ್ಟವರು, ವಿಳಾಸ ಬದಲಾದವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಚೀಟಿ ಹೊಂದಿರುವವರ ವಿವರವನ್ನು ಕಲೆ ಹಾಕುತ್ತಾರೆ. ಅರ್ಹ ದಾಖಲೆಗಳನ್ನು ಒದಗಿಸಿದವರು ಮತದಾರರ ಪಟ್ಟಿಯಲ್ಲಿ ಉಳಿಯುತ್ತಾರೆ. ಇದರಿಂದ ಅರ್ಹ ಮತದಾರರ ಸಂಖ್ಯೆ ಅಂದಾಜು ಸಿಗಲಿದೆ. ಈ ಮಾಸಾಂತ್ಯದ ವೇಳೆ ಎಸ್ಐಆರ್ ಪೂರ್ವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮುಂದಿನ ತಿಂಗಳಿಂದ ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಅಧಿಕೃತವಾಗಿ ಆರಂಭವಾಗುವ ಸಾಧ್ಯತೆಯಿದೆ.
ಎಸ್‌ಐಆರ್ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು. ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆಗದಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ.
ಎಸ್ಐಆರ್ ಎಂದರೆ ವಿಶೇಷ ಮತಪಟ್ಟಿ ಪರಿಷ್ಕರಣೆ. ಇದನ್ನು ಕಾಲಕಾಲಕ್ಕೆ ಕೇಂದ್ರ ಚುನಾವಣಾ ಆಯೋಗ ನಡೆಸುತ್ತದೆ. ಮತಪಟ್ಟಿಗೆ ಅರ್ಹರ ಹೆಸರು ಸೇರ್ಪಡೆ, ಅನರ್ಹರ ಹೆಸರು ರದ್ದತಿ, ಎರೆಡೆರಡು ಕಡೆ ನೋಂದಾಯಿತರಾಗಿದ್ದವರ ಹೆಸರು ಒಂದು ಕಡೆ ರದ್ದು, ಮೃತಪಟ್ಟವರ ಹೆಸರು ರದ್ದು, ವಾಸ ಸ್ಥಳ ಬದಲಾಗಿದ್ದವರ ಹೆಸರು ರದ್ದು ಮೊದಲಾದ ಕಾರಣಕ್ಕೆ ಈ ಪ್ರಕ್ರಿಯೆ ನಡೆಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಿಹಾರದಲ್ಲಿ ಇದನ್ನು ಮೊದಲ ಬಾರಿಗೆ ನಡೆಸಲಾಗಿತ್ತು. ಬಳಿಕ ಎರಡನೇ ಹಂತದಲ್ಲಿ ಇದೀಗ ವಿಧಾನಸಭಾ ಚುನಾವಣೆ ನಡೆಯುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿ 9 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶದಲ್ಲಿ ಇದೇ ಪ್ರಕ್ರಿಯೆ ನಡೆಸಲಾಗುತ್ತಿದೆ.
ವಿಶೇಷ ಮತಪಟ್ಟಿ ಪರಿಷ್ಕರಣೆ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರದ ಕುತಂತ್ರವಿದೆ. ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿರಿಸಿ ಚುನಾವಣೆ ಗೆಲ್ಲಲು ಬಿಜೆಪಿ ಈ ಪರಿಷ್ಕರಣೆ ನಡೆಸುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ. ಜೊತೆಗೆ ಈ ಪ್ರಕ್ರಿಯೆ ಪ್ರಶ್ನಿಸಿ ಈಗಾಗಲೇ ಹಲವು ರಾಜ್ಯ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಸುಪ್ರೀಂಕೋರ್ಟ್ ಈಗಾಗಲೇ ಈ ಕುರಿತ ವಿಚಾರಣೆ ಆರಂಭಿಸಿದೆ.