ಲೋಕಸಭೆ ಸ್ಪರ್ಧೆ ತಪ್ಪಿಸಿಕೊಳ್ಳಲು ಸಚಿವರಿಂದ ತ್ರಿವಳಿ ಡಿಸಿಎಂ ತಂತ್ರ!

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಲೋಕಸಭೆ ಸ್ಫರ್ಧೆಯಿಂದ ತಪ್ಪಿಸಲು ಕಾಂಗ್ರೆಸ್‌ ಸಚಿವರು ಮೂವರು ಡಿಸಿಎಂಗಳು ಎಂದು ತಂತ್ರವನ್ನು ರೂಪಿಸಿದ್ದಾರೆ. ಈ ಮೂಲಕ ಲಿಂಗಾಯತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಗಮನಕ್ಕೆ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಗೆ ಸಚಿವರನ್ನು ಕಣಕ್ಕೆ ಇಳಿಸಬೇಕು ಎಂಬ ಚರ್ಚೆಗಳ ಬೆನ್ನಲ್ಲೇ ಇದೀಗ ಮತ್ತೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರ ಕಾಂಗ್ರೆಸ್‌ನಲ್ಲಿ ಮುನ್ನೆಲೆಗೆ ಬಂದಿದೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ತಡರಾತ್ರಿ ಊಟದ ನೆಪದಲ್ಲಿ ಸಭೆ ಸೇರಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿದ್ದು, ಈ ವೇಳೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂದು ಹೈಕಮಾಂಡ್‌ ಮೇಲೆ ಮತ್ತೆ ಒತ್ತಡ ಸೃಷ್ಟಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ.

ಮೂಲಗಳ ಪ್ರಕಾರ ಈಗ ಮತ್ತೆ ಡಿಸಿಎಂ ಪದವಿ ಸೃಷ್ಟಿ ಚರ್ಚೆ ಹುಟ್ಟುಹಾಕುವುದರ ಹಿಂದೆ ಎರಡು ಉದ್ದೇಶಗಳಿವೆ. 1- ಲೋಕಸಭಾ ಚುನಾ‍ವಣೆಯಲ್ಲಿ ಸಚಿವರನ್ನು ಕಣಕ್ಕೆ ಇಳಿಸಬೇಕು ಎಂದು ರಾಜ್ಯ ನಾಯಕತ್ವ ಹೈಕಮಾಂಡ್‌ ಮೂಲಕ ಹೇಳಿಸುವ ಗುಮಾನಿ ಇರುವ ಕಾರಣ ನಾಯಕತ್ವಕ್ಕೆ ಈ ಮೂಲಕ ತಿರುಗೇಟು ನೀಡುವುದು.

2- ಹಾಲಿ ಇರುವ ಏಕೈಕ ಉಪ ಮುಖ್ಯಮಂತ್ರಿ ಹುದ್ದೆಯ ಮಹತ್ವವನ್ನು ಕಡಿಮೆ ಮಾಡುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ನಾಗಾಲೋಟಕ್ಕೆ ಬ್ರೇಕ್‌ ಹಾಕುವ ಪ್ರಯತ್ನ ನಡೆಸುವುದು.

ಈ ಗುರಿ ಸಾಧನೆಗೆ ಹೈಕಮಾಂಡ್‌ ಮುಂದೆ ಡಿಸಿಎಂ ಹುದ್ದೆ ಸೃಷ್ಟಿಯ ಒತ್ತಡವನ್ನು ತೀವ್ರಗೊಳಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಎನ್ನಲಾಗಿದೆ. ಇಷ್ಟಕ್ಕೂ ಲೋಕಸಭಾ ಚುನಾವಣೆ ಸಮೀಪಿಸಿರುವ ಈ ಹಂತದಲ್ಲಿ ಡಿಸಿಎಂ ಹುದ್ದೆ ಅಗತ್ಯ ಏನಿದೆ ಎಂಬ ಪ್ರಶ್ನೆ ಮುಂದಾದರೆ ಅಯೋಧ್ಯೆಯ ರಾಮಮಂದಿರವನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸಿರುವ ಪ್ರಚಾರಾಂದೋಲನಕ್ಕೆ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗ ಮಾರುಹೋಗದಂತೆ ತಡೆಯಲು ಡಿಸಿಎಂ ಹುದ್ದೆ ಸೃಷ್ಟಿ ಸದ್ಯಕ್ಕೆ ಉತ್ತಮ ತಂತ್ರ ಎಂದು ಬಿಂಬಿಸಲು ಸಭೆಯಲ್ಲಿ ಚರ್ಚೆಯಾಯಿತು ಎನ್ನಲಾಗಿದೆ.

ವಿಧಾನಸಭೆ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಅಲ್ಪಸಂಖ್ಯಾತ, ಲಿಂಗಾಯತ ಮತ್ತು ನಾಯಕ ಸಮುದಾಯದಿಂದ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು.

ಈ ಸಮುದಾಯಗಳನ್ನು ಪಕ್ಷದೊಂದಿಗೆ ಹಿಡಿದಿಟ್ಟುಕೊಳ್ಳಲು ಸದರಿ ಸಮುದಾಯಕ್ಕೆ ಪ್ರಾಮುಖ್ಯತೆಯನ್ನು ಕಾಂಗ್ರೆಸ್‌ ನೀಡುತ್ತದೆ ಎಂಬ ಸಂದೇಶ ರವಾನಿಸಲು ಡಿಸಿಎಂ ಹುದ್ದೆ ಸೃಷ್ಟಿ ಸರಿಯಾದ ಮಾರ್ಗ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎನ್ನಲಾಗಿದೆ.

ರಾಮಮಂದಿರ ಉದ್ಘಾಟನೆ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ 2024ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಸಚಿವರನ್ನು ಕಣಕ್ಕೆ ಇಳಿಸುವ ತಂತ್ರಗಾರಿಕೆ ಸೂಕ್ತ ಎಂದು ಪಕ್ಷದ ಒಂದು ವರ್ಗ ಹೈಕಮಾಂಡ್‌ಗೆ ಪರೋಕ್ಷವಾಗಿ ತಿಳಿಸಿದೆ ಎಂಬ ಗುಮಾನಿ ಕಾಂಗ್ರೆಸ್‌ ವಲಯದಲ್ಲಿ ಮೂಡಿದೆ.

ಆದರೆ, ಸಚಿವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿಯಿಲ್ಲ. ಹೀಗಾಗಿ ತಮ್ಮನ್ನು ಲೋಕಸಭೆ ಚುನಾವಣೆ ಕಣಕ್ಕೆ ಇಳಿಸುವ ಪ್ರಯತ್ನಕ್ಕೆ ಬದಲಾಗಿ ಡಿಸಿಎಂ ಹುದ್ದೆ ಸೃಷ್ಟಿಯನ್ನು ಪ್ರತಿತಂತ್ರವಾಗಿ ಮಂಡಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

Share this article