''ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು - 2 ವರ್ಷದಲ್ಲಿ ಸರ್ಕಾರದ ಸಾಧನೆ ಹತ್ತು ಹಲವು''

‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಮತ್ತು ‘ನುಡಿದಂತೆ ನಡೆಯುತ್ತೇವೆ’ ಎನ್ನುವುದನ್ನೇ ಧ್ಯೇಯವಾಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆ ಹತ್ತು ಹಲವು.

Follow Us

‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಮತ್ತು ‘ನುಡಿದಂತೆ ನಡೆಯುತ್ತೇವೆ’ ಎನ್ನುವುದನ್ನೇ ಧ್ಯೇಯವಾಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆ ಹತ್ತು ಹಲವು.

ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ ಮತ್ತು ಇಲಾಖಾವಾರು ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಜೊತೆ ಜೊತೆಗೇ ರಾಜ್ಯದ ವಿತ್ತೀಯ ಶಿಸ್ತು ಕಾಪಾಡಿಕೊಂಡು ಬರುತ್ತಿರುವುದೇ ಸಿದ್ದರಾಮಯ್ಯ ಸರ್ಕಾರದ ಅತಿದೊಡ್ಡ ಸಾಧನೆ ಎನ್ನುವುದು ತಜ್ಞರ ಅಭಿಪ್ರಾಯ ಮತ್ತು ಮೆಚ್ಚುಗೆ.

ಒಂದೆಡೆ ಹಿಂದಿನ ಸರ್ಕಾರದ ಅವಧಿಯಲ್ಲಿ ಹಳಿ ತಪ್ಪಿದ್ದ ರಾಜ್ಯದ ಆರ್ಥಿಕ ಶಿಸ್ತು, ಬಾಕಿ ಉಳಿದಿದ್ದ ಕೋಟ್ಯಂತರ ರು. ಕಾಮಗಾರಿ ಬಿಲ್‌ಗಳ ಮೊತ್ತ. ಕೇಂದ್ರ ಸರ್ಕಾರದಿಂದ ಬರಬೇಕಿರುವ ರಾಜ್ಯದ ಪಾಲಿನ ತೆರಿಗೆ, ಅನುದಾನದಲ್ಲಿ ಇಳಿಕೆ. ಇದೆಲ್ಲದರ ನಡುವೆ ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವೇ ಇಲ್ಲ, ಜಾರಿ ಮಾಡಿದರೆ ಸರ್ಕಾರ ಪಾಪರ್‌ ಆಗೋದು ಗ್ಯಾರಂಟಿ ಎಂಬ ಪ್ರತಿಪಕ್ಷಗಳ ಟೀಕೆ.

ಇಷ್ಟೆಲ್ಲ ಸವಾಲು, ಟೀಕೆಗಳ ನಡುವೆಯೂ ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರೆಸಿರುವುದು ಇಡೀ ದೇಶದ ಹುಬ್ಬೇರಿಸುವಂತೆ ಮಾಡಿದೆ. ಕಳೆದ ಎರಡು ವರ್ಷಗಳ ಆಡಳಿತದಲ್ಲಿ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿಎಸ್‌ಡಿಪಿಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ಆರ್ಥಿಕ ಶಿಸ್ತು ಪಾಲಿಸಿಕೊಂಡು ಬಂದಿರುವುದು ರಾಜ್ಯ ಸರ್ಕಾರದ ಗಮನಾರ್ಹ ಸಾಧನೆ.

ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಈಗಾಗಲೇ ಸುಮಾರು 90 ಸಾವಿರ ಕೋಟಿ ರು. ಖರ್ಚು ಮಾಡಿರುವ ಸರ್ಕಾರ ಈ ವರ್ಷವೂ 51,034 ಕೋಟಿ ರು. ಅನ್ನು ಬಜೆಟ್‌ನಲ್ಲಿ ಮೀಸಲಿಟ್ಟು ಯೋಜನೆಗಳನ್ನು ಮುಂದುವರೆಸಿದೆ. ಇದರಿಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ವಾರ್ಷಿಕ 50ರಿಂದ 55 ಸಾವಿರ ರು. ಆರ್ಥಿಕ ನೆರವು ನೀಡಲಾಗುತ್ತಿದೆ. ಪರಿಣಾಮ ಅನೇಕ ಕುಟುಂಬಗಳ ಆರ್ಥಿಕ ಶಕ್ತಿಗೆ ಚೇತರಿಕೆ ಸಿಕ್ಕಿದೆ. ಕೊಂಚ ಸ್ಥಿತಿವಂತರ ಆರ್ಥಿಕತೆ ಇನ್ನಷ್ಟು ವೃದ್ಧಿಸುತ್ತಿದೆ. ಅಲ್ಲದೆ, ಜನರಲ್ಲಿ ಕೊಳ್ಳುವ ಶಕ್ತಿಯೂ ಹೆಚ್ಚಾಗಿದೆ. ಇದರ ಪರಿಣಾಮ ತೆರಿಗೆ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೂ ಅನುಕೂಲ ಮಾಡುತ್ತಿದೆ

ಅಭಿವೃದ್ಧಿ ಯೋಜನೆಗಳಿಗೆ ಭರಪೂರ ಅನುದಾನ

ಗ್ಯಾರಂಟಿಗಳ ಯಶಸ್ವಿ ಜಾರಿ ಜೊತೆಗೆ ಎರಡು ವರ್ಷಗಳಲ್ಲಿ ಸುಮಾರು 1 ಲಕ್ಷ ಕೋಟಿ ರು.ಗಳಿಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಯೋಜನೆಗಳನ್ನೂ ಸರ್ಕಾರ ಕೈಗೊಂಡಿದೆ. 2023ರ ಮೇ 20ರಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೊದಲ ಕ್ಯಾಬಿನೆಟ್‌ನಲ್ಲೇ ಕೆಲ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಆ ವರ್ಷದ ಒಂಬತ್ತು ತಿಂಗಳ ಆಡಳಿತದಲ್ಲೇ 21,168 ಕೋಟಿ ರು.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಿತು. ನಂತರ 2024ರಲ್ಲಿ ಕೂಡ ಲೋಕೋಪಯೋಗಿ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಇಲಾಖೆಗಳ ಮೂಲಕ 30 ಸಾವಿರ ಕೋಟಿ ರು. ಮೊತ್ತದ ರಸ್ತೆ, ಚರಂಡಿ, ಸೇತುವೆ ನಿರ್ಮಾಣ/ದುರಸ್ತಿ ಮತ್ತಿತರ ಮೂಲ ಸೌಕರ್ಯ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಿದೆ. ಇವುಗಳಲ್ಲಿ ಕೆಲವು ಪೂರ್ಣಗೊಂಡಿದ್ದು, ಇನ್ನು ಕೆಲವು ಪ್ರಗತಿಯಲ್ಲಿವೆ. 2025ನೇ ಸಾಲಿನ ಬಜೆಟ್‌ನಲ್ಲಿ ಕೂಡ ಅಭಿವೃದ್ಧಿ ಕಾರ್ಯಗಳಿಗೆ 35 ಸಾವಿರ ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಈ ವರ್ಷ ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಹೊಸ ಯೋಜನೆ ಜಾರಿಗೊಳಿಸಿ 8000 ಕೋಟಿ ರು. ಒದಗಿಸಲಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಸಂಪರ್ಕ ಜಾಲ ಅಭಿವೃದ್ಧಿಗೆ 5200 ಕೋಟಿ ರು. ಒದಗಿಸಿದ್ದು, ಅನುಷ್ಠಾನಗೊಳಿಸಲಾಗುತ್ತಿದೆ. ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 2024-25ನೇ ಸಾಲಿನಲ್ಲಿ 8400 ಕೋಟಿ ರು., ಪ್ರಸಕ್ತ ಸಾಲಿನಲ್ಲಿ 6050 ಕೋಟಿ ರು. ಒದಗಿಸಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿ

ಮಿತಿ ಮೀರಿ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿ ಜಾರಿಗೆ ತರಲಾಗಿದೆ. ಅಲ್ಲದೆ, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 7000 ಕೋಟಿ ರು.ಗಳಷ್ಟು ದೊಡ್ಡ ಮೊತ್ತವನ್ನು ಈ ಬಾರಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಪ್ರಾಧಿಕಾರದ ಮೂಲಕ ಬೆಂಗಳೂರಿನ ಆಡಳಿತಕ್ಕೆ ಈವರೆಗೆ ಇದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಬದಲು ಮೂರು ಹೊಸ ಪಾಲಿಕೆಗಳು ರಚನೆಯಾಗುವ ಸಾಧ್ಯತೆ ಇದೆ. ಈ ವರ್ಷಾಂತ್ಯದೊಳಗೆ ಹೊಸ ಪಾಲಿಕೆಗಳನ್ನು ರಚಿಸಿ ಅವುಗಳಿಗೆ ಚುನಾವಣೆಯನ್ನೂ ನಡೆಸುವ ಲೆಕ್ಕಾಚಾರ ಸರ್ಕಾರದ್ದಾಗಿದೆ. ಮುಖ್ಯಮಂತ್ರಿಯವರೇ ಈ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರಿಂದ ಬೆಂಗಳೂರಿನ ಆಡಳಿತ ಸುಧಾರಣೆ ವಿಕೇಂದ್ರೀಕರಣಗೊಳ್ಳಲಿದೆ. ಕಾವೇರಿ 5ನೇ ಹಂತದ ಮೂಲಕ ಹೊಸ 110 ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವ ಸರ್ಕಾರ ಈಗ ಕಾವೇರಿ 6ನೇ ಹಂತದ ಯೋಜನೆಗೂ ಆಲೋಚನೆ ನಡೆಸಿದೆ.

ಅನ್ನದಾತರ ಕಲ್ಯಾಣಕ್ಕೆ ಭಾರಿ ಕೊಡುಗೆ 

ರೈತರ ಕಲ್ಯಾಣ ಉದ್ದೇಶದ ಯೋಜನೆಗಳಿಗೆ ವಿವಿಧ ಇಲಾಖೆಗಳ ಮೂಲಕ ಕಳೆದ ಎರಡು ವರ್ಷಗಳಲ್ಲಿ ಸರ್ಕಾರ 95 ಸಾವಿರ ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ಒದಗಿಸಿದೆ. ಇದರಿಂದ 2024-25ನೇ ಸಾಲಿನಲ್ಲಿ ಕೃಷಿ ವಲಯದಲ್ಲಿ ಶೇ.4ರಷ್ಟು ಬೆಳಗಣಿಗೆ ಸಾಧಿಸಿದೆ. ತಮ್ಮ ಹಿಂದಿನ ಅವಧಿಯ ಸರ್ಕಾರದಲ್ಲಿ 3 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿ ಜನಪ್ರಿಯವಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನೂ ಈ ಅವಧಿಯಲ್ಲೂ ಮುಂದುವರೆಸಿಕೊಂಡು ಬರಲಾಗಿದೆ. ಈ ಯೋಜನೆಗೆ ಕಳೆದ ವರ್ಷ 200 ಕೋಟಿ ರು. ವೆಚ್ಚ ಮಾಡಿದ್ದ ಸರ್ಕಾರ ಈ ಬಾರಿಯೂ 12 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಲು ಸೂಕ್ತ ಅನುದಾನದ ಭರವಸೆ ನೀಡಿದೆ. ಸಮಗ್ರ ಕೃಷಿ ಪದ್ಧತಿ ಜಾರಿಗೆ ಕ್ರಮ. ಕೃಷಿ ಯಾಂತ್ರೀಕರಣ ಕಾರ್ಯಗಳಿಗೆ ರೈತರಿಗೆ ಸಹಾಯಧನ ಒದಗಿಸಲು ಈ ವರ್ಷ 428 ಕೋಟಿ ರು. ಅನುದಾನ ಮೀಸಲು. ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440 ಕೋಟಿ ರು. ಸಹಾಯಧನ ಒದಗಿಸಿದೆ. ರಾಜ್ಯದಲ್ಲಿ ಈಗಾಗಲೇ 6000 ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಿರುವ ಸರ್ಕಾರ ಈ ವರ್ಷ ಇನ್ನೂ 5000 ಘಟಕಗಳ ಸ್ಥಾಪನೆಗೆ ಕ್ರಮ ವಹಿಸಿದೆ. ಶಿಡ್ಲಘಟ್ಟದಲ್ಲಿ 75 ಕೋಟಿ ರು. ವೆಚ್ಚದಲ್ಲಿ ಹೈಟೆಕ್‌ ರೇಷ್ಮೆ ಗೂಡು ಮಾರುಕಟ್ಟೆ ಅಭಿವೃದ್ಧಿ ಪಡಿಸಲಾಗಿದೆ.

ರೈತರ ಬಡ್ಡಿರಹಿತ ಸಾಲ 5 ಲಕ್ಷಕ್ಕೆ ಹೆಚ್ಚಳ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರಿಗೆ ರಾಜ್ಯ ಸಹಕಾರಿ ಸಂಘಗಳ ಮೂಲಕ ನೀಡುತ್ತಿದ್ದ 3 ಲಕ್ಷ ರು. ವರೆಗಿನ ಶೂನ್ಯ ಬಡ್ಡಿದರದ ಅಲ್ಪಾವಧಿ ಸಾಲವನ್ನು 5 ಲಕ್ಷ ರು.ಗಳಿಗೆ ಹೆಚ್ಚಿಸಿತು. ಅದೇ ರೀತಿ ದೀರ್ಘಾವಧಿ ಸಾಲದ ಮೊತ್ತವನ್ನು 10ರಿಂದ 15 ಲಕ್ಷ ರು.ಗಳಿಗೆ ಹೆಚ್ಚಿಸಿತು.

2024-25ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರು. ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರು. ಸಾಲ ವಿತರಿಸುವ ಗುರಿ ಹೊಂದಿದೆ. 2023-24ನೇ ಸಾಲಿನ ಬೆಳಗಾವಿ ಅಧಿವೇಶನಲ್ಲಿ ಘೋಷಿಸಿದಂತೆ ಡಿಸಿಸಿ ಹಾಗೂ ಪಿಕಾಡ್‌ ಬ್ಯಾಕುಗಳಿಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ 240 ಕೋಟಿ ರು. ಬಡ್ಡಿ ಮನ್ನಾ ಮಾಡಲಾಗಿದೆ. ಸಹಕಾರಿ ಸಂಘಗಳ ಮೂಲಕ ಯಶಸ್ವಿನಿ ಯೋಜನೆ ಪುನರ್‌ಜಾರಿಗೊಳಿಸಿ ಇಲ್ಲಿಯವರೆಗೆ 700 ನೆಟ್‌ವರ್ಕ್‌ ಆಸ್ಪತ್ರೆಗಳನ್ನು ನೋಂದಾಯಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ಈವರೆಗೆ 59 ಸಾವಿರ ಫಲಾನುಭವಿಗಳು 103 ಕೋಟಿ ರು. ಮೊತ್ತದ ಚಿಕಿತ್ಸೆ ಪಡೆದಿದ್ದಾರೆ. ಕೇಂದ್ರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಲ್‌ಗೆ 7500 ರು. ಜೊತೆಗೆ ರಾಜ್ಯ ಸರ್ಕಾರದಿಂದ 450 ರು. ಹೆಚ್ಚುವರಿ ಪ್ರೋತ್ಸಾಹಧನ ನೀಡಿದೆ.

1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಮಾವೇಶ ನಡೆಸುವ ಮೂಲಕ ಕಂದಾಯ ಗ್ರಾಮಗಳ 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ವಸತಿ ಪ್ರದೇಶಗಳಿಗೆ ಅಧಿಕೃತ ದಾಖಲೆ ನೀಡಲು ಸರ್ಕಾರ ಹಕ್ಕುಪತ್ರ ವಿತರಣೆ ಮಾಡಲಿದೆ. ಘೋಷಣೆಯಾಗಿರುವ ಕಂದಾಯ ಗ್ರಾಮಗಳೆಲ್ಲವೂ ಹಾಡಿ, ಹಟ್ಟಿ, ತಾಂಡಾ ಸೇರಿ ಬಡ ಜನರು ವಾಸಿಸುವ ಪ್ರದೇಶಗಳಾಗಿವೆ.

ರೈತರಿಗೆ ಪೋಡಿ ಅಭಿಯಾನದ ಮೂಲಕ ಪಟ್ಟಾ ಮಾಡಿಕೊಡುವುದು ಮತ್ತು ಬಾಕಿ ಉಳಿದಿರುವ ಪೌತಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಂಡಿದೆ. ಪೌತಿ ಅಭಿಯಾನದ ಮೂಲಕ 30 ,000 ರೈತರಿಗೆ ಪಟ್ಟಾ ನೀಡಲು ಕ್ರಮ ಕೈಗೊಳ್ಳಲಾಗಿದೆ. 52 ಲಕ್ಷಕ್ಕೂ ಹೆಚ್ಚು ಪೌತಿ ಪ್ರಕರಣಗಳ ವಿಲೇವಾರಿ ಬಾಕಿಯಿದ್ದು ಅವುಗಳ ವಿಲೇವಾರಿಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

7ನೇ ವೇತನ ಆಯೋಗ ಜಾರಿ

ಏಳನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಜಾರಿ ಮಾಡಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 20 ಸಾವಿರ ಕೋಟಿ ರು. ಹೊರೆಯಾಗಲಿದೆ. ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆಗಳು ಮತ್ತು ಪಿಂಚಣಿಗಳನ್ನು 2024ರ ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ಇದರಿಂದ ನೌಕರರ ಕನಿಷ್ಠ ಮೂಲ ವೇತನ 17,000 ರು.ನಿಂದ 27,000 ರು.ಗೆ ಕ್ಕೆ ಏರಿಕೆಯಾಗಿದೆ. ಗರಿಷ್ಠ ವೇತನ 1,50,600 ರು.ನಿಂದ 2,41,200 ರು. ವರೆಗೆ ಪರಿಷ್ಕರಣೆಯಾಗಿದೆ. ನೌಕರರ ಕನಿಷ್ಠ ಪಿಂಚಣಿ ಕೂಡ 8,500 ರು.ನಿಂದ 13,500 ರು.ಗೆ ಏರಿಕೆಯಾಗಿದೆ. ಗರಿಷ್ಠ ಪಿಂಚಣಿ 75,300 ರು.ನಿಂದ 120,600 ರು.ಗೆ ಏರಿಕೆಯಾಗಿದೆ.

ಸಾವಿರಾರು ಕೋಟಿ ಬಂಡವಾಳ ಹೂಡಿಕೆ

ಕೈಗಾರಿಕಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕಕ್ಕೆ ಇನ್ನಷ್ಟು ಹೂಡಿಕೆ ಆಕರ್ಷಿಸಲು ಕಳೆದ ವರ್ಷ ಬೃಹತ್‌ ಬಂಡವಾಳ ಹೂಡಿಕೆ ಸಮಾವೇಶ ನಡೆಸಿತು. ತನ್ಮೂಲಕ ದೇಶ ಹಾಗೂ ವಿದೇಶದ ಹಲವು ಕಂಪನಿಗಳಿಂದ ಸಾವಿರಾರು ಕೋಟಿ ರು. ಹೂಡಿಕೆ ಆಕರ್ಷಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಹೂಡಿಕೆದಾರರಿಗೆ ಏಕಗವಾಕ್ಷಿ ಮೂಲಕ ತಮ್ಮ ಉದ್ಯಮವನ್ನು ರಾಜ್ಯದಲ್ಲಿ ಸ್ಥಾಪಿಸಲು ಹೊಸ ಕೈಗಾರಿಕಾ ನೀತಿ ಮೂಲಕ ಅವಕಾಶ ನೀಡಲಾಗಿದೆ. 2024-25ರಲ್ಲಿ ಕೈಗಾರಿಕಾ ವಲಯದಲ್ಲಿ ಶೇ.5.8 ರಷ್ಟು ಬೆಳಗವಣಿಗೆ ಸಾಧಿಸಿರುವ ರಾಜ್ಯವು ಕೈಗಾರಿಕಾ ನೀತಿ 2025-30ಕ್ಕೆ ಚಾಲನೆ ನೀಡಿದ್ದು, ಇದು 2030ರ ವೇಳೆಗೆ ಈ ಕ್ಷೇತ್ರದ ಉತ್ಪಾದನಾ ವಲಯದಲ್ಲಿ ಶೇ.12ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸುವ ಜೊತೆಗೆ 20 ಲಕ್ಷ ಉದ್ಯೋಗಳನ್ನು ಸೃಜಿಸುವ ಗುರಿ ಹೊಂದಿದೆ. ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ 13,692 ಕೋಟಿ ರು. ನೆರವು, ಸಹಾಯಧನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಆರ್ಥಿಕ ಬೆಳವಣಿಗೆಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, 2024-25ರ ಡಿಸೆಂಬರ್‌ ಅಂತ್ಯದ ವೇಳೆಗೆ 4.4 ಬಿಲಿಯನ್‌ ಡಾಲರ್‌ ಮೌಲ್ಯದ ವಿದೇಶಿ ಹೂಡಿಕೆ ಆಕರ್ಷಿಸುವ ಮೂಲಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಈ ಬಾರಿ ಕೂಡ 1 ಲಕ್ಷ ಕೋಟಿ ರು. ಹೂಡಿಕೆ ನಿರೀಕ್ಷಿಸಲಾಗಿದೆ. ಸೇವಾ ವಲಯದಲ್ಲಿ ರಾಜ್ಯವು ಗಣನೀಯ ಬೆಳವಣಿಗೆ ಸಾಧಿಸಿದ್ದು, ಕಳೆದ ಒಂದು ಸಾಲಿನಲ್ಲೇ ಶೇ.8.9 ರಷ್ಟು ಬೆಳವಣಿಗೆ ದಾಖಲಿಸಿದೆ. ಇದರೊಂದಿಗೆ ದೇಶದ ಆರ್ಥಿಕತೆಯಲ್ಲಿನ ಸೇವಾ ವಲಯದ ಬೆಳವಣಿಗೆ ಶೇ.7.2ಕ್ಕಿಂತ ಹೆಚ್ಚಾಗಿದೆ.

 ಸರ್ಕಾರಿ ಶಾಲೆ, ಕಾಲೇಜು ಕೊಠಡಿ ದುರಸ್ತಿ 

ಕಳೆದೆರಡು ವರ್ಷದಲ್ಲಿ 550 ಕೋಟಿ ರು.ವೆಚ್ಚದಲ್ಲಿ ರಾಜ್ಯ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ 8311 ಹೊಸ ಕೊಠಡಿಗಳ ನಿರ್ಮಾಣ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಜೊತೆಗೆ ಶಿಥಿಲಗೊಂಡಿದ್ದ ಹಳೆಯ ಸರ್ಕಾರಿ ಶಾಲೆಗಳ 3833 ಕೊಠಡಿಗಳು ಮತ್ತು ಪಿಯು ಕಾಲೇಜುಗಳ 724 ಕೊಠಡಿಗಳನ್ನು 100 ಕೋಟಿ ರು. ವೆಚ್ಚದಲ್ಲಿ ದುರಸ್ತಿಗೊಳಿಸಲಾಗಿದೆ. ಈ ವರ್ಷ ಇನ್ನೂ ಸಾವಿರಾರು ಕೊಠಡಿಗಳ ದುರಸ್ತಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. 5775 ಶಾಲೆಗಳಲ್ಲಿ 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ ಯೋಜನೆಯ ಸಂಯೋಜನೆಯೊಂದಿಗೆ 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಅಗತ್ಯವಿರುವ ಶಾಲೆಗಳಲ್ಲಿ ಹೊಸ ಅಡುಗೆ ಕೋಣೆ, ಪೌಷ್ಠಿಕ ವನಗಳನ್ನು ಶಾಲೆಗಳಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲು ಕ್ರಮ ವಹಿಸಲಾಗಿದೆ.

 ವಾರದಲ್ಲಿ 6 ದಿನ ಮಕ್ಕಳಿಗೆ ಮೊಟ್ಟೆ 

ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆ ಜೊತೆಗೆ ವಾರದಲ್ಲಿ ಎರಡು ದಿನ ನೀಡುತ್ತಿದ್ದ ಬೇಯಿಸಿದ ಮೊಟ್ಟೆ ನೀಡುವ ಯೋಜನೆಯನ್ನು ಅಜೀಂ ಪ್ರೇಮ್‌ ಜಿ ಫೌಂಡೇಷನ್‌ನ ಆರ್ಥಿಕ ನೆರವಿನೊಂದಿಗೆ ವಾರದಲ್ಲಿ ಆರು ದಿನಕ್ಕೇರಿಸಲಾಗಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ನೀಡಲಾಗುತ್ತಿದೆ. ಮೊದಲು ಎಂಟನೇ ತರಗತಿ ವರೆಗೆ ಮಾತ್ರ ಇದ್ದ ಮೊಟ್ಟೆ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ 9 ಮತ್ತು 10ನೇ ತರಗತಿ ಮಕ್ಕಳಿಗೂ ವಿಸ್ತರಿಸಿದೆ. 60 ಲಕ್ಷ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

Read more Articles on