ಭಾರತ-ಚೀನಾ ಸಂಬಂಧ ಇನ್ನಷ್ಟು ವೃದ್ಧಿಗೊಳ್ಳಲಿ : ಪಿಜಿಆರ್ ಸಿಂಧ್ಯಾ ಆಶಯ

| N/A | Published : Oct 21 2025, 02:00 AM IST

ಭಾರತ-ಚೀನಾ ಸಂಬಂಧ ಇನ್ನಷ್ಟು ವೃದ್ಧಿಗೊಳ್ಳಲಿ : ಪಿಜಿಆರ್ ಸಿಂಧ್ಯಾ ಆಶಯ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಆರ್ಥಿಕವಾಗಿ ಸದೃಢವಾಗುತ್ತಿರುವ ಚೀನಾ ಹಾಗೂ ಭಾರತ ದೇಶಗಳು ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಹಯೋಗ, ಸಂಬಂಧವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ.

 ಬೆಂಗಳೂರು :  ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಆರ್ಥಿಕವಾಗಿ ಸದೃಢವಾಗುತ್ತಿರುವ ಚೀನಾ ಹಾಗೂ ಭಾರತ ದೇಶಗಳು ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಹಯೋಗ, ಸಂಬಂಧವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ. 

ಭಾರತ- ಚೀನಾ ಸ್ನೇಹ ಸಂಘ( ಐಸಿಎಫ್ಎ) ಕರ್ನಾಟಕ ವತಿಯಿಂದ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಆಯೋಜಿಸಿದ್ದ ಚೀನಾ ಜನತಾ ಗಣರಾಜ್ಯದ 76ನೇ ವಾರ್ಷಿಕೋತ್ಸವ ಹಾಗೂ ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವ ಮತ್ತು ಚೀನಾದ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. 

ಚೀನಾ ದೇಶ ಕಳೆದ 75 ವರ್ಷಗಳಲ್ಲಿ ಅಗಾಧ ಪ್ರಗತಿ ಸಾಧಿಸಿದೆ. ಆಟೋಮೊಬೈಲ್‌, ತಂತ್ರಜ್ಞಾನ, ಜವಳಿ, ಆಟಿಕೆ ವಸ್ತುಗಳು ಸೇರಿದಂತೆ ಅನೇಕ ವಲಯಗಳಲ್ಲಿ ಜಾಗತಿಕ ನಾಯಕತ್ವ ಪಡೆದುಕೊಂಡಿದೆ. ಅದೇ ರೀತಿ ಭಾರತವೂ ಬೆಳವಣಿಗೆ ಸಾಧಿಸಿದೆ. ಮಾಜಿ ಪ್ರಧಾನಿ ನೆಹರು, ರಾಜೀವ್ ಗಾಂಧಿ ಅವರ ಕಾಲದಿಂದಲೂ ಚೀನಾದೊಂದಿಗೆ ಉತ್ತಮ ಸಂಬಂಧ ಉಳಿಸಿಕೊಂಡು ಬರಲಾಗಿದೆ ಎಂದು ಸಿಂಧ್ಯಾ ತಿಳಿಸಿದರು. 

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಧಿಸಿದ ಸುಂಕದ ಹೊರೆಯನ್ನು ಚೀನಾ ಸಮರ್ಥವಾಗಿ ಎದುರಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳಿಸುವ ಬಗ್ಗೆ ಯೋಚಿಸಬೇಕು. ಕರ್ನಾಟಕದಿಂದ ಉನ್ನತ ಶಿಕ್ಷಣಕ್ಕೆಂದು ಸಾವಿರಾರು ವಿದ್ಯಾರ್ಥಿಗಳು ಚೀನಾಕ್ಕೆ ತೆರಳುತ್ತಾರೆ. ಅಲ್ಲಿಂದಲೂ ಭಾರತಕ್ಕೂ ಬರುತ್ತಾರೆ. ಜ್ಞಾನವೂ ಎರಡೂ ದೇಶಗಳ ಸಂಬಂಧವನ್ನು ಬೆಸೆದಿದೆ ಎಂದು ಸಿಂಧ್ಯಾ ಹೇಳಿದರು.

ಮುಂಬೈನಲ್ಲಿರುವ ಚೀನಾ ಕಾನ್ಸುಲೇಟ್‌ ಜನರಲ್‌ ಕಿನ್‌ ಜಿಯಿ ಮಾತನಾಡಿ, ಭಾರತ ಹಾಗೂ ಚೀನಾ ಸಾವಿರಾರು ವರ್ಷಗಳ ನಾಗರಿಕತೆ, ಶ್ರೀಮಂತ, ಸಂಸ್ಕೃತಿ, ಪರಂಪರೆಯನ್ನು ಹೊಂದಿವೆ. ಕಾಲಕಾಲಕ್ಕೆ ಅಗತ್ಯ ಬದಲಾವಣೆಗಳೊಂದಿಗೆ ಬೆಳವಣಿಗೆ ಕಂಡಿವೆ. ಹೆಚ್ಚು ಜನಸಂಖ್ಯೆಯೇ ಎರಡೂ ದೇಶಗಳಿಗೆ ವರದಾನ ಆಗಿದೆ. ನೆಹರು ಕಾಲದಿಂದಲೂ ರಾಜತಾಂತ್ರಿಕ ಸಂಬಂಧಗಳು ಗಟ್ಟಿಯಾಗಿದ್ದು ನಿರಂತರವಾಗಿ ಕಾಪಾಡಿಕೊಳ್ಳುವ ವಿಶ್ವಾಸವಿದೆ ಎಂದರು.ಸಂಘದ ಅಧ್ಯಕ್ಷ ಕೆ. ಶ್ರೀನಿವಾಸಗೌಡ, ಕಾರ್ಯದರ್ಶಿ ಬಿ.ಭಾಸ್ಕರನ್‌, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್‌ ಕೊಂಡಜ್ಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read more Articles on