ವಿಶ್ವದ ಶಕ್ತಿಶಾಲಿ ವಾಯುಪಡೆ : ಚೀನಾ ಹಿಂದಿಕ್ಕಿದ ಭಾರತ

| N/A | Published : Oct 17 2025, 01:00 AM IST

ವಿಶ್ವದ ಶಕ್ತಿಶಾಲಿ ವಾಯುಪಡೆ : ಚೀನಾ ಹಿಂದಿಕ್ಕಿದ ಭಾರತ
Share this Article
  • FB
  • TW
  • Linkdin
  • Email

ಸಾರಾಂಶ

ಆಪರೇಷನ್‌ ಸಿಂದೂರದ ಮೂಲಕ ತನ್ನ ಶಕ್ತಿ ಪ್ರದರ್ಶಿಸಿದ್ದ ಭಾರತೀಯ ವಾಯುಪಡೆ ಇದೀಗ ಹೊಸ ಗೌರವಕ್ಕೆ ಪಾತ್ರವಾಗಿದೆ. ವಿಶ್ವದ ಶಕ್ತಿಶಾಲಿ ಏರ್‌ಫೋರ್ಸ್‌ಗಳ ವಲ್ಡ್‌ ಡೈರೆಕ್ಟರಿ ಆಫ್‌ ಮಾಡರ್ನ್‌ ಮಿಲಿಟರಿ ಏರ್‌ಕ್ರಾಫ್ಟ್‌ ರ್‍ಯಾಂಕಿಂಗ್‌ನಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದಿದೆ.

ನವದೆಹಲಿ: ಆಪರೇಷನ್‌ ಸಿಂದೂರದ ಮೂಲಕ ತನ್ನ ಶಕ್ತಿ ಪ್ರದರ್ಶಿಸಿದ್ದ ಭಾರತೀಯ ವಾಯುಪಡೆ ಇದೀಗ ಹೊಸ ಗೌರವಕ್ಕೆ ಪಾತ್ರವಾಗಿದೆ. ವಿಶ್ವದ ಶಕ್ತಿಶಾಲಿ ಏರ್‌ಫೋರ್ಸ್‌ಗಳ ವಲ್ಡ್‌ ಡೈರೆಕ್ಟರಿ ಆಫ್‌ ಮಾಡರ್ನ್‌ ಮಿಲಿಟರಿ ಏರ್‌ಕ್ರಾಫ್ಟ್‌(ಡಬ್ಲ್ಯುಡಿಎಂಎಂಎ) ರ್‍ಯಾಂಕಿಂಗ್‌ನಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದಿದೆ.

ಈ ಪಟ್ಟಿಯಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲಿ ಮುಂದುವರೆದರೆ, ರಷ್ಯಾ ಎರಡನೇ ಸ್ಥಾನದಲ್ಲಿದೆ. ಚೀನಾ ವಾಯುಸೇನೆ ನಾಲ್ಕನೇ ಸ್ಥಾನದಲ್ಲಿದೆ. ಪಟ್ಟಿಯ ಪ್ರಕಾರ ಅಮೆರಿಕದ ವಾಯುಸೇನೆಯ ಟ್ರೂವಲ್‌ ರೇಟಿಂಗ್‌ (ಟಿವಿಆರ್‌) 242.9 ಆಗಿದ್ದರೆ, ರಷ್ಯಾ-114.2 ಮತ್ತು ಭಾರತದ ವಾಯುಸೇನೆಯ ರೇಟಿಂಗ್‌ 69.4 ಆಗಿದೆ. ಇನ್ನು ಚೀನಾ, ಜಪಾನ್‌, ಇಸ್ರೇಲ್‌, ಫ್ರಾನ್ಸ್‌ ಮತ್ತು ಬ್ರಿಟನ್‌ನ ರೇಟಿಂಗ್‌ ಅನುಕ್ರಮವಾಗಿ 63.8, 58.1, 56.3, 55.3 ಮತ್ತು 55.3 ಆಗಿದೆ. ಪಾಕಿಸ್ತಾನದ ರೇಟಿಂಗ್‌ 46.3 ಆಗಿದೆ.

ಅಮೆರಿಕದ ವಾಯುಪಡೆ ಸಾಮರ್ಥ್ಯವು ರಷ್ಯಾ, ಚೀನಾ, ಭಾರತ, ದಕ್ಷಿಣ ಕೊರಿಯ ಮತ್ತು ಜಪಾನ್‌ನ ವಾಯುಸೇನೆ ಸಾಮರ್ಥ್ಯವನ್ನು ಮೀರಿಸುವಂತಿದೆ ಎಂದು ವರದಿ ಹೇಳಿದೆ.

ಭಾರತೀಯ ವಾಯುಸೇನೆಯ ಶೇ.31.6ರಷ್ಟು ವಿಮಾನಗಳು ಯುದ್ಧವಿಮಾನಗಳಾಗಿವೆ. ಶೇ.29ರಷ್ಟು ಹೆಲಿಕಾಪ್ಟರ್‌ಗಳಾಗಿದ್ದರೆ, ಶೇ.21.8ರಷ್ಟು ತರಬೇತಿ ವಿಮಾನಗಳನ್ನು ಹೊಂದಿದೆ. ಇನ್ನು ಚೀನಾದ ವಾಯುಸೇನೆಯ ಒಟ್ಟು ಸಾಮರ್ಥ್ಯದ ಶೇ.52.9ರಷ್ಟು ಯುದ್ಧವಿಮಾನಗಳಾಗಿದ್ದರೆ, ಶೇ.28.4ರಷ್ಟು ತರಬೇತಿ ವಿಮಾನಗಳಾಗಿವೆ ಎಂದು ಡಬ್ಲ್ಯುಡಿಎಂಎಂಎ ವರದಿ ಹೇಳಿದೆ.

ಭಾರತಕ್ಕೆ ಹೋಲಿಸಿದರೆ ಚೀನಾವು ಹೆಚ್ಚಿನ ವಿಮಾನಗಳನ್ನು ಹೊಂದಿದೆ. ಜತೆಗೆ, ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ ಚೀನಾಗೆ ಹೋಲಿಸಿದರೆ ಭಾರತೀಯ ಪಡೆಯು ಸಮತೋಲಿತವಾಗಿದೆ.

ಸದ್ಯ ಭಾರತೀಯ ವಾಯುಸೇನೆಯಲ್ಲಿ 4.5 ತಲೆಮಾರಿನ ಯುದ್ಧವಿಮಾನಗಳಾದ ರಫೇಲ್‌, ಸುಖೋಯ್‌ ಎಸ್‌ಯು-30 ಎಂಕೆಐ, ತೇಜಸ್‌, ನಾಲ್ಕನೇ ತಲೆಮಾರಿನ ಯುದ್ಧವಿಮಾನಗಳಾದ ಮಿಗ್‌-29 (ಇತ್ತೀಚೆಗೆ ನಿವೃತ್ತಿಯಾಗಿದೆ), ಮಿರಾಜ್‌-2000 ವಿಮಾನಗಳನ್ನು ಹೊಂದಿದೆ. ಭಾರತವು ಸ್ವದೇಶಿ ನಿರ್ಮಿತ ಎಲ್‌ಸಿಎ-ಎಂಕೆ1ಎ, ಎಲ್‌ಸಿಎ-ಎಂಕೆ2, ಎಂಆರ್‌ಎಫ್‌ಎ ಮತ್ತು ಎಎಂಸಿಎ ನಂಥ ವಿಮಾನಗಳನ್ನೂ ಸೇರ್ಪಡೆ ಮಾಡಲು ಉದ್ದೇಶಿಸಿದೆ.

ಇನ್ನು ಚೀನಾವು ಐದನೇ ತಲೆಮಾರಿನ ಜೆ-20, ಜೆ-35 ಮತ್ತು 4.5 ತಲೆಮಾರಿನ ಜೆ-10ಸಿ ಮತ್ತು ಜೆ-16 ವಿಮಾನಗಳನ್ನು ಹೊಂದಿದೆ.

ಏನಿದು ಟಿವಿಆರ್‌ ರೇಟಿಂಗ್‌? ಯಾಕೆ ಮುಖ್ಯ?

ಈ ರೇಟಿಂಗ್‌ ಅನ್ನು ಡಬ್ಲ್ಯುಡಿಎಂಎಂಎ ವಾಯುಪಡೆಯ ಶಕ್ತಿಯನ್ನು ಆಧರಿಸಿ ರಚಿಸಿದೆ. ವಿಮಾನದ ಗುಣಮಟ್ಟ, ಸಾಮರ್ಥ್ಯ, ಬೆಂಬಲ ಮತ್ತು ಸನ್ನದ್ಧತೆ ಸೇರಿ ಹಲವು ಅಂಶಗಳನ್ನು ಆಧರಿಸಿ ಈ ರ್‍ಯಾಂಕಿಂಗ್ ನಿಗದಿಪಡಿಸಲಾಗುತ್ತದೆ.

Read more Articles on