ಸಾರಾಂಶ
ನವದೆಹಲಿ: 160ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ 2008ರ ಮುಂಬೈ ಉಗ್ರ ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ಸಿದ್ಧವಿತ್ತು. ಆದರೆ ಅಂದಿನ (ಯುಪಿಎ) ಸರ್ಕಾರದಿಂದ ಅನುಮತಿ ದೊರೆತಿರಲಿಲ್ಲ ಎಂದು ವಾಯುಪಡೆಯ ಮಾಜಿ ಮುಖ್ಯಸ್ಥ ಮೇ। ಫಾಲಿ ಹೋಮಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಪಿ.ಚಿದಂಬರಂ ನೀಡಿದ ಹೇಳಿಕೆ ಬೆನ್ನಲ್ಲೇ 3 ವರ್ಷದ ಹಿಂದೆ ಫಾಲಿ ಹೋಮಿ ನೀಡಿದ್ದ ಈ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
3 ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಮೇ। ಫಾಲಿ ಹೋಮಿ ‘ಮುಂಬೈ ದಾಳಿಯ ನಂತರ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರನ್ನು ಪ್ರಧಾನಿ ಕಚೇರಿಗೆ ಕರೆಸಲಾಗಿತ್ತು. ವಾಯುಪಡೆಯ ಅದಾಗಲೇ ಪ್ರತಿದಾಳಿಯ ತಂತ್ರ ಸಿದ್ಧಪಡಿಸಿ ಅದನ್ನು ಸರ್ಕಾರದ ಮುಂದಿಟ್ಟಿತ್ತು. ದಾಳಿ ಮಾಡಬೇಕೋ? ಅಥವಾ ಬೇಡವೋ? ಎಂಬ ನಿರ್ಧಾರವನ್ನು ನಾವು ಸರ್ಕಾರಕ್ಕೆ ಬಿಟ್ಟಿದ್ದೆವು. ಅಂತಿಮವಾಗಿ ಈ ಬಗ್ಗೆ ಸರ್ಕಾರದಿಂದ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ’ ಎಂದು ಹೇಳಿದ್ದರು.
ಜೊತೆಗೆ, ‘ಮುಂಬೈ ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಉಗ್ರ ನೆಲೆಗಳು ಎಲ್ಲಿವೆ ಎಂಬ ಬಗ್ಗೆ ಗುಪ್ತಚರ ಪಡೆ ನೀಡುವ ಯಾವುದೇ ಸ್ಥಳದ ಮೇಲೆ ದಾಳಿಗೆ ನಾವು ಯೋಜನೆ ರೂಪಿಸಿದ್ದೆವು. ಆದರೆ ಮುಂದಿನ ಬೆಳವಣಿಗೆ ಬಗ್ಗೆ ನಿಮಗೆ ಮಾಹಿತಿ ನೀಡಲಾಗುವುದು ಎಂದಷ್ಟೇ ಹೇಳಿ ಸರ್ಕಾರ ಸುಮ್ಮನಾಯಿತು. ಮುಂಬೈನಲ್ಲಿ ನಡೆದ ಭೀಕರ ನರಮೇಧದ ಬಳಿಕ ಪಾಕಿಸ್ತಾನಕ್ಕೆ ಸೂಕ್ತ ಪಾಠ ಕಲಿಸಬೇಕೆಂಬುದು ವೈಯಕ್ತಿಕವಾಗಿಯೂ ನನ್ನ ಅಭಿಪ್ರಾಯವಾಗಿತ್ತು. ಆದರೆ ದಾಳಿಯ ಅಂತಿಮ ನಿರ್ಧಾರ ಸರ್ಕಾರದ್ದೇ ಆದ ಕಾರಣ ನಾವು ಸರ್ಕಾರದ ನಿರ್ಧಾರವನ್ನು ಒಪ್ಪಿಕೊಂಡೆವು’ ಎಂದು ಸಂದರ್ಶನದಲ್ಲಿ ಫಾಲಿ ಹೋಮಿ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ನಡುವೆ ಫಾಲಿ ಹೋಮಿ ಅವರ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಾಯುಪಡೆಯ ನಿವೃತ್ತ ಪೈಲಟ್ ಪ್ಯಾಂಗಿಂಗ್ ಪಾವೊ ಪ್ರತಿಕ್ರಿಯಿಸಿದ್ದು, ‘ಆಗ ನಾನು ಸುಕೋಯ್ ಸ್ಕ್ವಾಡ್ರ್ಯನ್‌ನ ಕಮಾಂಡರ್ ಆಗಿದ್ದೆ. ಪಂಜಾಬ್ ಪ್ರದೇಶಕ್ಕೆ ಸೈನಿಕರನ್ನು ನಿಯೋಜಿಸಲಾಗಿತ್ತು. ಮುಝಫರಾಬಾದ್ ಮತ್ತು ಬಾಲಾಕೋಟ್‌ನಲ್ಲಿದ್ದ ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿ ಸುಖೋಯ್ 30ಎಂಕೆಐ ಕ್ಷಿಪಣಿ ಸಿದ್ಧವಾಗಿಡಲಾಗಿತ್ತು. ಆದರೆ ಸರ್ಕಾರದ ಮೃದು ಧೋರಣೆಯಿಂದ ದಾಳಿ ಸಾಧ್ಯವಾಗಲಿಲ್ಲ’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.