ಕನ್ನಡಪ್ರಭ ವಾರ್ತೆ ಬೆಳಗಾವಿ/ಬೆಂಗಳೂರು‘ಮೇಲಿಂದ ಮೇಲೆ ಬರ ಬರಲಿ ಎಂದು ರೈತರು ಬಯಸುತ್ತಾರೆ. ಬರಗಾಲ ಬಂದರೆ ಸಾಲ ಮನ್ನಾ ಆಗುವ ನಿರೀಕ್ಷೆಯಲ್ಲಿ ಅವರು ಇರುತ್ತಾರೆ’ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಪ್ರತಿಪಕ್ಷಗಳ ಹಲವು ಮುಖಂಡರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಈ ರೀತಿಯ ಹೇಳಿಕೆಗಾಗಿ ಶಿವಾನಂದ ಪಾಟೀಲ್ ಕ್ಷಮೆ ಕೋರಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ. ಈ ನಡುವೆ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಚಿವ ಶಿವಾನಂದ ಪಾಟೀಲ್, ನನ್ನ ಭಾಷಣವನ್ನು ತಿರುಚಲಾಗಿದೆ. ನಾನು ರೈತರ ವಿರೋಧಿ ಅಲ್ಲ. ರೈತರ ವಿರೋಧವಾಗಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಬರಗಾಲಕ್ಕೆ ಸಂಬಂಧಿಸಿದ ಹೇಳಿಕೆ ಖಂಡಿಸಿ ಚಾಮರಾಜನಗರದಲ್ಲಿ ರೈತ ಸಂಘಟನೆಗಳು ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರೆ, ಶಿವಾನಂದ ಪಾಟೀಲರು ಕ್ಷಮೆಯಾಚಿಸಬೇಕೆಂದು ರೈತ ಮುಖಂಡ ಬಸವರಾಜಪ್ಪ ಆಗ್ರಹಿಸಿದ್ದಾರೆ.ಈ ಹಿಂದೆ ಕೂಡ ಸಚಿವರು ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬರ್ಥದಲ್ಲಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ನಂತರ ತಾವು ಆ ರೀತಿ ಹೇಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದರು.