ಕನ್ನಡಪ್ರಭ ವಾರ್ತೆ ಶಿರಸಿ/ಬೆಂಗಳೂರು
ಸುಮಾರು ಎರಡು ವರ್ಷಕ್ಕೂ ಹೆಚ್ಚು ಕಾಲ ಒಂದು ರೀತಿಯಲ್ಲಿ ಅಜ್ಞಾತವಾಸದಲ್ಲಿದ್ದ ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಣಕ್ಕಿಳಿಯುವ ಬಗ್ಗೆ ಕುತೂಹಲ ಮೂಡಿದೆ.ಸತತ ಆರು ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಸ್ಪರ್ಧಿಸಬೇಕು ಎಂದು ಭಾನುವಾರ ಶಿರಸಿಯ ಅವರ ಮನೆ ಬಳಿ ಸುಮಾರು ಐದುನೂರಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ ಮನವಿ ಮಾಡಿದರು.ಸುಮಾರು ಮುಕ್ಕಾಲು ಗಂಟೆ ಕಾಲ ಚರ್ಚೆ ಬಳಿಕ ಮಾತನಾಡಿದ ಹೆಗಡೆ, ಚುನಾವಣೆಗೆ ಇನ್ನೂ ಸಮಯ ಇದೆ. ರಾಮಜನ್ಮ ಭೂಮಿಯಲ್ಲಿ ಮಂದಿರ ಉದ್ಘಾಟನೆ ಕಾರ್ಯಕ್ರಮಗಳೆಲ್ಲ ಮುಗಿಯಲಿ, ಎಲ್ಲ ಒಮ್ಮೆ ಕುಳಿತು ಮಾತಾಡೋಣ. ಎಲ್ಲರ ತೀರ್ಮಾನ ಹೇಗಿದೆಯೋ ಹಾಗೇ ಆಗಲಿ. ಕಾರ್ಯಕರ್ತರ ಅಭಿಪ್ರಾಯ ಕಡೆಗಣಿಸುವುದೂ ಮೂರ್ಖತನವಾಗುತ್ತದೆ ಎನ್ನುವ ಮೂಲಕ ಮತ್ತೊಮ್ಮೆ ಸ್ಪರ್ಧಿಸುವ ಸಾಧ್ಯತೆಯನ್ನು ಮುಕ್ತವಾಗಿರಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅಂಕೋಲಕ್ಕೆ ಪ್ರಚಾರಕ್ಕಾಗಿ ಆಗಮಿಸಿದರೂ ಅನಂತಕುಮಾರ್ ಹೆಗಡೆ ಯಾವುದೇ ಸಂದೇಶ ನೀಡದೆ ಗೈರು ಹಾಜರಾಗಿದ್ದರು. ಜತೆಗೆ ಅವರ ಆರೋಗ್ಯವೂ ಹದಗೆಟ್ಟಿದೆ ಎಂಬ ದಟ್ಟ ವದಂತಿ ಹಬ್ಬಿತ್ತು. ಹೀಗಾಗಿ, ಅವರು ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಮಾತು ಬಲವಾಗಿ ಕೇಳಿಬರುತ್ತಿತ್ತು.ಆದರೆ ಭಾನುವಾರ ಅವರ ಮನೆಗೆ ಬಂದಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು, ನೀವು ಈ ಬಾರಿ ಲೋಕಸಭೆಗೆ ಮತ್ತೆ ಸ್ಪರ್ಧಿಸಬೇಕು. ನೀವು ಸ್ಪರ್ಧಿಸಿದರಷ್ಟೇ ಬಿಜೆಪಿಗೆ ಬಲ, ನಮಗೂ ಉತ್ಸಾಹ. ನೀವೇ ಸ್ಪರ್ಧೆಯ ಉತ್ಸಾಹ ತೋರದಿದ್ದರೆ ಕೇಂದ್ರದವರಾದರೂ ಹೇಗೆ ಟಿಕೆಟ್ ನೀಡಬೇಕು? ನೀವು ಹೂಂ ಅನ್ನಿ ಸಾಕು ಎಂದು ದುಂಬಾಲು ಬಿದ್ದರು.ಇದಕ್ಕೂ ಮೊದಲು ಮಾತನಾಡಿದ ಅನಂತಕುಮಾರ್, ಕಳೆದ 15 ವರ್ಷಗಳಿಂದ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಹೇಳುತ್ತಲೇ ಬಂದಿದ್ದೇನೆ. ನಾಲ್ಕೈದು ವರ್ಷದಿಂದ ಈ ತೀರ್ಮಾನ ಗಟ್ಟಿಗೊಳಿಸಿಕೊಂಡಿದ್ದೇನೆ. ಈಗ ಯು ಟರ್ನ್ ಮಾಡಿಬಿಟ್ರೆ ಗಾಡಿ ಪಲ್ಟಿ ಆಗುವ ಸಂಭವ ಇರುತ್ತದೆ. ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ. ನಾನು ರಾಜಕೀಯದಲ್ಲಿ ಇರಲಿ, ಇಲ್ಲದಿರಲಿ, ದೇಶದ ಕೆಲಸದಿಂದ ಹಿಂದೆ ಸರಿದಿಲ್ಲ. ರಾಜಕಾರಣವೊಂದೇ ದೇಶದ ಕೆಲಸ ಮಾಡಲು ದಾರಿ ಅಂತೇನಿಲ್ಲ. ಸಾಮಾಜಿಕ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ನನಗೆ ಈ ಬದುಕಿನಲ್ಲಿ ಸಾಧ್ಯವಿಲ್ಲ ಎಂದರು.ಆದರೆ, ಅವರ ಈ ನಿರ್ಧಾರ ಒಪ್ಪಿಕೊಳ್ಳಲು ಅಭಿಮಾನಿಗಳು ಸಿದ್ಧರಿರಲಿಲ್ಲ. ಕೆ.ಜಿ.ನಾಯ್ಕ ಹಣಜಿಬೈಲ್ ಮಾತನಾಡಿ, ನೀವು ಸ್ಪರ್ಧೆಯಿಂದ ಹಿಂದೆ ಸರಿದರೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಬಲವಾಗುತ್ತದೆ. ನೀವು ಕಣಕ್ಕಿಳಿದರೆ ಕಾಂಗ್ರೆಸ್ ಗೆಲುವಿನ ಆಸೆ ಬಿಟ್ಟು ಅಭ್ಯರ್ಥಿಯನ್ನೇ ಬದಲಾಯಿಸುತ್ತದೆ. ಹೀಗಾಗಿ, ಕೊನೆಯ ಕ್ಷಣದವರೆಗೆ ಕಾಯುವುದು ಸೂಕ್ತವಲ್ಲ ಎಂದರು.
ಎಂಟು ಕ್ಷೇತ್ರಗಳಲ್ಲಿ ಹೊಸಬರು ಬೇಕೆಂದರೆ ಮುಖ ಪರಿಚಯವಾದರೂ ಇರಬೇಕು. ಕಿತ್ತೂರು-ಖಾನಾಪುರದಲ್ಲಿ ಅನಂತಕುಮಾರ ಹೆಗಡೆ ಹೆಸರು ಕೇಳಿ ವೋಟ್ ಹಾಕುತ್ತಾರೆ ಎಂದು ಕಿತ್ತೂರು ಭಾಗದ ಅಭಿಮಾನಿಗಳು ಆಗ್ರಹ ವ್ಯಕ್ತಪಡಿಸಿದರು. ನಾವು ನಿಮ್ಮ ಜತೆ ರಕ್ತ ಹಂಚಿಕೊಂಡು ಬಂದವರು. ಆತ್ಮೀಯತೆಯಿಂದ ಕೇಳುತ್ತೇವೆ. ಕುಟುಂಬದ ಸದಸ್ಯನಾಗಿ ಜಿಲ್ಲೆ ನಿಮ್ಮನ್ನು ನೋಡಿದೆ. ಮನೆ ಮಗನಾಗಿ ನೋಡಿದೆ. ನೀವು ಸ್ಪರ್ಧಿಸಿದರಷ್ಟೇ ಬಿಜೆಪಿಗೆ ಶಕ್ತಿ ಬರಲಿದೆ ಎಂದು ಇನ್ನು ಕೆಲವು ಅಭಿಮಾನಿಗಳು ಒತ್ತಾಯಿಸಿದರು.ಹೊನ್ನಾವರ, ಕರ್ಕಿ, ಮಂಕಿ ಭಾಗದ ಅಭಿಮಾನಿಗಳು ಶ್ರೀಕುಮಾರ ಸಮೂಹ ಸಂಸ್ಥೆಗಳ ಮುಖ್ಯಸ್ಥ ವೆಂಕಟ್ರಮಣ ಹೆಗಡೆ ಅವರ ನೇತೃತ್ವದಲ್ಲಿ ಆಗಮಿಸಿ ಅನಂತಕುಮಾರ್ ಅವರನ್ನು ಭೇಟಿಯಾಗಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಳ್ಳುವಂತೆ ವಿನಂತಿಸಿದರು.