ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 28 ಸ್ಥಾನಗಳ ಪೈಕಿ ಭರ್ಜರಿ 22-24 ಸ್ಥಾನ ಪಡೆಯಲಿದೆ. ಕಾಂಗ್ರೆಸ್‌ಗೆ ಕೇವಲ 4-6 ಸ್ಥಾನ ಬರುವ ನಿರೀಕ್ಷೆ ಇದೆ ಎಂದು ಎಬಿಪಿ ನ್ಯೂಸ್ ಹಾಗೂ ಸಿ-ವೋಟರ್ ಸಮೀಕ್ಷೆ ಹೇಳಿದೆ.
ಇನ್ನು ಬಿಜೆಪಿ ಶೇ.52, ಕಾಂಗ್ರೆಸ್ ಶೇ.43 ಹಾಗೂ ಇತರರು ಶೇ.5 ಮತ ಗಳಿಸಬಹುದು ಎಂದು ಅದು ಅಂದಾಜಿಸಿದೆ.ಇತ್ತೀಚೆಗಷ್ಟೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡ ಪರಿಣಾಮ ಉಭಯ ಪಕ್ಷಗಳಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಬಣ್ಣಿಸಲಾಗಿದೆ.
ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿಯಿಂದ 25 ಸಂಸದರಿದ್ದು, ಒಬ್ಬರು ಪಕ್ಷೇತರ ಸಂಸದರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಅಲ್ಲದೆ ಜೆಡಿಎಸ್ ಕೂಡ ಒಬ್ಬರು ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಗೆದ್ದಿರುವ ಏಕಮಾತ್ರ ಕ್ಷೇತ್ರವನ್ನು ಬಿಟ್ಟು ಉಳಿದ 27 ಸ್ಥಾನಗಳಲ್ಲೂ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳೇ ಸಂಸದರಾಗಿದ್ದಾರೆ.ರಾಜಸ್ಥಾನ, ಛತ್ತೀಸ್‌ಗಢ, ಮ.ಪ್ರ.ದಲ್ಲಿ ಬಿಜೆಪಿ ಕಮಾಲ್:
ಇತ್ತೀಚೆಗೆ ವಿಧಾನಸಭೆ ಚುನಾವಣೆ ನಡೆದ ರಾಜಸ್ಥಾನದಲ್ಲಿ ಬಿಜೆಪಿ 23-25 ಸ್ಥಾನ ಹಾಗೂ ಕಾಂಗ್ರೆಸ್ 2 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಇನ್ನು ಛತ್ತೀಸ್‌ಗಢದಲ್ಲಿ ಬಿಜೆಪಿ 9ರಿಂದ 11 ಹಾಗೂ ಕಾಂಗ್ರೆಸ್ ಶೂನ್ಯದಿಂದ 2 ಸ್ಥಾನ ಜಯಿಸುವ ನಿರೀಕ್ಷೆ ಇದೆ. ಮಧ್ಯಪ್ರದೇಶದಲ್ಲಿ ಬಿಜೆಪಿ 27ರಿಂದ 29 ಹಾಗೂ ಕಾಂಗ್ರೆಸ್ 0-2 ಸ್ಥಾನ ಜಯಿಸಬಹುದು ಎಂದು ಸಮೀಕ್ಷೆ ಹೇಳಿದೆ.ತೆಲಂಗಾಣದಲ್ಲಿ ಕಾಂಗ್ರೆಸ್ ಕಮಾಲ್:
ಆದರೆ ಇತ್ತೀಚೆಗೆ ವಿಧಾನಸಭೆ ಚುನಾವಣೆ ಎದುರಿಸಿದ ಇನ್ನೊಂದು ರಾಜ್ಯವಾದ ತೆಲಂಗಾಣದಲ್ಲಿ ಕಾಂಗ್ರೆಸ್ 9ರಿಂದ 11, ಬಿಜೆಪಿ 1ರಿಂದ 3, ಬಿಆರ್‌ಎಸ್ 3-5 ಹಾಗೂ ಇತರರು 1-3 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.