ಯಲಹಂಕದಲ್ಲಿ ರಕ್ಷಾ ರಾಮಯ್ಯ ಪರವಾಗಿ ಖರ್ಗೆ, ಡಿಕೆಶಿ ರಣಕಹಳೆ

KannadaprabhaNewsNetwork |  
Published : Apr 23, 2024, 01:45 AM ISTUpdated : Apr 23, 2024, 04:26 AM IST
ಯಲಹಂಕದ ಮಾದನಾಯಕನಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪ್ರಚಾರ ಮಾಡಿದರು. | Kannada Prabha

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಣಕಹಳೆ ಮೊಳಗಿಸಿದ್ದಾರೆ.

  ಯಲಹಂಕ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಣಕಹಳೆ ಮೊಳಗಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ ನೆಲ, ದಲಿತ ಸಮುದಾಯದ ಅಸ್ಮಿತೆ, ಹಿರಿಯ ಮುತ್ಸದ್ಧಿ ದಿವಂಗತ ಬಿ.ಬಸವಲಿಂಗಪ್ಪ ಕರ್ಮಭೂಮಿಯಲ್ಲಿ ಚಿಕ್ಕಬಳ್ಳಾಪುರದ ರಣಕಣದಲ್ಲಿ ಕಾಂಗ್ರೆಸ್‌ ವರಿಷ್ಠ ನಾಯಕರು ವಿಜಯದ ಕಹಳೆ ಊದಿದರು.

ಮಾದನಾಯಕನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯ ಡಾ। ಎಂ.ಆರ್.‌ಸೀತಾರಾಂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸಂವಿಧಾನ ವಿರೋಧಿ, ರೈತ, ಜನರ ವಿರೋಧಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರು ವಾಗ್ದಾಳಿ ನಡೆಸಿದರು. ಇದಕ್ಕೂ ಮುನ್ನ ರಕ್ಷಾ ರಾಮಯ್ಯ ಅವರ ಪರವಾಗಿ ಬೃಹತ್‌ ಬೈಕ್‌ ಜಾಥಾ ನಡೆಯಿತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರಿಗಳನ್ನೆಲ್ಲಾ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಭ್ರಷ್ಟರು ಮೋದಿ ತೊಡೆಯ ಮೇಲೆಯೇ ಕುಳಿತಿದ್ದಾರೆ. ಮಹಾರಾಷ್ಟ್ರ ಸಿಎಂ ಸೇರಿದಂತೆ ಹಲವು ಮುಖಂಡರನ್ನು ಭ್ರಷ್ಟರು ಎಂದು ಹೇಳುತ್ತಿದ್ದರು. ಇದೀಗ ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ಮಾತ್ರ ಭ್ರಷ್ಟರು. ಇವರ ಪಕ್ಷಕ್ಕೆ ಸೇರಿದ ನಂತರ ದೊಡ್ಡ ಪರಿವರ್ತನೆಯಾಗುತ್ತಾರೆ. ಇವರ ಬಳಿ ದೊಡ್ಡ ಲಾಂಡ್ರಿ ಇದೆ. ಅದು ಬಟ್ಟೆ ಒಗೆಯುವ ಲಾಂಡ್ರಿಯಲ್ಲ. ಭ್ರಷ್ಟರೆಲ್ಲಾ ಒಳಗೆ ಹೋಗಿ ಕ್ಲೀನ್‌ ಆಗಿ ಹೊರ ಬಂದರೆ ಕ್ಲೀನ್‌ ಆಗುತ್ತಾರೆ. ಮೋದಿ ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ವಾಗ್ದಾಳಿ ನಡೆಸಿದರು.

ಮೋದಿ ನಿಜನೋ, ನೀವು ಹೇಳುತ್ತಿರುವುದು ಸರಿಯೋ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಎರಡುಪಟ್ಟು ಆಗಿದೆಯಾ. ಇದು ಕೂಡ ಸತ್ಯವೋ, ಸುಳ್ಳೋ ಎಂದು ಪ್ರಶ್ನಿಸಿದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಸುಧಾಕರ್‌ ಪರಾಭವಗೊಳ್ಳುವುದು ಖಚಿತ. ರಕ್ಷಾ ರಾಮಯ್ಯ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು.

ಸುಧಾಕರ್‌ ಕಾಂಗ್ರೆಸ್‌ಗೆ ಮೋಸ ಮಾಡಿದವರು, ಕೋವಿಡ್‌ ಸಂದರ್ಭದಲ್ಲಿ ಭಾರೀ ಭ್ರಷ್ಟಾಚಾರ ನಡೆಸಿದ್ದರು. ಇಂತಹವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಎಂದು ಯಲಹಂಕದಲ್ಲಿ ರಕ್ಷಾ ರಾಮಯ್ಯ ಅವರ ಪರವಾಗಿ ಭರ್ಜರಿ ಬ್ಯಾಟಿಂಗ್‌ ನಡೆಸಿದರು.

ರಕ್ಷಾ ರಾಮಯ್ಯ ಅವರ ಜೊತೆ ನಾನು, ಖರ್ಗೆ ಸಾಹೇಬರು, ಸಿದ್ದರಾಮಯ್ಯ ಅವರು ಇದ್ದೇವೆ. ನಾವು ಆಶೀರ್ವಾದ ಮಾಡಿದ್ದೇವೆ. ಜೊತೆಗೆ ಖರ್ಗೆ ಸಾಹೇಬರು ನೆಹರು, ಇಂದಿರಾಗಾಂಧಿ, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರು ಕುಳಿತ್ತಿದ್ದ ಜಾಗದಲ್ಲಿದ್ಧಾರೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.

ರಕ್ಷಾರಾಮಯ್ಯ ಅವರದ್ದು ದಾನ ಮಾಡುವ ಕೈ ಹೊರತು, ಇನ್ನೊಬ್ಬರ ಬಳಿ ಬೇಡುವ ಕೈಯಲ್ಲ. ಇವರನ್ನು ಗೆಲ್ಲಿಸಿ ದೆಹಲಿಯ ಸಂಸತ್ತಿಗೆ ಕಳುಹಿಸಿ. ನಿಮ್ಮ ಪರವಾಗಿ ದನಿ ಎತ್ತುವ ಯುವಕನ ಕೈ ಹಿಡಿಯಬೇಕು. ಇವರ ಕುಟುಂಬ ಕೊಡುಗೈ ದಾನಿಗಳ ಕುಟುಂಬ. ನಿಮ್ಮ ಸೇವೆಗೆ ಯುವಕ ಇದ್ದರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದರು.ಪ್ರತಿ ಕಾರ್ಯಕರ್ತರು ಮತದಾರರ ಮನೆಗೆ ಹೋಗಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸಬೇಕು. ಗ್ಯಾರಂಟಿಗಳಿಂದ ಕೈ ಗಟ್ಟಿಯಾಗಿದೆ. ಉಪ್ಪು ತಿಂದ ಮೇಲೆ, ಹಾಲು ಕುಡಿದ ಮೇಲೆ ಅದರ ಋಣ ತೀರಿಸುವ ಕೆಲಸ ಮತದಾರರ ಮೇಲಿದೆ.-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ.ಮೋದಿ ಅವರು ಹಿಂದಿನ ಚುನಾವಣೆಗಳಲ್ಲಿ ನೀಡಿದ ಗ್ಯಾರಂಟಿಗಳು ಏನಾಯಿತು. 2 ಕೋಟಿ ಉದ್ಯೋಗ, ₹15 ಲಕ್ಷ ರು. ನೀಡುವುದಾಗಿ ಹೇಳಿದ್ದರು. ಹತ್ತು ವರ್ಷಗಳಲ್ಲಿ ಇಪ್ಪತ್ತು ಕೋಟಿ ನೌಕರಿ ಕೊಡಬೇಕಾಗಿತ್ತು. ಈ ನೌಕರಿ ಯಾರಿಗಾದರೂ ತಲುಪಿದೆಯಾ?

-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!