ಬೆಂಗಳೂರು : ‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿಲ್ಲ ಎಂಬ ಕಾರಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ ಜನತೆ ಮೇಲೆ ದ್ವೇಷ ಸಾಧನೆಗೆ ಇಳಿದಿದ್ದಾರೆ. ಈ ಕುರಿತು ಕೇಂದ್ರದ ಅನ್ಯಾಯಗಳು, ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು 66 ಲಕ್ಷ ಕುಟುಂಬಗಳಿಗೆ ತಲುಪಿಸಲು ನಿರ್ಧರಿಸಿದ್ದೇವೆ. ಖಂಡಿತ ಈ ಬಾರಿ ಜನರು ಬದಲಾವಣೆಗೆ ಮತ ಚಲಾಯಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದಾಗ ಅಭಿವೃದ್ಧಿ, ಆರ್ಥಿಕತೆ ಬದಲಿಗೆ ದ್ವೇಷ ಹಾಗೂ ಕೋಮು ಧ್ರುವೀಕರಣದ ಭಾಷಣ ಮಾಡಿದ್ದಾರೆ. ಇದು ಬಿಜೆಪಿ ಸೋಲುವುದು ಖಚಿತ ಎಂಬುದರ ಮುನ್ಸೂಚನೆ. ಇದು ಬದಲಾವಣೆಯ ಚುನಾವಣೆಯಾಗಲಿದ್ದು, ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಕನ್ನಡಪ್ರಭ’ ಜತೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹಂಚಿದಂತೆ ದೇಶಾದ್ಯಂತ 8 ಕೋಟಿ ಗ್ಯಾರಂಟಿ ಕಾರ್ಡ್ ಹಂಚಲು ನಿರ್ಧರಿಸಿದ್ದೇವೆ. ಮಹಿಳಾ ನ್ಯಾಯ, ಯುವ ನ್ಯಾಯ, ಶ್ರಮಿಕ, ರೈತ ಹಾಗೂ ಸಾಮಾಜಿಕ ನ್ಯಾಯ ಹೆಸರಿನಲ್ಲಿ ಐದು ನ್ಯಾಯ ಹಾಗೂ 25 ಗ್ಯಾರಂಟಿಗಳ ಕಾರ್ಡನ್ನು ರಾಜ್ಯದಲ್ಲಿ 66 ಲಕ್ಷ ಮನೆಗಳಿಗೆ ತಲುಪಿಸುತ್ತಿದ್ದೇವೆ. ಇದೇ ವೇಳೆ ನರೇಂದ್ರ ಮೋದಿ ಅವರ ಕೋಮುವಾದಿ ಅಜೆಂಡಾವನ್ನೂ ಮನೆ-ಮನೆಗೂಮುಟ್ಟಿಸುತ್ತಿದ್ದೇವೆ. ಹೀಗಾಗಿ 20 ವರ್ಷಗಳ ಬಳಿಕ 2004ರ ಚುನಾವಣೆ ಫಲಿತಾಂಶ ಮರುಕಳಿಸಲಿದ್ದು, ಬಿಜೆಪಿ ಮನೆಗೆ ಹೋಗಲಿದೆ ಎಂದು ಹೇಳಿದರು.
ರಾಜ್ಯದ ಮೇಲೆ ಮೋದಿ ದ್ವೇಷ ಸಾಧನೆ:
ರಾಜ್ಯದ ಮತದಾರರು ಬಿಜೆಪಿಗೆ ಮತ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ರಾಜ್ಯದ ಜನತೆ ಬಗ್ಗೆ ಮೋದಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಅನ್ನಭಾಗ್ಯಕ್ಕೆ ಅಕ್ಕಿಯನ್ನೂ ನೀಡಲಿಲ್ಲ. ಬರ ಪರಿಹಾರ, ತೆರಿಗೆ ಪಾಲು, ಅನುದಾನ ನೀಡಲಿಲ್ಲ. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ನಾವು ಹೋರಾಟ ಮಾಡಿದ ಬಳಿಕ ಒಂದು ವಾರದಲ್ಲಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಇದು ರಾಜ್ಯದ ಜನತೆ ಮೇಲಿನ ದ್ವೇಷ ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿದರು
ರಾಮ ಪೂಜಾರಿ ವರ್ಸಸ್ ರಾಮ ವ್ಯಾಪಾರಿ
ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲಾಗದೆ ಧರ್ಮ, ದೇವರು, ಕೋಮು ದ್ವೇಷದ ಆಧಾರದ ಮೇಲೆ ಮೋದಿ ಮತ ಕೇಳುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಗೆ ನಾವು (ಕಾಂಗ್ರೆಸ್) ಹೋಗಿಲ್ಲ ಎಂದು ಟೀಕಿಸುತ್ತಾರೆ. ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವಾಗಿ ಮಾಡಿರುವ ಬಗ್ಗೆ ಶಂಕರಾಚಾರ್ಯರೇ ಟೀಕಿಸಿದ್ದಾರೆ. ನಾವು ರಾಮನ ಪೂಜೆ ಮಾಡುವ ರಾಮ ಪೂಜಾರಿಗಳು. ಅವರು ರಾಮನನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ರಾಮ ವ್ಯಾಪಾರಿಗಳು. ಹೀಗಾಗಿ ಇದು ರಾಮ ಪೂಜಾರಿ ವರ್ಸಸ್ ರಾಮ ವ್ಯಾಪಾರಿ ಚುನಾವಣೆ ಎಂದು ಜೈರಾಮ್ ರಮೇಶ್ ಹೇಳಿದರು.ಬಾಕ್ಸ್...
ಕಾಂಗ್ರೆಸ್ ಯುಕ್ತ ಬಿಜೆಪಿ
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳಿ ಕಾಂಗ್ರೆಸ್ ಯುಕ್ತ ಬಿಜೆಪಿ ಮಾಡುತ್ತಿದ್ದಾರೆ. ಐಟಿ, ಇ.ಡಿ. ತೋರಿಸಿ ಬೆದರಿಕೆ ಹಾಗೂ ಆಮಿಷವೊಡ್ಡಿ ಕಾಂಗ್ರೆಸ್ಸಿಗರನ್ನು ಸೆಳೆಯುತ್ತಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಹತ್ತು ಮಂದಿಗೆ ಟಿಕೆಟ್ ನೀಡಿದ್ದರೆ ಆರು ಮಂದಿ ಕಾಂಗ್ರೆಸ್‌ನವರಿದ್ದಾರೆ. ಎಲ್ಲಾ ಕಡೆಯೂ ಬಿಜೆಪಿಯಲ್ಲಿ ಕಾಂಗ್ರೆಸ್‌ನವರೇ ತುಂಬಿ ತುಳುಕುತ್ತಿದ್ದಾರೆ. ತನ್ಮೂಲಕ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಎಂದು ಹೇಳಿ ಕಾಂಗ್ರೆಸ್ ಯುಕ್ತ ಬಿಜೆಪಿ ಮಾಡುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಲೇವಡಿ ಮಾಡಿದರು.