ಪ್ರಣಾಳಿಕೆ ನನ್ನ ಪಾಲಿನ ಭಗವದ್ಗೀತೆ: ಸುಧಾಕರ್‌

KannadaprabhaNewsNetwork |  
Published : Apr 23, 2024, 12:52 AM ISTUpdated : Apr 23, 2024, 04:32 AM IST
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಕರ್‌ ಅವರು ಸೋಮವಾರ ಪ್ರಣಾಳಿಕ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

15 ಸಾವಿರ ಎಕರೆಯಲ್ಲಿ ಬೆಳೆಯುತ್ತಿರುವ ಹೂವಿನ ಕೃಷಿಗಾಗಿ ಪುಷ್ಪ ಮಂಡಳಿ ಸ್ಥಾಪಿಸಲಾಗುವುದು. ಇದು ಇಡೀ ದೇಶದ ಹೂವಿನ ಮಂಡಳಿ ಆಗಲಿದೆ. ಇದು ನನ್ನ ರೈತರಿಗೆ ನಾನು ನೀಡುವ ಉಡುಗೊರೆ. ಚಿಕ್ಕಬಳ್ಳಾಪುರಕ್ಕೆ ಹಾಲು ಒಕ್ಕೂಟ ತರುವ ಗುರಿ ಇದೆ ಎನ್ನುತ್ತಾರೆ ಡಾ.ಸುಧಾಕರ್‌

 ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ತಾವು ಮಾಡಲಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಇದು ನನಗೆ ಭಗವದ್ಗೀತೆಯಾಗಿದ್ದು, ಶ್ರದ್ಧಾಭಕ್ತಿಯಿಂದ ಸಾಕಾರಗೊಳಿಸುತ್ತೇನೆ ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.

ಪ್ರಣಾಳಿಕೆ ಬಿಡುಗಡೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಶಾಸಕನಾಗುವ ಮುನ್ನವೇ ಪ್ರಣಾಳಿಕೆಯ ಬಗ್ಗೆ ಚಿಂತನೆ ಇತ್ತು. ಪ್ರಣಾಳಿಕೆ ಎನ್ನುವುದು ಕೇವಲ ಕಾಗದವಲ್ಲ, ಇದು ನನ್ನ ಭಗವದ್ಗೀತೆ. ನಾನು ದೇವರನ್ನು, ತಾಯಿಯನ್ನು ಆರಾಧಿಸುವಂತೆ ಪ್ರಣಾಳಿಕೆಯನ್ನು ಶ್ರದ್ಧೆ, ಭಕ್ತಿಯಿಂದ 5 ವರ್ಷ ನೆನಪಿನಲ್ಲಿಟ್ಟುಕೊಂಡು ಸಾಕಾರಗೊಳಿಸುತ್ತೇನೆ. ಪ್ರತಿ ವರ್ಷ ಇದರ ರಿಪೋರ್ಟ್‌ ಕಾರ್ಡ್‌ ನೀಡುತ್ತೇನೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಕೈ ಬಲಪಡಿಸಿ

ನನ್ನ ಕೈಗೊಂಡ ಅಭಿವೃದ್ಧಿಗೆ ಮಾದರಿಯಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೇ ಇದೆ. ದೇಶವನ್ನು ಬಲಿಷ್ಠವಾಗಿ ಕಟ್ಟುವ ಸಮಯದಲ್ಲಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ನನ್ನನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು, ಮೋದಿ ಗ್ಯಾರಂಟಿ ಏನು ಎಂಬ ಪ್ರಣಾಳಿಕೆ ನೀಡಿದ್ದಾರೆ. ರೈತನ ಮಗನಾಗಿ ನಾನು ಏನು ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ಬಯಲುಸೀಮೆ ಭಾಗಕ್ಕೆ ಕುಡಿಯುವ ನೀರಿನ ಜೊತೆಗೆ ರಾಷ್ಟ್ರೀಯ ಯೋಜನೆಯಾಗಿ ಶಾಶ್ವತ ನೀರಾವರಿ ಯೋಜನೆ ನೀಡುತ್ತೇನೆ. ಕೆಸಿ ವ್ಯಾಲಿ, ಎಚ್‌ಎನ್‌ ವ್ಯಾಲಿಯಲ್ಲಿ ತೃತೀಯ ಹಂತದ ಸಂಸ್ಕರಣೆಯ ನೀರನ್ನು ಬಾಗೇಪಲ್ಲಿ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೆ ತರಲಾಗುವುದು ಎಂದರು.

ಪುಷ್ಪ ಮಂಡಳಿ ಉಡುಗೊರೆ

15 ಸಾವಿರ ಎಕರೆಯಲ್ಲಿ ಬೆಳೆಯುತ್ತಿರುವ ಹೂವಿನ ಕೃಷಿಗಾಗಿ ಪುಷ್ಪ ಮಂಡಳಿ ಸ್ಥಾಪಿಸಲಾಗುವುದು. ಇದು ಇಡೀ ದೇಶದ ಹೂವಿನ ಮಂಡಳಿ ಆಗಲಿದೆ. ಇದು ನನ್ನ ರೈತರಿಗೆ ನಾನು ನೀಡುವ ಉಡುಗೊರೆ. ಚಿಕ್ಕಬಳ್ಳಾಪುರಕ್ಕೆ ಹಾಲು ಒಕ್ಕೂಟ ತರುವ ಗುರಿ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಕಾರ್ಮಿಕರಿರುವ ಸ್ಥಳದಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಿಸುವ ಗುರಿ ಇದೆ ಎಂದು ತಿಳಿಸಿದರು.

ಸರ್‌ ಎಂ.ವಿಶ್ವೇಶರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿ ಐಐಟಿ ತರುವ ಉದ್ದೇಶವಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜಿಲ್ಲ. ಇಲ್ಲಿಗೆ ಕೇಂದ್ರ ಸರ್ಕಾರದಿಂದ ಮೆಡಿಕಲ್‌ ಕಾಲೇಜು ತರಲು ಕ್ರಮ ವಹಿಸುತ್ತೇನೆ ಎಂದರು.

ಉಪನಗರಗಳಾಗಿ ಅಭಿವೃದ್ಧಿ

ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡಲು ಬೇರೆ ನಗರಗಳನ್ನು ಬೆಳೆಸಬೇಕಿದೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಚಿಕ್ಕಬಳ್ಳಾಪುರವನ್ನು ಉಪನಗರಗಳಾಗಿ ಬೆಳೆಸಬೇಕಿದೆ. ರೈಲ್ವೆ ಸಂಪರ್ಕ ಬಹಳ ಕಡಿಮೆ ಇದ್ದು, ವರ್ತುಲ ರೈಲ್ವೆ ಜಾಲವನ್ನು ಕಲ್ಪಿಸಬೇಕಿದೆ. ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಮತ್ತು ಅಲ್ಲಿಂದ ದೊಡ್ಡಬಳ್ಳಾಪುರ, ನೆಲಮಂಗಲ ಮೊದಲಾದ ಕಡೆ ವಿಸ್ತರಿಸಲು ಪ್ರಯತ್ನಿಸುವೆ ಎಂದು ವಿವರಿಸಿದರು.

ನನ್ನ 8 ಕ್ಷೇತ್ರಗಳಲ್ಲಿ 20-30 ಸಾವಿರ ಮಹಿಳಾ ಸಂಘಗಳನ್ನು ರೂಪಿಸಿ, ಮುದ್ರಾ ಯೋಜನೆ ತಲುಪಿಸುವ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಬಡವರಿಗೆ ಕನಿಷ್ಠ 50 ಸಾವಿರ ಮನೆಗಳನ್ನು ಕಟ್ಟಿಸಿಕೊಡಲು ಮಾತು ನೀಡುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ಸಣ್ಣ ಫಾರ್ಮಾ ಪಾರ್ಕ್‌ ನಿರ್ಮಿಸಲು ಯೋಜನೆ ತರಲಾಗುವುದು. ಕೇಂದ್ರ ಸರ್ಕಾರದ ಅನುದಾನ ಬಳಸಿ, ಮುದ್ದೇನಹಳ್ಳಿ, ಸುಲ್ತಾನ್‌ಪೇಟೆ, ಈಶ ಫೌಂಡೇಶನ್‌ ಸೇರಿದಂತೆ ಟೂರಿಸಂ ಕಾರಿಡಾರ್‌ ರೂಪಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಎತ್ತಿನಹೊಳೆ ಬಗ್ಗೆ ಕೇಂದ್ರದ ಜತೆ ಚರ್ಚೆ

ಎತ್ತಿನಹೊಳೆ ಯೋಜನೆ ಡಿ.ವಿ.ಸದಾನಂದಗೌಡರು ಸಿಎಂ ಆಗಿದ್ದಾಗ ಜಾರಿಯಾಗಿದ್ದು, ಕಾಂಗ್ರೆಸ್‌ ಸರ್ಕಾರದಿಂದಾಗಿ ಅದು ಇನ್ನೂ ಸಕಲೇಶಪುರದಲ್ಲೇ ಉಳಿದಿದೆ. ಇದನ್ನು ರಾಷ್ಟ್ರೀಯ ಯೋಜನೆಯಾಗಿಸಲು ಸಾಧ್ಯವಿದೆಯೇ ಎಂದು ಪರಿಶೀಲಿಸಬೇಕಿದೆ. ತಾಂತ್ರಿಕವಾಗಿ, ಕಾನೂನಾತ್ಮಕವಾಗಿ ಚರ್ಚಿಸಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಹಾಗೆಯೇ ಬಾಗೇಪಲ್ಲಿ ಅಥವಾ ಗೌರಿಬಿದನೂರಿನಲ್ಲಿ ಸೌರ ವಿದ್ಯುತ್‌ ಪಾರ್ಕ್‌ ನಿರ್ಮಿಸುವ ಗುರಿ ಇದೆ ಎಂದು ಡಾ। ಕೆ.ಸುಧಾಕರ್‌ ತಿಳಿಸಿದರು.

ಕ್ರೀಡಾ ಹಳ್ಳಿ ರೂಪಿಸಲು ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ಸ್ಟೇಡಿಯಂ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ಇದಕ್ಕಾಗಿ ಸಿಎಸ್‌ಆರ್‌ ಅನುದಾನ ಬಳಸಿಕೊಳ್ಳಲಾಗುವುದು.

-ಡಾ. ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಎನ್‌ಡಿಎ ಅಭ್ಯರ್ಥಿ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು