ಮಂಡ್ಯ: ಕಂಟ್ರೋಲ್ ತಪ್ಪಿದ ಮಗನನ್ನು ಕಾಪಾಡುವ ಸಲುವಾಗಿ ಅಸಹಾಯಕ ತಂದೆ ಪುತ್ರನ ಬೆನ್ನಟ್ಟಿ ಓಡುತ್ತಿದ್ದಾರೆ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಕುರಿತಂತೆ ಸಾಹಿತಿ ದೇವನೂರು ಮಹಾದೇವ ವಿಶ್ಲೇಷಿಸಿದರು.
ಕಂಟ್ರೋಲ್ ತಪ್ಪಿದ ಮಗ ಎಚ್.ಡಿ.ಕುಮಾರಸ್ವಾಮಿ ಎಲ್ಲಿ ಬಿದ್ದು ಗಾಯ ಮಾಡಿಕೊಳ್ಳುವನೋ ಎಂಬ ಭೀತಿಯಿಂದ ಇಳಿವಯಸ್ಸಿನಲ್ಲೂ ಮಗನ ಹಿಂದೆ ಓಡುತ್ತಿರುವ ಅಸಹಾಯಕ ತಂದೆಯಂತೆ ಎಚ್.ಡಿ.ದೇವೇಗೌಡರು ಕಾಣಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2006 ರಲ್ಲಿದ್ದಂತೆ ದೇವೇಗೌಡರು ಈಗ ತಳಮಳಿಸುತ್ತಿಲ್ಲ. ಹಸನ್ಮುಖರಾಗಿ ಜೆಡಿಎಸ್ ಮತ್ತು ಬಿಜೆಪಿಗೆ ಕೂಡಾವಳಿ ಮಾಡಿಕೊಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಳ್ವಿಕೆ ನಡೆಸಿರುವ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸಖ್ಯ ಮಾಡಿಕೊಂಡು, ಲೋಕಸಭೆಗೆ ಸ್ಪರ್ಧಿಸುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ಕಳೆದುಕೊಂಡರೇನೋ ಎಂದೆನಿಸುತ್ತದೆ ಎಂದರು.
ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಾಕ್ಷಣವೇ ಅದರ ಹೆಸರಿಗೆ ಅಂಟಿಕೊಂಡಿದ್ದ ಜಾತ್ಯತೀತ ಕಳಚಿ ಬಿದ್ದಿದೆ. ಮಹಿಳೆಯು ಹೊತ್ತ ಹೊರೆಯಲ್ಲಿನ ತೆನೆಗಳನ್ನು ಬಿಜೆಪಿ ಕತ್ತರಿಸಿಕೊಳ್ಳುತ್ತದೆ. ಆಗ ಈ ಮಹಿಳೆಯು ತೆನೆಯಿಲ್ಲದ ಖಾಲಿ ಹೊರೆ ಹೊತ್ತು ಘನತೆ ಇಲ್ಲದ ಸೇವಕಿಯಾಗಿ ದುಡಿಯುತ್ತಾಳೆ ಎಂದು ವ್ಯಂಗ್ಯವಾಡಿದರು.
ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡುವಂತಹ ಪಕ್ಷಗಳನ್ನು ದೂರವಿಟ್ಟು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳನ್ನು ರಾಜ್ಯದಲ್ಲಿ ಸೋಲಿಸಲೇಬೇಕು. ಆಗ ಮಾತ್ರ ಬಹುತ್ವ ಭಾರತದ ಸಹಬಾಳ್ವೆ, ನ್ಯಾಯ ಸಮಾನತೆಯ ನಮ್ಮ ಪುರಾತನ ಧರ್ಮಗಳ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಹೇಳಿದರು.
ಮೋದಿಯವರು 2047ನೇ ಇಸವಿಗೆ ಕನಸು ಕಾಣುತ್ತಿರುವ ವಿಕಸಿತ ಭಾರತ ಅಥವಾ ಹಿಂದುತ್ವ ಭಾರತ ಯಾವುದು? ಹಿಂದುತ್ವ ಅಂದರೆ, ಬಹುಸಂಖ್ಯಾತರಾದ ಲಿಂಗಾಯತ, ಒಕ್ಕಲಿಗರಾದಿಯಾಗಿ ಉಳಿದೆಲ್ಲಾ ತಳಸಮುದಾಯಗಳನ್ನು ಮತ್ತೆ ಸೇವಕರನ್ನಾಗಿಸುವ ಹುನ್ನಾರ. ಇದು ಭಾರತಕ್ಕೆ ವಿಷವಿಕ್ಕಿದಂತೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಚಾತುರ್ವರ್ಣ ಸಮಾಜ ಉಂಟುಮಾಡುವುದೇ ದೇವರ ಸಾಕ್ಷಾತ್ಕಾರ ಎಂದು ಆರ್‌ಎಸ್‌ಎಸ್‌ನ ಗುರು ಗೋಲ್ವಾಲ್ಕರ್ ದಾಖಲು ಮಾಡಿದ್ದಾರೆ ಈ ದೇವರನ್ನು ಸಾಕ್ಷಾತ್ಕರಿಸಲು ಮೋದಿಯವರು ಕಾರ್ಯತತ್ಪರರಾಗಿದ್ದಾರೆ ಎಂದು ದೂರಿದರು.
ಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ಸರ್ವೋದಯ ಕರ್ನಾಟಕ ಪಕ್ಷದ ಪ್ರಸನ್ನ ಎನ್.ಗೌಡ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ರಮೇಶ್, ಎಸ್.ಕೆ.ರವಿಕುಮಾರ್, ದೇವರಾಜು, ಲಿಂಗಪ್ಪಾಜಿ ಹಾಜರಿದ್ದರು.