;Resize=(412,232))
ನವದೆಹಲಿ: ಉತ್ತರಾಖಂಡದಲ್ಲಿ ತಾವು ಸಾರ್ವಜನಿಕ ಸಭೆ ನಡೆಸಿದ ಜಾಗವನ್ನು ಬಲಪಂಥೀಯ ಸಂಘಟನೆಯೊಂದು ‘ಶುದ್ಧೀಕರಣ’ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸ್ವಪಕ್ಷದವರಿಂದಲೇ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಖರ್ಗೆ, ಶುದ್ಧೀಕರಣ ಹೋಮ ಮಾಡಿದ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡೆಯನ್ನು ಉತ್ತರಾಖಂಡದ ಕಾಂಗ್ರೆಸ್ ಘಟಕ ಗಟ್ಟಿಧ್ವನಿಯಲ್ಲಿ ಖಂಡಿಸಿದ್ದನ್ನು ಶ್ಲಾಘಿಸಿದರು.
ಆದರೆ ಇದೇ ವೇಳೆ, ‘ಚೆನ್ನಾಗಿ ಬರೆಯುವವರು ಮತ್ತು ಚೆನ್ನಾಗಿ ಕಾಣುವವರು ಈ ಘಟನೆಯ ಬಗ್ಗೆ ಮಾತೇ ಆಡಲಿಲ್ಲ’ ಎಂದು ಲಘು ಶೈಲಿಯಲ್ಲಿ ಹೇಳಿದರು. ಈ ಮೂಲಕ ತಮ್ಮ ಪಕ್ಷದಲ್ಲೇ ಪತ್ರಿಕೆಗಳಲ್ಲಿ ಲೇಖನ ಬರೆಯುವ ಹಾಗೂ ‘ಚೆನ್ನಾಗಿ ಕಾಣುವ’ ಕೆಲವು ನಾಯಕರ ಬಗ್ಗೆ ಅವರು ಚಾಟಿ ಬೀಸಿದರು ಎಂದು ಮೂಲಗಳು ಹೇಳಿವೆ.
ಜತೆಗೆ, ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಕ್ರಮಣಕಾರಿ ನಿಲುವು ತಳೆಯಬೇಕು ಹಾಗೂ ಜಾತಿ ಆಧರಿತ ತಾರತಮ್ಯದ ವಿರುದ್ಧ ಹೋರಾಡಬೇಕು ಎಂದು ಆಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.
ಖರ್ಗೆ ಅವರು ಉತ್ತರಾಖಂಡದ ರಾಮ್‌ಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ 2 ದಿನಗಳ ಬಳಿಕ ಅಲ್ಲಿ ಶುದ್ಧೀಕರಣ ಹೋಮ ಮಾಡಲಾಗಿತ್ತು. ಇದು ಬಿಜೆಪಿಗರ ಕೆಲಸ ಎಂಬ ಕಾಂಗ್ರೆಸ್‌ನ ಆರೋಪವನ್ನು ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿರಸ್ಕರಿಸಿದ್ದರು. ಜತೆಗೆ ಘಟನೆಯನ್ನು ಖಂಡಿಸಿದ್ದರು.