ಕಾಂಗ್ರೆಸ್‌ ಎರಡೂ ಬಣದಲ್ಲಿ ಖರ್ಗೆ ಮಾತಿಂದ ಸಂಚಲನ

Published : May 02, 2026, 07:08 AM IST
Mallikarjun kharge

ಸಾರಾಂಶ

ಅಧಿಕಾರ ಹಸ್ತಾಂತರ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎರಡು ದಿನದಲ್ಲಿ ನೀಡಿದ ಎರಡು ಭಿನ್ನ ಅರ್ಥ ಬರುವ ಹೇಳಿಕೆಗಳು ಕಾಂಗ್ರೆಸ್‌ನಲ್ಲಿ ಭಾರಿ ಸಂಚಲನ ಹುಟ್ಟುಹಾಕಿದ್ದು, ಎರಡೂ ಬಣಗಳಲ್ಲಿ ಒಳ ಚರ್ಚೆ ತೀವ್ರಗೊಂಡಿದೆ.

  ಬೆಂಗಳೂರು :  ಅಧಿಕಾರ ಹಸ್ತಾಂತರ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎರಡು ದಿನದಲ್ಲಿ ನೀಡಿದ ಎರಡು ಭಿನ್ನ ಅರ್ಥ ಬರುವ ಹೇಳಿಕೆಗಳು ಕಾಂಗ್ರೆಸ್‌ನಲ್ಲಿ ಭಾರಿ ಸಂಚಲನ ಹುಟ್ಟುಹಾಕಿದ್ದು, ಎರಡೂ ಬಣಗಳಲ್ಲಿ ಒಳ ಚರ್ಚೆ ತೀವ್ರಗೊಂಡಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಸದ್ಯ ಮುಖ್ಯಮಂತ್ರಿ ಬದಲಾವಣೆಯಿಲ್ಲ ಎಂದಿದ್ದರು. ಶುಕ್ರವಾರ ನಾಯಕತ್ವ ಬದಲಾವಣೆ ಬಗ್ಗೆ ದಿನಾಂಕ ನಿಗದಿಯಾಗಿಲ್ಲ. ನಿಗದಿಯಾದರೆ ಹೈಕಮಾಂಡ್‌ (ಸೋನಿಯಾ, ರಾಹುಲ್‌ ಹಾಗೂ ತಾವು) ಸೇರಿ ಪಕ್ಷ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಈ ಹೇಳಿಕೆಗಳು ಕಾಂಗ್ರೆಸ್‌ ಅಂತರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಉಭಯ ಬಣಗಳಲ್ಲೂ ಒಳ ಚರ್ಚೆ ಆರಂಭಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ತುಸು ಹೆಚ್ಚೇ ಚರ್ಚೆ ನಡೆದಿದೆ. ವಿಶೇಷವಾಗಿ ದೆಹಲಿ ಬೆಳವಣಿಗೆಗಳ ಬಗ್ಗೆ ಸೂಕ್ಷ್ಮ ನೋಟ ಹೊಂದಿರುವ ಬಿ.ಕೆ. ಹರಿಪ್ರಸಾದ್‌ ಅವರು ಶುಕ್ರವಾರ ಹಠಾತ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಒಂದು ತಾಸಿಗೂ ಹೆಚ್ಚು ಚರ್ಚೆ:

ನಂತರ ಹರಿಪ್ರಸಾದ್‌, ಸಚಿವರಾದ ಡಾ.ಜಿ.ಪರಮೇಶ್ವರ್‌ ಹಾಗೂ ಜಮೀರ್‌ ಅಹ್ಮದ್‌ ಪ್ರತ್ಯೇಕವಾಗಿ ಒಂದು ತಾಸಿಗೂ ಹೆಚ್ಚಿನ ಕಾಲ ಚರ್ಚೆ ನಡೆಸಿದರು. ಈ ಚರ್ಚೆ ವಿಷಯ ಬಗ್ಗೆ ಮೂವರು ನಾಯಕರು ಮುಗುಂ ಆಗಿದ್ದಾರೆ. ಆದರೆ, ಮೂಲಗಳ ಪ್ರಕಾರ ಪಂಚ ರಾಜ್ಯ ಚುನಾವಣೆ ಫಲಿತಾಂಶ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದರೆ ಯಾವ್ಯಾವ ವಿಷಯ ಮಂಡಿಸಬೇಕು ಹಾಗೂ ಹೈಕಮಾಂಡ್‌ನಿಂದ ಯಾವ್ಯಾವ ವಿಚಾರ ಮಂಡನೆಯಾಗಬಹುದು, ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಕಾರ್ಯತಂತ್ರದ ಬಗ್ಗೆ ವಿಚಾರ ವಿಮರ್ಶೆ ನಡೆಯಿತು ಎನ್ನಲಾಗಿದೆ.

ಈ ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 6ರ ಬಳಿಕ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಹೀಗೆ ಒಂದು ವೇಳೆ ಮೇ 6ರ ನಂತರ ಸಿಎಂ ದೆಹಲಿಗೆ ತೆರಳಿದರೆ ಅವರು ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಮುಂದೆ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಆದರೆ, ಸಿದ್ದರಾಮಯ್ಯ ಅವರು ದೆಹಲಿಗೆ ಹೋದಾಗ ಮುಖ್ಯಮಂತ್ರಿ ಬದಲಾವಣೆ ವಿಷಯವೂ ಚರ್ಚೆಯಾಗಬಹುದು ಎಂಬ ವಿಶ್ವಾಸದಲ್ಲಿ ಡಿ.ಕೆ. ಶಿವಕುಮಾರ್‌ ಬಣ ಇದೆ.

ಜೇನುಗೂಡಿಗೆ ಕೈಹಾಕಲ್ಲ:

ಮುಖ್ಯಮಂತ್ರಿ ಅವರ ಬಣದ ಮೂಲಗಳ ಪ್ರಕಾರ, ವಿಧಾನಪರಿಷತ್‌ನ 12 ಸ್ಥಾನಗಳು ಖಾಲಿಯಾಗಲಿದ್ದು, ಇದರಲ್ಲಿ ಏಳು ಸ್ಥಾನಗಳಿಗೆ ವಿಧಾನಸಭೆಯಿಂದ ಚುನಾವಣೆ ನಡೆಯಲಿದೆ. ಬಳಿಕ ರಾಜ್ಯಸಭೆ ಚುನಾವಣೆ ಬರಲಿದೆ. ಇಂಥ ಪ್ರಮುಖ ಚುನಾವಣೆಗೆ ಮೊದಲು ಅಧಿಕಾರ ಹಂಚಿಕೆಯಂಥ ಜೇನುಗೂಡಿಗೆ ಕೈಹಾಕುವುದಿಲ್ಲ. ಒಂದೊಮ್ಮೆ ಈ ಬಗ್ಗೆ ಚರ್ಚೆ ಶುರುವಾದರೆ ಪಕ್ಷದಲ್ಲಿ ಬಣಗಳು ಕವಲು ಒಡೆಯಲಿವೆ. ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಜೂನ್‌-ಜುಲೈವರೆಗೂ ಅಧಿಕಾರ ಹಂಚಿಕೆ ಕುರಿತ ಅಸ್ಪಷ್ಟತೆ ಮುಂದುವರೆಯಲಿದೆ ಎಂದು ವಾದಿಸುತ್ತದೆ.

ಅಲ್ಲದೆ, ಮತ್ತೊಂದೆಡೆ ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ಕೇರಳದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ರಾಹುಲ್‌ಗಾಂಧಿ ಅವರು ಸರ್ಕಾರ ರಚನೆ ಚಟುವಟಿಕೆಯಲ್ಲಿ ತೊಡಗಲಿದ್ದಾರೆ. ಸುದೀರ್ಘ ಚುನಾವಣಾ ಪ್ರಚಾರದ ಬಳಿಕ ರಾಹುಲ್‌ಗಾಂಧಿ ಅವರಿಗೆ ವಿದೇಶ ಪ್ರವಾಸ ಹೋಗುವ ರೂಢಿಯಿದೆ. ಹೀಗಾದರೆ ಅದು ಮತ್ತಷ್ಟು ಮುಂದಕ್ಕೆ ಹೋಗಲಿದೆ ಎಂಬುದು ಈ ಬಣದ ವಾದ.

ಆದರೆ, ಡಿ.ಕೆ.ಶಿವಕುಮಾರ್‌ ಬಣದ ನಾಯಕರು, ಈಗಾಗಲೇ ಅಧಿಕಾರ ಹಂಚಿಕೆ ವಿಷಯವನ್ನು ತುಂಬಾ ದಿನಗಳಿಂದ ಎಳೆದುಕೊಂಡು ಬರಲಾಗಿದೆ. ವರಿಷ್ಠರು ಯಾವುದಾದರೂ ಒಂದು ಅಂತಿಮ ನಿಲುವು ತೆಗೆದುಕೊಳ್ಳುವ ಒತ್ತಡದಲ್ಲಿದ್ದಾರೆ. ಗೊಂದಲ ಮುಂದುವರೆಯುವುದು ಪಕ್ಷಕ್ಕೂ ಪೂರಕ ವಾತಾವರಣ ಸೃಷ್ಟಿಸುತ್ತಿಲ್ಲ. ಹೀಗಾಗಿ ಸ್ಪಷ್ಟತೆ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ’ ಎಂದ ಮರುದಿನವೇ ಸ್ಪಷ್ಟನೆ
ಬ್ರಾಂಡ್‌ ಬೆಂಗ್ಳೂರಿನ 4 ಯೋಜನೆಗಳ ಉದ್ಘಾಟಿಸಿದ ಡಿ.ಕೆ.ಶಿವಕುಮಾರ್