ದೇಶಕ್ಕೆ ಮೋದಿ ಕೊಟ್ಟ ಬಿಜೆಪಿಗೆ ಈಗ 45 : ಅಟಲ್ ಅವರು ಹೇಳಿದ ಭವಿಷ್ಯ ಈಗ ನಿಜವಾಗಿದೆ

ಸಾರಾಂಶ

1984ರಲ್ಲಿ 2 ಸ್ಥಾನದಲ್ಲಿ ಗೆಲುವು ಪಡೆದಿದ್ದ ಪಕ್ಷ ಇಂದು 18 ಕೋಟಿ ಸದಸ್ಯರ ದೊಡ್ಡ ಕುಟುಂಬವನ್ನು ಹೊಂದಿದೆ. 370ರ ರದ್ಧತಿ, ರಾಮ ಮಂದಿರ, ತ್ರಿವಳಿ ತಲಾಖ್ ರದ್ಧತಿ, ವಕ್ಫ್‌ ತಿದ್ದುಪಡಿ ಕಾಯ್ದೆಯಂತಹ ಹಲವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

 ಕೋಟ ಶ್ರೀನಿವಾಸ ಪೂಜಾರಿ

ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

ಇಂದು ಬಿಜೆಪಿ

ಸಂಸ್ಥಾಪನಾ ದಿನ

 (1984ರಲ್ಲಿ 2 ಸ್ಥಾನದಲ್ಲಿ ಗೆಲುವು ಪಡೆದಿದ್ದ ಪಕ್ಷ ಇಂದು 18 ಕೋಟಿ ಸದಸ್ಯರ ದೊಡ್ಡ ಕುಟುಂಬವನ್ನು ಹೊಂದಿದೆ. 370ರ ರದ್ಧತಿ, ರಾಮ ಮಂದಿರ, ತ್ರಿವಳಿ ತಲಾಖ್ ರದ್ಧತಿ, ವಕ್ಫ್‌ ತಿದ್ದುಪಡಿ ಕಾಯ್ದೆಯಂತಹ ಹಲವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರಿಗೂ ಮನ್ನಣೆ ಸಿಗುತ್ತಿದೆ. ವಿದೇಶಗಳು ಕೂಡ ಮೋದಿ ನೋಡಿ ಹೆಜ್ಜೆಯಿಡುತ್ತಾರೆ)

ಇಂದಿಗೆ ಸರಿಸುಮಾರು ನಾಲ್ಕೂವರೆ ದಶಕಗಳ ಕೆಳಗೆ ಮುಂಬೈನ ಸಮತಾನಗರದಲ್ಲೊಂದು ಬಹುದೊಡ್ಡ ಸಾರ್ವಜನಿಕ ಸಭೆ. ವೇದಿಕೆಯ ಮೇಲೆ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ, ಸುಷ್ಮಾ ಸ್ವರಾಜ್‌ರಂತಹ ಗಣ್ಯಾತಿಗಣ್ಯರ ದಂಡು. ಆ ಕ್ಷಣದಲ್ಲಿ ಭಾರತ ದೇಶದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಂ.ಸಿ ಚಾಘ್ಲಾ ದೀಪ ಬೆಳಗಿಸುವುದರ ಮೂಲಕ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಉದ್ಘಾಟಿಸಿದ್ದರು. ಸ್ಥಾಪಕ ಅಧ್ಯಕ್ಷರಾಗಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಘೋಷಿಸಿದ್ದರು.

ಬೆಳ್ತಂಗಡಿಯ ಮೂಲ ಜನಸಂಘದ ಕಾರ್ಯಕರ್ತರಾಗಿದ್ದ ವಿಠಲ ಭಟ್, ತಮ್ಮಿಬ್ಬರು ಸ್ನೇಹಿತರೊಟ್ಟಿಗೆ ಬಿಜೆಪಿ ಸ್ಥಾಪನಾ ದಿನದ ಸಮಾವೇಶಕ್ಕೆ ಹೋಗಿದ್ದರು. ಮೊನ್ನೆ ಮೊನ್ನೆಯವರೆಗೆ ನಮ್ಮೊಂದಿಗೆ ಬದುಕಿ ಬಾಳಿದ ಅವರು ಪೇಟೆಯ ಮಧ್ಯದಲ್ಲಿ ಹೋಟೆಲೊಂದನ್ನು ನಡೆಸುತ್ತಿದ್ದರು. ಜನಸಂಘದ ಮತ್ತು ಬಿಜೆಪಿ ಸಿದ್ಧಾಂತದ ಬಗ್ಗೆ ಅವರ ಮಾತುಗಳು ಎಂಥವರ ಮನಸ್ಸಿನಲ್ಲೂ ನಾಟಿ ಉಳಿಯುತ್ತವೆ.

ಸಮಾವೇಶದಿಂದ ಹುಟ್ಟಿತ್ತು ಸಮತಾ ಹೋಟೆಲ್

ಬಿಜೆಪಿ ಉದಯಿಸಿದ ಸಮಾವೇಶದಲ್ಲಿ ಭಾಗಿಯಾದದ್ದು, ಆ ಸ್ಥಳವನ್ನು ಸಮತಾನಗರ ಎಂದು ಕರೆದದ್ದು, ಬಹಳ ದೂರದಲ್ಲಿದ್ದ ತಮಗೆ ವೇದಿಕೆಯಲ್ಲಿದ್ದ ಅಟಲ್, ಅಡ್ವಾಣಿ ಒಂದು ಹಕ್ಕಿಯಷ್ಟು ಗಾತ್ರದಲ್ಲಿ ಗೋಚರಿಸಿದ್ದು, ವಾಜಪೇಯಿ ಎಂದಿನ ತಮ್ಮ ವಾಗ್ಝರಿಯಿಂದ ರಾಷ್ಟ್ರ ಪ್ರೇಮದ ಕಿಚ್ಚನ್ನು ಹೊತ್ತಿಸಿದ್ದು ಅವರ ನೆನಪುಗಳು..

ಅಟಲ್ ಭಾಷಣ ಕೇಳಿ, ಬೆಳ್ತಂಗಡಿಗೆ ಬಂದು ಆರ್ಥಿಕ ಸಮಸ್ಯೆಯ ನಡುವೆಯೂ ತಾನೊಂದು ಹೋಟೆಲ್ ಆರಂಭಿಸಿ, ಸಮತಾನಗರದ ನೆನಪಿಗೋಸ್ಕರ ಹೋಟೆಲ್ ಸಮತಾ ಎಂದು ಹೆಸರಿಟ್ಟಿರುವುದಾಗಿ ವಿಠಲ್ ಭಟ್ ಎಳೆ ಎಳೆಯಾಗಿ ಮನದಾಳದ ಭಾವನೆಗಳನ್ನು ಹೇಳುವಾಗ ಬಿಜೆಪಿ ಸ್ಥಾಪನೀಯ ಕ್ಷಣಗಳನ್ನು ಕಣ್ಣಾರೆ ಕಂಡು ಬಂದ ಹಿರಿಯನ ಕಾಲಿಗೆ ನಮಸ್ಕರಿಸಿದೆ.

ಇಂತಹ ಕಾರಣಗಳಿಂದಲೇ ಬಿಜೆಪಿ ಇಂದು ಯಾವ ರಾಜಕೀಯ ಪಂಡಿತರ ಲೆಕ್ಕಾಚಾರಕ್ಕೂ ಸಿಗದಷ್ಟು ಎತ್ತರಕ್ಕೆ ಬೆಳೆದಿರುವುದು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೇಸರಿ ಧ್ವಜವನ್ನು ಹಾರಿಸಿ ಸೈದ್ಧಾಂತಿಕ ನಿಲುವನ್ನು ಸ್ಪಷ್ಟಪಡಿಸಿದೆ. ಯಾರೇನೆ ಎನ್ನಲಿ ‘ಪಾರ್ಟಿ ವಿದ್ ಡಿಫರೆನ್ಸ್’ ಎಂಬ ಮಾತನ್ನು ಉಳಿಸಿಕೊಂಡಿರುವುದು ಬಿಜೆಪಿ ಮಾತ್ರ.

ಇಂದಿಗೂ ಜಾತಿ, ಧರ್ಮಗಳಿಗಿಂತ ದೇಶ ಮೊದಲು ಎಂಬ ರಾಷ್ಟ್ರಭಕ್ತರ ಗುಡಾಣವಿಂದು ಬಿಜೆಪಿಯಲ್ಲಿ ತುಂಬಿ ತುಳುಕುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಾಗ ದೀಪದ ಚಿಹ್ನೆಯಡಿ ರಾಷ್ಟ್ರದಾದ್ಯಂತ ಸಂಘಟನೆಗೊಳ್ಳುತ್ತಿದ್ದ ಜನ ಸಂಘವನ್ನೇ ವಿಸರ್ಜಿಸಿ, ಜನತಾ ಪಕ್ಷದಲ್ಲಿ ವಿಲೀನಗೊಳಿಸುವುದರ ಮೂಲಕ ವ್ಯಕ್ತಿಗಿಂತ ದೇಶ ಮುಖ್ಯ ಎಂಬ ಯೋಚನೆ ವಾಜಪೇಯಿಯವರಲ್ಲಿ ಸ್ಪಷ್ಟವಾಗಿತ್ತು.

ಬದುಕು ಬಲಿದಾನ ಮಾಡಿದ್ದ ಮುಖರ್ಜಿ, ದಯಾಳ್

ಅನೇಕರು ಬಿಜೆಪಿ, ಜನಸಂಘ ದೇಶಕ್ಕೆ ತ್ಯಾಗ ಮಾಡಿದ್ದೇನು? ಎಂದು ಕೇಳುತ್ತಾರೆ. ಕಾಶ್ಮೀರದ ವಿಷಯ ಬಂದಾಗ ‘ದೋ ವಿಧಾನ್.. ದೋ ಪ್ರಧಾನ್.. ದೋ ನಿಶಾನ್ ನಹಿ ಚಲೇಂಗೆ’ ಎಂಬ ಘೋಷಣೆಯೊಂದಿಗೆ ಕಾಶ್ಮೀರವನ್ನು ಭಾರತದೊಂದಿಗೆ ಉಳಿಸಲು ಜನ ಸಂಘದ ಹಿರಿಯ ಶ್ಯಾಮ ಪ್ರಸಾದ್ ಮುಖರ್ಜಿ ಬಹುದೊಡ್ಡ ಹೋರಾಟವನ್ನೇ ಪ್ರಾರಂಭಿಸಿದರು. 1953ರ ಜೂನ್ 23ರಂದು ಬಂಧನಕ್ಕೊಳಗಾಗಿದ್ದ ಮುಖರ್ಜಿಯವರು ಸಂಶಯಾಸ್ಪದ ಸಾವನ್ನು ಅನುಭವಿಸಿದ್ದು, ಜನಸಂಘ ಸ್ಥಾಪಕ ಶಾಂ ಪ್ರಸಾದ್ ಮುಖರ್ಜಿ ಭಾರತದ ಉಳಿವಿಗಾಗಿ, ಭವಿಷ್ಯಕ್ಕಾಗಿ ಬದುಕು ಬಲಿದಾನಗೈದಿದ್ದರು.

ಅಲ್ಲಿಂದ ಮುಂದೆ ಜನ ಸಂಘದ ನೇತೃತ್ವವನ್ನು ವಹಿಸಿದವರೇ ಪಂಡಿತ್ ದೀನ್ ದಯಾಳ್ ಜೀ. ಅವರ ಮಾನವತೆಯ ಸಿದ್ಧಾಂತ ವೈರಿಗಳ ಎದೆ ನಡುಗಿಸಿತ್ತು. ದುರಂತವೆಂದರೆ, 1968ರ ಫೆಬ್ರವರಿ 11 ಪಂಡಿತ್ ಜಿ ಅವರ ದಾರುಣ ಹತ್ಯೆ ಉತ್ತರ ಪ್ರದೇಶದ ರೈಲ್ವೆ ನಿಲ್ದಾಣದಲ್ಲಾಗಿತ್ತು. ಜನಸಂಘದ ಎರಡನೇ ಅಧ್ಯಕ್ಷರ ಬಲಿದಾನವಾಯಿತು. ಅಂತಹ ಜನಸಂಘವನ್ನು ದೇಶ ಉಳಿಸುವ ಭಾಗವಾಗಿ ಜನತಾ ಪಕ್ಷದಲ್ಲಿ ವಿಲೀನಗೊಳಿಸಿದ್ದರು ಅಟಲ್ ಜೀ. ಬಿಜೆಪಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಏಳು-ಬೀಳು, ಸೋಲು-ಗೆಲುವು ಎಲ್ಲವನ್ನೂ ಕಂಡಿದೆ.

84ರ ಎಲೆಕ್ಷನ್‌ನಲ್ಲಿ ದಕ್ಕಿದ್ದು ಕೇವಲ 2 ಸ್ಥಾನ:

1984ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡು ಕ್ಷೇತ್ರ. ವಿರೋಧಿಗಳು ‘ಹಮ್ ದೋ ಹಮಾರೆ ದೋ’ ಎಂದು ಛೇಡಿಸಿದ್ದರು. ವಾಜಪೇಯಿಯವರೇ ಸೋತ ಚುನಾವಣೆಯದು. ದುರಾದೃಷ್ಟಕ್ಕೆ ಶಿವಮೊಗ್ಗದ ಭದ್ರಾವತಿಯ ಲಕ್ಷ್ಮಿ ನಾರಾಯಣ ಎಂಬ 17ರ ಹರೆಯದ ವಿದ್ಯಾರ್ಥಿ ಅಟಲ್‌ರಂತಹ ನೇತಾರರನ್ನು ಸೋಲಿಸಿದ ದೇಶದಲ್ಲಿ ಬದುಕಲಾರೆ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಸುದ್ದಿ ಕೇಳಿದ ವಾಜಪೇಯಿ ಭದ್ರಾವತಿಗೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳಿ ಜೋಳಿಗೆಯೊಂದಿಗೆ ಬೀದಿಯಲ್ಲಿ ದೇಣಿಗೆ ಸ್ವೀಕರಿಸಿ, ಕುಟುಂಬಕ್ಕೆ ನೀಡಿದ್ದರು.

ಇಂದು ಬಿಜೆಪಿ 18 ಕೋಟಿ ಸದಸ್ಯರನ್ನು ಹೊಂದಿದೆ. ಅಡ್ವಾಣಿ ರಥಯಾತ್ರೆ, ಉತ್ತಮ ಆಡಳಿತದ ಭರವಸೆ ಗಟ್ಟಿಗೊಳಿಸುತ್ತಾ ಹೋದರೆ, 2014ರಲ್ಲಿ ನರೇಂದ್ರ ಮೋದಿ ಎಂಬ ರಾಷ್ಟ್ರ ಭಕ್ತನನ್ನು ಮುಂದಿಟ್ಟುಕೊಂಡು ನಡೆಸಿದ ಚುನಾವಣೆಯಲ್ಲಿ 282 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದರ ಮೂಲಕ ರಾಷ್ಟ್ರಭಕ್ತಿಯ ಬೀಜ ಬಿತ್ತಿ, ಬೆಳೆ ತೆಗೆದಿದೆ. 2014 ಆಗಸ್ಟ್ 15 ರಂದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ ಮೋದಿಯವರು ‘ಈ ದೇಶದ ಪ್ರಧಾನಿಯಾಗಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿಲ್ಲ, ಪ್ರಧಾನ ಸೇವಕನಾಗಿ ಹಾರಿಸುತ್ತೇನೆ’ ಎಂದಿದ್ದು ಶತಕೋಟಿ ಭಾರತೀಯರಿಗೆ ಮೋದಿಯಂತಹ ಮಹಾತ್ಮನಿಗೆ ಮತ ಹಾಕಿದ್ದು ಸಾರ್ಥಕ ಎನ್ನುವ ಸಮಾಧಾನ ದೊರೆಯಿತು.

370 ರದ್ಧತಿ, ರಾಮ ಮಂದಿರದಂತಹ ಮೈಲಿಗಲ್ಲು:

ಬಿಜೆಪಿ ಅಧಿಕಾರಕ್ಕೇರಿದರೆ ದೇಶಕ್ಕಾಗಿ ಎಂತಹ ನಿರ್ಧಾರ ಕೈಗೊಳ್ಳಬಹುದು ಎಂಬ ಪ್ರಶ್ನೆಗೆ ಮೋದಿ ಕಾಲದಲ್ಲಿ ಉತ್ತರಗಳು ತೆರೆದುಕೊಳ್ಳುತ್ತಲೇ ಹೋಗುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶ್ಮೀರದಲ್ಲಿ ಉಗ್ರಗಾಮಿಗಳ ಹುಟ್ಟಡಗಿಸಿ 370 ವಿಧಿ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಇಂತಹ ಹಲವು ಮೈಲಿಗಲ್ಲುಗಳು.

ಉಕ್ರೇನ್ ಯುದ್ಧವೇ ಇರಲಿ, ಲೆಬನಾನ್ ಸಂಕಷ್ಟವೇ ಬರಲಿ ವಿದೇಶದಲ್ಲಿ ಭಾರತೀಯರಿಗೆ ತೊಂದರೆಯಾದಾಗ ಮೋದಿ ಸರ್ಕಾರ ಧಾವಿಸಿದೆ. ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯಲ್ಲಿ ಭಾರತವಿತ್ತು ಎಂದು ತಜ್ಞರು ಆತಂಕ ಪಡುವ ದಿನಗಳಲ್ಲಿ ಇಂದು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ.

ಮೂಗು ಮುರಿಯುತ್ತಿದ್ದ ವಿದ್ಯಾವಂತರು, ಯುವಕರು, ರಾಜಕಾರಣಿಗಳೆಲ್ಲಾ ಭ್ರಷ್ಟರು ಎಂಬ ಭಾವನೆಯಲ್ಲಿದ್ದರೆ ಇಂದು ಮೋದಿ ರಾಜಕಾರಣವನ್ನು ಕಂಡ ಮೇಲೆ ರಾಷ್ಟ್ರಭಕ್ತನೊಬ್ಬ ಅಧಿಕಾರದ ಸೂತ್ರ ಹಿಡಿದರೆ ಸಮರ್ಥ, ಸಮೃದ್ಧ , ಶಕ್ತಿಶಾಲಿ, ಸ್ವಾಭಿಮಾನಿ ಭಾರತ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಅರ್ಥೈಸಿಕೊಂಡಿದ್ದಾರೆ.

ದೇಶದ 22 ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಥವಾ ಮಿತ್ರ ಪಕ್ಷಗಳ ಜೊತೆ ಸೇರಿ ಅಧಿಕಾರದ ಸೂತ್ರ ಹಿಡಿದಿದೆ. ಭಾರತದಂತಹ ರಾಷ್ಟ್ರದಲ್ಲಿ ಮುಕ್ತ ಬಹಿರ್ದೆಸೆಯಿಂದ ಮುಕ್ತಿ ಪಡೆಯುವುದು ಸುಲಭ ಮಾತಾಗಿರಲಿಲ್ಲ. ಆದರೆ ಮೋದಿ ಆಡಳಿತದಲ್ಲಿ ಶೌಚಾಲಯವಿಲ್ಲದ ಮನೆಗಳಿಲ್ಲ ಎಂಬಂತಾಗಿದೆ. ಜೊತೆಗೆ ಭಾರತದಲ್ಲಿ ವಿದ್ಯುತ್ ಇಲ್ಲದಿರುವ ಮನೆಗಳಿಲ್ಲ ಎಂಬಷ್ಟರ ಮಟ್ಟಿಗೆ ಮೋದಿ ಕ್ರಾಂತಿ ನಡೆದಿದೆ. ಗೃಹಿಣಿಯರು, ಉಜ್ವಲ ಅಡುಗೆ ಅನಿಲದ ಪ್ರಯೋಜನ ಪಡೆದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರಾಗವಾಗಿ ಸಾಲ ಸೌಲಭ್ಯಗಳು ಸಿಗುತ್ತಿವೆ. ಅನೇಕರ ಟೀಕೆಗಳ ನಡುವೆಯೂ ಮಹಾಕುಂಭಮೇಳ ಅಚ್ಚುಕಟ್ಟಾಗಿ ಅಯೋಜನೆಯಾಗಿತ್ತು.

ವಿದೇಶದಲ್ಲಿಯೂ ಭಾರತಕ್ಕೆ ಮನ್ನಣೆ:

ಒಂದು ಕಾಲದಲ್ಲಿ ಶ್ರೀಮಂತರ ಮತ್ತು ಶಿಫಾರಸ್ಸುಗಳಿಗೆ ಸೀಮಿತವಾಗಿದ್ದ ಪದ್ಮಶ್ರೀ ಮತ್ತು ಪದ್ಮ ಭೂಷಣಗಳಂತಹ ಪ್ರಶಸ್ತಿಗಳು ಸಾಲುಮರದ ತಿಮ್ಮಕ್ಕ, ಹರೇಕಳ ಹಾಜಬ್ಬ ತುಳಸಿ, ಸುಕ್ರಿ ಬೊಮ್ಮ ಗೌಡ ಮುಂತಾದ ತೆರೆಮರೆಯ ಸಾಧಕರನ್ನು ಅರಸಿ ಬರುತ್ತಿವೆ.

ಭಾರತದ ನಿಲುವುಗಳನ್ನು ಗಮನಿಸಿ ಹೆಜ್ಜೆ ಇಡುವ ಅನಿವಾರ್ಯತೆಗೆ ಅಮೆರಿಕ, ರಷ್ಯಾ ಸೇರಿದಂತೆ ದೊಡ್ಡ ರಾಷ್ಟ್ರಗಳೆಲ್ಲಾ ಬಂದಿವೆ. ಜೂನ್ 21ರಂದು ನಡೆಯುವ ಭಾರತದ ಯೋಗ ದಿನವನ್ನು ವಿಶ್ವದ 150 ಕ್ಕೂ ಹೆಚ್ಚು ರಾಷ್ಟ್ರಗಳು ವಿಶ್ವ ಯೋಗ ದಿನವನ್ನಾಗಿ ಆಚರಿಸುತ್ತಿವೆ. ಪ್ರಧಾನಿಯವರ ಮನ್ ಕಿ ಬಾತ್ ಗಾಗಿ ಕೋಟ್ಯಂತರ ಜನ ಆಲಿಸುತ್ತಾರೆ. ಕೋವಿಡ್‌ಗೆ ಲಸಿಕೆಯ ಮೂಲಕ ದೇಶದ 146 ಕೋಟಿ ಜನತೆಗೆ ಜೀವದಾನ ನೀಡಿದೆ. ಪ್ರಪಂಚದ 70ಕ್ಕೂ ಹೆಚ್ಚು ದೇಶಗಳಿಗೆ ಉಚಿತ ಲಸಿಕೆ ನೀಡುವುದರ ಮೂಲಕ ದೊಡ್ಡತನಕ್ಕೆ ಸಾಕ್ಷಿಯಾಗಿದೆ. ದೇಶವಾಸಿಗಳಿಗೆ ಉಚಿತ ಆರೋಗ್ಯ ಕೊಡುವ ಕನಸಿನ ಆಯುಷ್ಮಾನ್ ಭಾರತ್ , ಮನೆ ಮನೆಗೂ ಗಂಗೆ ಯೋಜನೆ, ವೇತನದಾರರ 12 ಲಕ್ಷ ರು. ವರೆಗಿನ ಆದಾಯ ತೆರಿಗೆ ವಿನಾಯಿತಿ ಮಧ್ಯಮ ವರ್ಗದ ಬದುಕಿಗೆ ಹೊಸ ಶಕ್ತಿ ನೀಡಿದೆ.

ವಕ್ಫ್‌ ತಿದ್ಪುಪಡಿಯಿಂದ ಬೆದರಿಸಿದವರಿಗೆ ಉತ್ತರ:

ವಕ್ಫ್ ಕಾಯ್ದೆ ಎಲ್ಲಿ ಬರುತ್ತೆ? ಎಂದು ಹಂಗಿಸಿದವರ ಎದುರು ತಿದ್ದುಪಡಿ ತರುವುದರ ಮೂಲಕ ಶ್ರೀಮಂತ ರಾಜಕಾರಣಿಗಳ ಸೊತ್ತಾಗಿದ್ದ ವಕ್ಫ್ ಆಸ್ತಿಗಳು ಬಡ ಮುಸ್ಲಿಮರು ಬಳಸುವಂತೆ ಸುಗಮಗೊಳಿಸಿದ್ದು, ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ನಿರ್ಮಿಸಿದರೆ ರಕ್ತದ ಓಕುಳಿ ಹರಿಯುತ್ತದೆ ಎಂದವರು, ವಕ್ಫ್ ಕಾಯ್ದೆಯನ್ನು ಮುಟ್ಟಿದರೆ ರುಂಡ ಮುಂಡಗಳು ಬೇರಾಗುತ್ತವೆ ಎಂದು ಬೆದರಿಕೆ ಹಾಕಿದವರು, ಕಣ್ಣು ಬಿಟ್ಟು ನೋಡುತ್ತಿರುವಾಗಲೇ ಈ ಎರಡು ಕಾಯ್ದೆಯನ್ನು ತೆಗೆದುಕೊಂಡಿದ್ದು ಮೋದಿ ಮತ್ತು ಬಿಜೆಪಿ ಸರಕಾರ.

ಜನಸಂಘದ ಕಾಲದಲ್ಲಿ ಶಕ್ತಿ ಕಡಿಮೆಯಿರುವುದು ಗೊತ್ತಿದ್ದರೂ ಮುಂದೆ ನಾವು ಒಂದು ದಿನ ಅಧಿಕಾರಕ್ಕೆ ಬಂದರೆ 370 ವಿಧಿಯನ್ನು ರದ್ದು ಮಾಡುತ್ತೇವೆ. ಪೌರತ್ವ ತಿದ್ದುಪಡಿ ಕಾಯ್ದೆ ತರುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ. ಸಮಾನ ನಾಗರಿಕ ಹಕ್ಕು ಕಾಯ್ದೆ ತರುತ್ತೇವೆ ಎಂಬುದು ಅಂದಿನ ಘೋಷಣೆಯಾಗಿತ್ತು. ನಮ್ಮ ಮಾತು ಕೇಳಿದವರು ಇದೆಲ್ಲಾ ನೀವು ಬಂದರೆ ತಾನೇ.. ಎಂದು ಹಂಗಿಸುತ್ತಿದ್ದರು. ಆದರೆ ಇಂದು ಅದೆಲ್ಲವೂ ಸಾಧ್ಯವಾಗಿದೆ. ಜೊತೆಗೆ ತ್ರಿವಳಿ ತಲಾಖ್‌ನ್ನು ರದ್ದುಗೊಳಿಸಿದ ಕೀರ್ತಿ ಮೋದಿ ಸರಕಾರಕ್ಕೆ.

ಅಂದು ವಾಜಪೇಯಿ ಅವರನ್ನು ‘ನೀವಿಬ್ಬರೂ, ನಿಮಗಿಬ್ಬರು’ ಹಂಗಿಸಿದ ವಿಪಕ್ಷಕ್ಕೆ ಹೇಳಿದ್ದು, ನೋಡುತ್ತೀರಾ ಒಂದಲ್ಲ ಒಂದು ದಿನ ಕಮಲ ಅರಳುತ್ತದೆ ಅರಳುವ ಕಮಲವನ್ನು ನೋಡುತ್ತಾ ಜನ, ನಿಮ್ಮನ್ನು ನೋಡಿ ನಗುತ್ತಾರೆ ಎಂದಿದ್ದರು. ಆ ಮಾತು ಅವರ ಶಿಷ್ಯ ಮೋದಿ ಅವರ ಮೂಲಕ ಇಡೀ ಭಾರತದಲ್ಲಿ ಕಮಲ ಅರಳಿದ.

Share this article