ಕೇಂದ್ರ ಸಚಿವೆ ನಿರ್ಮಲಾಗೆ ಕೃಷ್ಣ ಬೈರೇಗೌಡ ಸವಾಲ್‌

KannadaprabhaNewsNetwork |  
Published : Mar 26, 2024, 01:54 AM ISTUpdated : Mar 26, 2024, 08:09 AM IST
Krishna byregowda

ಸಾರಾಂಶ

ಕರ್ನಾಟಕಕ್ಕೆ ಯಾವುದೇ ಅನುದಾನ ಬಾಕಿ ಉಳಿಸಿಕೊಂಡಿಲ್ಲ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೇಳಿಕೆ ಸತ್ಯಕ್ಕೆ ದೂರವಾದುದು. ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 11,495 ಕೋಟಿ ರು. ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕಕ್ಕೆ ಯಾವುದೇ ಅನುದಾನ ಬಾಕಿ ಉಳಿಸಿಕೊಂಡಿಲ್ಲ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೇಳಿಕೆ ಸತ್ಯಕ್ಕೆ ದೂರವಾದುದು. ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ 11,495 ಕೋಟಿ ರು. ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. 

ಈ ಬಗ್ಗೆ ಅವರು ಯಾವಾಗ ಬಂದರೂ ಚರ್ಚೆಗೆ ನಾವು ಸಿದ್ಧ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸವಾಲು ಹಾಕಿದ್ದಾರೆ. ವಿಕಾಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರಾಜ್ಯಕ್ಕೆ 2019- 20ರಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಅನುದಾನವನ್ನು ಕೊಡುವಂತಿಲ್ಲ ಎಂದು ಹಣಕಾಸು ಆಯೋಗವೇ ಹೇಳಿದೆ. 

2019-20ರಲ್ಲಿ ರಾಜ್ಯಕ್ಕೆ ಕೇಂದ್ರದಿಂದ 36675 ಕೋಟಿ ರು. ತೆರಿಗೆ ಪಾಲು ಬಂದಿತ್ತು. 2020-21ಕ್ಕೆ ಇದು 31,180 ಕೋಟಿ ರು.ಗೆ ಕುಸಿದಿತ್ತು. ಹೀಗಾಗಿ ರಾಜ್ಯಕ್ಕೆ ಆಗಿರುವ 5495 ಕೋಟಿ ರು. ನಷ್ಟವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಯೋಗ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿದೆ.ಆದರೆ, ಈ ಹಣ ಈವರೆಗೆ ರಾಜ್ಯಕ್ಕೆ ಬಂದಿಲ್ಲ. 

2021-26ನೇ ಸಾಲಿನಲ್ಲಿ ಸುಮಾರು 6,000 ಕೋಟಿ ರು. ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಒಟ್ಟಾರೆ, 11,495 ಕೋಟಿ ರು. ಹಣ ರಾಜ್ಯಕ್ಕೆ ಬರಬೇಕಿದೆ ಎಂದರು. ಆದರೆ, ನಿರ್ಮಲಾ ಸೀತಾರಾಮನ್‌ ಅವರು ಅಂತಹ ಶಿಫಾರಸೇ ಇಲ್ಲ ಎಂದು ಮರೆಮಾಚುತ್ತಿದ್ದಾರೆ. 

ಆಯೋಗ ಮಾಡಿದ್ದ ಶಿಫಾರಸನ್ನು ಹಿಂಪಡೆಯುವಂತೆ ಅವರೇ ಪತ್ರ ಬರೆದು ಕರ್ನಾಟಕದ ಜನರಿಗೆ ಅನ್ಯಾಯ ಮಾಡಿದ್ದಾರೆ. ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಅವರಿಂದಲೇ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ. 

ಮಾ.31ಕ್ಕೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದಾರೆಯೇ ಹೇಳಲಿ. ಹಣಕಾಸು ಆಯೋಗದ 2021ನೇ ವರ್ಷದ ಅಂತಿಮ ವರದಿಯ 36ನೇ ಪುಟದಲ್ಲಿ ಕರ್ನಾಟಕಕ್ಕೆ ಆಗಿರುವ ನಷ್ಟ ತುಂಬಿಕೊಡಬೇಕು ಎಂದು ಬರೆದಿರುವುದು ಸುಳ್ಳೇ ಎಂದು ಅವರು ಉತ್ತರಿಸಲಿ ಎಂದು ವರದಿಯ ಶಿಫಾರಸಿನ ಸಾಕ್ಷಿ ಸಮೇತ ತಿರುಗೇಟು ನೀಡಿದರು.

ಯಡಿಯೂರಪ್ಪ-ಬೊಮ್ಮಾಯಿ ಸುಳ್ಳು ಹೇಳಿದ್ರಾ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ತೆರಿಗೆ ಪಾಲಿನ ಅನ್ಯಾಯದ ಬಗ್ಗೆ ಪತ್ರ ಬರೆದರೆ ಬಿಜೆಪಿಗರು ಸುಳ್ಳು ಎನ್ನುತ್ತಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2020ರ ಸೆ.17ರಂದು ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕೋರಿದ್ದರು. 

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೂ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಹಾಗಾದರೆ ಅವರು ಸಹ ಸುಳ್ಳು ಹೇಳಿದ್ದರಾ ಎಂದು ಸಚಿವ ಕೃಷ್ಣ ಬೈರೇಗೌಡ ಕುಟುಕಿದರು. 

ಸಚಿವೆ ನಿರ್ಮಲಾ ಒಂದೆಡೆ ಹಣಕಾಸು ಆಯೋಗದ ಒಂದೇ ಒಂದು ಶಿಫಾರಸ್ಸನ್ನು ಸಹ ನಾವು ತಿದ್ದಲು ಹೋಗುವುದಿಲ್ಲ ಎನ್ನುತ್ತಾರೆ. ಮತ್ತೊಂದೆಡೆ ರಾಜ್ಯಗಳಿಗೆ ನೀಡುವ ವಿಶೇಷ ಅನುದಾನವನ್ನು ಹಿಂಪಡೆಯುವಂತೆ ಹಣಕಾಸು ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಲೋಕಸಭೆಯಲ್ಲೇ ಉತ್ತರ ನೀಡುತ್ತಾರೆ. 

ಹಾಗಾದ್ರೆ ರಾಜ್ಯದ ಪಾಲಿನ ಹಣವನ್ನು ತಡೆಹಿಡಿಯಲು ಮಾತ್ರ ಇವರ ಕಾನೂನುಗಳು ಇರುವುದಾ? ಹಣಕಾಸು ಆಯೋಗದ ಶಿಫಾರಸು ಮಾಡಿದ ನಮ್ಮ ಅನುದಾನವನ್ನು ನಾವು ಸಂವಿಧಾನಾತ್ಮಕವಾಗಿಯೇ ಕೇಳುತ್ತಿದ್ದೇವೆಯೇ ವಿನಃ ಭಿಕ್ಷೆ ಕೇಳುತ್ತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ಹೊರಹಾಕಿದರು.

ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ನಯಾಪೈಸೆ ಬೇಡ: ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಖಜಾನೆ ಖಾಲಿ ಮಾಡಿಕೊಂಡು ಕೇಂದ್ರದಿಂದ ಹಣ ಕೇಳುತ್ತಿದೆ ಎಂಬ ನಿರ್ಮಲಾ ಸೀತಾರಾಮನ್‌ ಹೇಳಿಕೆಗೂ ತಿರುಗೇಟು ನೀಡಿದ ಸಚಿವ ಕೃಷ್ಣಬೈರೇಗೌಡ, ನಮ್ಮ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ ಒಂದು ನಯಾಪೈಸೆಯೂ ಬೇಡ. 

ನಾವು ಕೇಳುತ್ತಿರುವುದು ನಮ್ಮ ತೆರಿಗೆ ಪಾಲು ಮಾತ್ರ ಎಂದರು. ನಮ್ಮ ರಾಜ್ಯಕ್ಕೆ ಬರಬೇಕಾದ ಬರಪರಿಹಾರವನ್ನು ಕೊಡಲಿ. ನಿಮ್ಮ ಉದಾರತನವೇನೂ ಬೇಕಾಗಿಲ್ಲ. 

ಕರ್ನಾಟಕದ ಜನ ಇರುವುದು ಕೇವಲ ಓಟು ಒತ್ತೋಕಷ್ಟೇ ಎಂಬ ಭಾವನೆಯಿಂದ ಕೇಂದ್ರ ಸರ್ಕಾರ ಹೊರಬರಲಿ. ನಮ್ಮನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವುದನ್ನು ಬಿಡಲಿ. 

ನಮ್ಮ ಹಕ್ಕನ್ನು ನಮಗೆ ಕೊಡಲಿ. ಪ್ರಗತಿಪರ ಕರ್ನಾಟಕ ರಾಜ್ಯವನ್ನು ಕಂಡರೆ ಏಕೆ ಇಷ್ಟು ಮಲತಾಯಿ ಧೋರಣೆ ಮಾಡುತ್ತಿದ್ದೀರಿ? ರಾಜ್ಯದಿಂದ ಆಯ್ಕೆಯಾಗಿರುವ ನೀವು ರಾಜ್ಯಕ್ಕೆ ಇನ್ನಾದರೂ ಅನ್ಯಾಯ ನಿಲ್ಲಿಸಿ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ