ಡೆಂಘೀ ನಿಯಂತ್ರಣಕ್ಕೆ ಸರ್ಕಾರ ಟಾಸ್ಕ್‌ಫೋರ್ಸ್‌ ರಚಿಸಲಿ

KannadaprabhaNewsNetwork | Updated : Jul 09 2024, 04:42 AM IST

ಸಾರಾಂಶ

ಕೊರೋನಾ ಸಂದರ್ಭದಲ್ಲಿ ನಾವು ಟಾಸ್ಕ್ ಪೋರ್ಸ್ ರಚಿಸಿ ಎಲ್ಲ ಇಲಾಖೆಗಳ ಸಹಕಾರದಿಂದ ಕೋವಿಡ್ ನಿಯಂತ್ರಣಕ್ಕೆ ತಂದಿದ್ದೆವು, ಈಗಲೂ ಅಂದಿನ ಅದೇ ಅಧಿಕಾರಿಗಳೇ ಇದ್ದಾರೆ. ಅವರಿಂದ ಟಾಸ್ಕ್ ಪೋರ್ಸ್ ರಚಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಮಿಟಿ ಮಾಡಿ ಡೆಂಘೀ ನಿಯಂತ್ರಿಸಲಿ

 ಚಿಕ್ಕಬಳ್ಳಾಪುರ :  ಕರ್ನಾಟಕ ಡೆಂಘೀ ರಾಜಧಾನಿಯಾಗುತ್ತಿದೆ. ಸರ್ಕಾರ ಕೂಡಲೇ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಿ ಡೆಂಘೀ ನಿಯಂತ್ರಣಕ್ಕೆ ಮುಂದಾಗುವಂತೆ ಸಂಸದ ಡಾ.ಕೆ.ಸುಧಾಕರ್ ಸಲಹೆ ನೀಡಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿರುವ ಸಂಸದರ ಕಚೇರಿಯಲ್ಲಿ ನೂತನ ಸಂಸದ ಡಾ ಕೆ.ಸುಧಾಕರ್ ಮೊದಲ ಜನಸ್ಪಂದನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಸರ್ಕಾರವಿದ್ದಾಗ ಕೋವಿಡ್-19 ಬಂದಂತೆ ಈಗ ಬಂದಿದ್ದರೆ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದರು.

ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಿ

ಕೊರೋನಾ ಸಂದರ್ಭದಲ್ಲಿ ನಾವು ಟಾಸ್ಕ್ ಪೋರ್ಸ್ ರಚಿಸಿ ಎಲ್ಲ ಇಲಾಖೆಗಳ ಸಹಕಾರದಿಂದ ಕೋವಿಡ್ ನಿಯಂತ್ರಣಕ್ಕೆ ತಂದಿದ್ದೆವು, ಈಗಲೂ ಅಂದಿನ ಅದೇ ಅಧಿಕಾರಿಗಳೇ ಇದ್ದಾರೆ. ಅವರಿಂದ ಟಾಸ್ಕ್ ಪೋರ್ಸ್ ರಚಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಮಿಟಿ ಮಾಡಿ ಡೆಂಘೀ ನಿಯಂತ್ರಿಸಲು ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.

ಡೆಂಘೀ ಪ್ರಕರಣಗಳು ಮತ್ತಷ್ಟು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಯುಕ್ತ ಕ್ರಮಗಳನ್ನು ಸಮುದಾಯದೊಂದಿಗೆ ಸೇರಿ ನಿಯಂತ್ರಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಕಾರ್ಯೋನ್ಮುಖವಾಗ ಬೇಕು. ಸರ್ಕಾರ ಕೂಡಲೇ ಎಲ್ಲಾ ಆಸ್ಪತ್ರೆಗಳಲ್ಲಿ ಡೆಂಘೀಗೆ ಬೇರೆ ವಾರ್ಡ್ ಮೀಸಲಿರಿಸಿ ಡೆಂಘೀ ಪೀಡಿತರಿಗೆ ಚಿಕಿತ್ಸೆ ನೀಡಿ ಜನರ ಪ್ರಾಣ ಉಳಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಮಟ್ಟದಿಂದ ಕ್ರಮ ಕೈಗೊಳ್ಳಿ

ಜಿಲ್ಲಾಡಳಿತ ಡೆಂಘೀ ನಿಯಂತ್ರಣಕ್ಕಾಗಿ ಗ್ರಾಮ ಹಾಗೂ ವಾರ್ಡ್ ಮಟ್ಟದಿಂದ ಕ್ರಮವಹಿಸಬೇಕು. ವಾರಕ್ಕೊಮ್ಮೆ ಒಣದಿನ ಆಚರಿಸಬೇಕು. ಬಳಕೆ ಮಾಡಿ ಎಸೆದಿರುವ ಅನುಪಯುಕ್ತ ವಸ್ತುಗಳಲ್ಲಿ ನೀರು ಶೇಖರಣೆಯಾಗಿರುವುದನ್ನು ತೆರವುಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಡೆಂಘೀ ಪ್ರಕರಣಗಳು ಮಕ್ಕಳಲ್ಲಿ ಕಂಡು ಬರುತ್ತಿದ್ದು, ಶಾಲೆಯ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಚವಾಗಿಟ್ಟುಕೊಂಡು ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು ಶಾಲಾ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ ಎಂದರು.

ಡೆಂಘೀ ನಿಯಂತ್ರಣಕ್ಕೆ ಜನತೆಯ ಸಹಕಾರವೂ ಅಗತ್ಯ. ನೀರಿನ ತೊಟ್ಟಿಗಳು, ಡ್ರಮ್, ಬ್ಯಾರಲ್ ಗಳು, ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ತಪ್ಪದೇ ಖಾಲಿ ಮಾಡಿ, ಒಣಗಿಸಿ ಪುನಃ ನೀರು ಭರ್ತಿ ಮಾಡಬೇಕು. ಬಯಲಿನಲ್ಲಿರುವ ಘನತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡಬೇಕು. ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟುವ ಮೂಲಕ ಡೆಂಘೀ ನಿಯಂತ್ರಿಸಬಹುದು ಎಂದರು.ಪ್ರತಿ ಸೋಮವಾರ ಜನತಾ ದರ್ಶನ

ನಾನು ಒಂದು ವರ್ಷ ಆಡಳಿತದಲ್ಲಿ ಇಲ್ಲ ವಾಗಿರುವುದು ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎಂದು ಸಂಸದರ ರಾಜ್ಯ ಸರ್ಕಾರ ಮತ್ತು ಶಾಸಕರ ವಿರುದ್ದ ಪರೋಕ್ಷವಾಗಿ ಆರೋಪ ಮಾಡಿದರು. ಜನತಾ ದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಇನ್ಮುಂದೆ ಪ್ರತಿ ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಬೆಳಗ್ಗೆ ಯಿಂದ ಮಧ್ಯಾಹ್ನದವರೆಗೆ ಮತ್ತು ಮಧ್ಯಾಹ್ನದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನತಾ ದರ್ಶನ ಮಾಡಲಿದ್ದೇನೆ ಎಂದರು.ಮದ್ಯ ಹಂಚಿಕೆಗೆ ವಿರೋಧ

ನೂತನ ಸಂಸದರಾಗಿರುವ ಹಿನ್ನೆಲೆ ನೆಲಮಂಗಲದಲ್ಲಿ ಅಭಿನಂದನ ಸಮಾರಂಭದಲ್ಲಿನ ಮಧ್ಯ ಮತ್ತು ಬಾಡೂಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಧಾಕರ್ ನನಗೂ ಆ ವಿಷಯಕ್ಕೂ ಏನೂ ಸಂಬಂಧವಿಲ್ಲ ಅದು ಆಯೋಜಕರ ತಪ್ಪು. ಅದೇನೆ ಇರಲಿ ಆ ತರ ಬಹಿರಂಗವಾಗಿ ಮದ್ಯ ಹಂಚಬಾರದು. ನಾನು ರಾಜಕಾರಣದಲ್ಲಿ ತೆರೆ ಮರೆಯಲ್ಲಾಗಲಿ ಮದ್ಯ ಹಂಚಿ ರಾಜಕಾರಣ ಮಾಡಿದವನಲ್ಲ ಎಂದು ಹೇಳಿದರು.

ನೂತನ ಸಂಸದರ ಮೊದಲ ಜನಸ್ಪಂದನ ಸಭೆಗೆ ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಂಚೇನಹಳ್ಳಿ, ಬಾಗೇಪಲ್ಲಿ ಇನ್ನೂ ಹಲವಾರು ಕ್ಷೇತ್ರಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಜನರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಿದ ನೂತನ ಸಂಸದರು, ನನೆಗುದಿಗೆ ಬಿದ್ದಿರುವ ಗಂಗಾಕಲ್ಯಾಣ ಕೊಳವೆ ಬಾವಿ ಸಮಸ್ಯೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ನಿಗಮ, ದೇವರಾಜ್ ಅರಸ್ ಮತ್ತು ಹಿಂದುಳಿದ ವರ್ಗಗಳ ನಿಗಮಗಳ ಜಿಲ್ಲಾ ವ್ಯವಸ್ಥಾಪಕರನ್ನು ಸ್ಥಳಕ್ಕೆ ಕರೆಯಿಸಿ ಮಾತುಕತೆ ನಡೆಸಿದರು.

Share this article