ಪೆನ್‌ಡ್ರೈವ್‌ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲಿ

KannadaprabhaNewsNetwork | Published : May 8, 2024 1:01 AM

ಸಾರಾಂಶ

ಎಸ್‌ಐಟಿ ಮೂಲಕ ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ ಮಸಿ ಬಳಿದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇರುವುದು ವಕೀಲ ದೇವರಾಜೇಗೌಡ ಹೇಳಿರುವ ಪತ್ರಿಕಾಗೋಷ್ಟಿ ಹೇಳಿಕೆಯಲ್ಲಿ ಬಹಿರಂಗಗೊಂಡಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೇಲಿನ ಆರೋಪ ತನಿಖಾ ಹಂತದಲ್ಲಿ ಇರುವುದರಿಂದ ಈ ಬಗ್ಗೆ ನಾವು ಮಾತನಾಡುವುದಿಲ್ಲ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಣತಿಯಂತೆ ಎಸ್‌ಐಟಿ ನಡೆಯುತ್ತಿದೆ. ಇದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಪ್ರಕರದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ಜೆಡಿಎಸ್ ವತಿಯಿಂದ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ದ ಮಂಗಳವಾರ ಏರ್ಪಡಿಸಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿರುವುದಕ್ಕೆ ನಮ್ಮ ಸಹಮತವಿದೆ ಎಂದರು.

ನ್ಯಾಯಾಂಗ ತನಿಖೆ ನಡೆಸಲಿ

ಎಸ್‌ಐಟಿ ಮೂಲಕ ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ ಮಸಿ ಬಳಿದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇರುವುದು ವಕೀಲ ದೇವರಾಜೇಗೌಡ ಹೇಳಿರುವ ಪತ್ರಿಕಾಗೋಷ್ಟಿ ಹೇಳಿಕೆಯಲ್ಲಿ ಬಹಿರಂಗಗೊಂಡಿದೆ. ಆದ್ದರಿಂದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ, ಇಲ್ಲವೆ ಸಿಬಿಐ ಮೂಲಕ ತನಿಖೆ ನಡೆಸಲಿ ಎಂದರು..

ಜೆಡಿಎಸ್ ಜಿಲ್ಲಾ ವಕ್ತಾರ ಆರ್. ಮಟಮಪ್ಪ ಮಾತನಾಡಿ, ಇಂದಲ್ಲ ನಾಳೆ ಅಮಾಯಕರನ್ನು ತಪ್ಪಿತಸ್ಥರು ಎಂದು ಬಿಂಬಿಸಿ ಸಾಮಾಜಿಕ ಅಪಮಾನಕ್ಕೆ ಗುರಿ ಮಾಡಿದವರು ನೀರು ಕುಡಿಯಲೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರನ್ನೂ ಅಪಹರಣ ಮಾಡಿಲ್ಲ

ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಾ ಮುನಿಯಪ್ಪ ಮಾತನಾಡಿ, ಬಂಧನಕ್ಕೆ ಒಳಗಾಗಿರುವ ರಾಜಗೋಪಾಲ್ ಭವಾನಿ ರೇವಣ್ಣ ಅವರ ಸಂಬಂಧಿ. ಸಂತ್ರಸ್ತೆಯೂ ಸಹ ಅವರ ಸಂಬಂಧಿಯೇ ಆಗಿದ್ದು ತನ್ನಕಷ್ಟ ಹೇಳಿಕೊಳ್ಳಲು ಅವರ ಮನೆಗೆ ಬಂದಿದ್ದಳು. ಆಕೆಯನ್ನು ಯಾರೂ ಕೂಡ ಅಪಹರಣ ಮಾಡಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದೂರುದಾರ ಸಂತ್ರಸ್ತೆಯನ್ನು ದುರ್ಬಳಕೆ ಮಾಡಿಕೊಂಡು ಇಲ್ಲ ಸಲ್ಲದ ಆರೋಪ ಮಾಡಿ ತೇಜೋವಧಗೆ ಇಳಿದಿರುವುದು ಕಾಂಗ್ರೆಸ್‌ಗೆ ತರವಲ್ಲ ಎಂದು ದೂರಿದರು. ಮಂಡ್ಯದ ಎಲ್.ಆರ್.ಶಿವರಾಮೇಗೌಡ ಜೆಡಿಎಸ್ ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡು ಈಗ 12 ಕೋಟಿ ಹಣಕ್ಕಾಗಿ ದೇವೇಗೌಡ ಕುಟುಂಬದ ವಿರುದ್ಧ ಆರೋಪ ಮಾಡಿರುವುದು ಅವರ ನೀಚ ಬುದ್ದಿಯನ್ನು ತೋರಿಸುತ್ತಿದೆ ಎಂದು ಕಿಡಿ ಕಾರಿದರು.

ಜೆಡಿಎಸ್ ಮಹಿಳಾ ಯುವ ಘಟಕದ ಅಧ್ಯಕ್ಷೆ ಶಿಲ್ಪಾಗೌಡ ಮಾತನಾಡಿ, ಕಾಂಗ್ರೆಸ್‌ನ ಕೆಲ ಶಾಸಕರು ನೀಲಿ ಚಿತ್ರಗಳನ್ನು ನೋಡಿರುವುದು ಜನತೆಗೆ ಗೊತ್ತಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡೆ ಪ್ರಭಾ ನಾರಾಯಣಗೌಡ, ಕಿಸಾನ್ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಮುನಿರಾಜು, ಬಂಡ್ಲು ಶ್ರೀನಿವಾಸ್, ಮೋಹನ್ ರಾಜ್, ಸತೀಶ್, ಸ್ಟುಡಿಯೋ ಮಂಜು ಮತ್ತಿತರರು ಇದ್ದರು.

Share this article