;Resize=(412,232))
ಬೆಂಗಳೂರು : ಕಳೆದ 15 ವರ್ಷಗಳಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಗಳಿಸಿರುವ ಪಕ್ಷವಾರು ಮತಗಳನ್ನು ಪರಿಶೀಲನೆ ಮಾಡೋಣ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಮಾರ್ಮಿಕವಾಗಿ ಹೇಳಿದ್ದಾರೆ.
ಮುಂಬರುವ ಹಿರಿಯೂರು ಕ್ಷೇತ್ರದ ಉಪಚುನಾವಣೆಗೆ ಎನ್‌ಡಿಎ ಮಿತ್ರಕೂಟದ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ತೆರೆಮರೆಯಲ್ಲಿ ಜಿದ್ದಾಜಿದ್ದಿ ನಡೆದಿರುವ ಮಧ್ಯೆಯೇ ಅಶೋಕ್ ಅವರ ಈ ಹೇಳಿಕೆ ಕುತೂಹಲ ಮೂಡಿಸಿದೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯೂರು ಉಪಚುನಾವಣೆ ಟಿಕೆಟ್ ನಾವು ಕೇಳುತ್ತಿರುವುದು ನಿಜ. ಈ ಬಗ್ಗೆ ಉಭಯ ಪಕ್ಷಗಳ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಳೆದ 15 ವರ್ಷಗಳಲ್ಲಿ ಬಂದಿರುವ ಮತಗಳನ್ನು ಪರಿಶೀಲನೆ ಮಾಡೋಣ. ಸಮೀಕ್ಷೆ ವಿವರಗಳನ್ನು ಸಹ ಪರಿಶೀಲನೆ ಮಾಡುತ್ತೇವೆ. ಹಿಂದೆ ಜೆಡಿಎಸ್‌ಗೆ ಎರಡನೇ ಸ್ಥಾನ ಬಂದಿತ್ತು. ನಂತರ ನಾವು ಗೆದ್ದಿದ್ದೇವೆ. ಇದೆಲ್ಲವನ್ನೂ ನೋಡೋಣ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದೇವೆ. ಕಾಂಗ್ರೆಸ್ಸಿಗರು ಒಂದು ಸ್ಥಾನವನ್ನು ಕೂಡ ಗೆದ್ದಿಲ್ಲ. ಅವರು ಶೂನ್ಯ ಗಳಿಸಿದ್ದಾರೆ. ಆ ಶೂನ್ಯ ತೆಗೆದುಕೊಂಡಿರುವ ಅಂಕಪಟ್ಟಿ ತೆಗೆದುಕೊಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿ ಪೋಷಕರು ಇದಕ್ಕೆ ಸಹಿ ಹಾಕಬೇಕು. ಅವರು ಸಹಿ ಹಾಕುವರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕು ಎಂದು ಲೇವಡಿ ಮಾಡಿದರು.