ಸಿಎಂ, ಡಿಸಿಎಂ ಸ್ಥಾನಕ್ಕೆ ಲಿಂಗಾಯತರ ಪರಿಗಣಿಸಿ: ರಂಭಾಪುರಿ ಶ್ರೀ ಬೇಡಿಕೆ

ಸಾರಾಂಶ

ಶ್ರೀಶೈಲ ಮಠದ ಸ್ವಾಮೀಜಿ ಬಳಿಕ ಇದೀಗ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕೂಡ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಕ್ಕೆ ವೀರಶೈವ ಲಿಂಗಾಯತ ನಾಯಕರನ್ನು ಪರಿಗಣಿಸುವಂತೆ ಕಾಂಗ್ರೆಸ್‌ ಅನ್ನು ಆಗ್ರಹಿಸಿದ್ದಾರೆ

ಕಲಬುರಗಿ : ಶ್ರೀಶೈಲ ಮಠದ ಸ್ವಾಮೀಜಿ ಬಳಿಕ ಇದೀಗ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕೂಡ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಕ್ಕೆ ವೀರಶೈವ ಲಿಂಗಾಯತ ನಾಯಕರನ್ನು ಪರಿಗಣಿಸುವಂತೆ ಕಾಂಗ್ರೆಸ್‌ ಅನ್ನು ಆಗ್ರಹಿಸಿದ್ದಾರೆ. ರಾಜ್ಯದಲ್ಲಿರುವ ಬಹುಸಂಖ್ಯಾತ ವೀರಶೈವ ಲಿಂಗಾಯತರಿಗೆ ಮಾನ್ಯತೆ ದೊರಕುವಂತಾಗಲು ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಹಾಲಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗದಿದ್ದರೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾದರೂ ಲಿಂಗಾಯತ ನಾಯಕರನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವೀರೇಂದ್ರ ಪಾಟೀಲರನ್ನು ಹೊರತುಪಡಿಸಿ ರಾಜ್ಯದಲ್ಲಿ ಈವರೆಗೆ ಕಾಂಗ್ರೆಸ್‍ನಿಂದ ವೀರಶೈವ ಲಿಂಗಾಯತ ಸಮುದಾಯದ ಮತ್ಯಾರೂ ಮುಖ್ಯಮಂತ್ರಿ ಆಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಹುಸಂಖ್ಯಾತ ವೀರಶೈವ ಲಿಂಗಾಯತರು ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ. ಹಾಗಾಗಿ ರಾಜ್ಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತರು ಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ ಎಂದರು.

ವೀರಶೈವ ಲಿಂಗಾಯತರಲ್ಲಿ ಹಿರಿಯ ಹಾಗೂ ಕಿರಿಯರು ಸೇರಿ ಅನೇಕ ಸಕ್ರಿಯ ರಾಜಕಾರಣಿಗಳಿದ್ದಾರೆ. ಹಿರಿಯರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ ಸೇರಿ ಅನೇಕ ಪ್ರಭಾವಿಗಳೂ ಇದ್ದಾರೆ. ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಮನ್ನಣೆ ನೀಡುವುದು ಒಳಿತು. ಒಂದು ವೇಳೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಉದ್ದೇಶ ಇಲ್ಲದಿದ್ದರೆ ಉಪಮುಖ್ಯಮಂತ್ರಿ ಸ್ಥಾನಕ್ಕಾದರೂ ಲಿಂಗಾಯತರನ್ನು ಪರಿಗಣಿಸಿದರೆ ಈ ಸಮುದಾಯಕ್ಕೆ ಮನ್ನಣೆ ನೀಡಿದಂತಾಗುತ್ತದೆ ಎಂದರು.

ಮಹಾರಾಷ್ಟ್ರದಲ್ಲಿ ಸಂಪ್ರದಾಯದಂತೆ ಅಲ್ಲಿನ ಸರ್ಕಾರ ಮರಾಠರಿಗೆ ಪ್ರಾತಿನಿಧ್ಯ ನೀಡಿದಂತೆ ಇಲ್ಲಿ ವೀರಶೈವ ಲಿಂಗಾಯತರಿಗೆ ಅವಕಾಶ ನೀಡಿ ಬಹುದಿನದ ಬೇಡಿಕೆ ಈಡೇರಿಸಬೇಕು ಎಂದು ರಂಭಾಪುರಿ ಶ್ರೀ ಒತ್ತಾಯಿಸಿದರು.

 ಗ್ಯಾರಂಟಿ ಮರುಪರಿಶೀಲಿಸಿ: ರಂಭಾಪುರಿ ಶ್ರೀ

ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ನೀಡಲು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಪುನರ್ ಪರಿಶೀಲನೆ ಮಾಡುವುದು ಒಳಿತು ಎಂದು ಇದೇ ವೇಳೆ ರಂಭಾಪುರಿ ಶ್ರೀಗಳು ಇದೇ ವೇಳೆ ತಿಳಿಸಿದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿಗಳಾದ ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಬಗ್ಗೆ ಮರುಪರಿಶೀಲಿಸಿ ಉಚಿತವೆನ್ನುವ ಯೋಜನೆಗಳಿಗೆ ಕೊಕ್‌ ನೀಡಿದರೆ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದಂತಾಗುತ್ತದೆ. ರಾಜ್ಯದ ಸರ್ವಾಂಗೀಣ ವಿಕಾಸಕ್ಕೂ ಇದು ಸಹಕಾರಿ ಎಂದರು.

ಜತೆಗೆ, ರಾಜ್ಯದ ಎಲ್ಲ ಚುನಾಯಿತ ಶಾಸಕರು ಅಭಿವೃದ್ಧಿ ಮಾತುಗಳಿಗೆ ಒತ್ತು ನೀಡಿ, ಕ್ಷುಲ್ಲಕ ರಾಜಕಾರಣಕ್ಕೆ ಇತಿಶ್ರೀ ಹೇಳಬೇಕು. ರಾಜ್ಯದ ಜನರ ಹಿತ ಕಾಪಾಡಲು ಅಭಿವೃದ್ಧಿ ಮಂತ್ರ ಜಪಿಸಬೇಕು ಎಂದು ಜಗದ್ಗುರುಗಳು ಹೇಳಿದರು.

Share this article