ಯಾವುದೇ ವಾರ್ನಿಂಗೂ ನಾನು ಕೇಳಲ್ಲ: ರಾಜಣ್ಣ

KannadaprabhaNewsNetwork |  
Published : Jun 30, 2024, 12:56 AM ISTUpdated : Jun 30, 2024, 05:24 AM IST
ಕೆ.ಎನ್‌.ರಾಜಣ್ಣ | Kannada Prabha

ಸಾರಾಂಶ

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಕೇಳಿದರೆ ತಪ್ಪಾಗುತ್ತದೆಯೇ? ಒಂದು ವೇಳೆ ತಪ್ಪು ಎನ್ನುವುದಾದರೆ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧನಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ಬೆಂಗಳೂರು : ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಕೇಳಿದರೆ ತಪ್ಪಾಗುತ್ತದೆಯೇ? ಒಂದು ವೇಳೆ ತಪ್ಪು ಎನ್ನುವುದಾದರೆ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧನಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳ ವಿಚಾರವಾಗಿ ಯಾರೂ ಮಾತನಾಡಬಾರದು’ ಎಂಬ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಎಚ್ಚರಿಕೆಗೆ ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಉಪಮುಖ್ಯಮಂತ್ರಿ ಹುದ್ದೆ ಕೇಳಿದರೆ ಏನು ತಪ್ಪಾಗುತ್ತೆ? ನಾನು ಯಾವುದೇ ಎಚ್ಚರಿಕೆಯನ್ನು ಆಲಿಸುವ ವ್ಯಕ್ತಿಯಲ್ಲ. ರಾಜಣ್ಣ.. ರಾಜಣ್ಣನೇ. ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ನಾವು ಹಾಕಿಕೊಳ್ಳುತ್ತೇವೆ. ಎಲ್ಲರೂ ಸುಮ್ಮನೆ ಇರಲಿ, ಆಗ ನಾನೂ ಸುಮ್ಮನೆ ಇರುತ್ತೇನೆ. ಹೇಳುವವರಿಗೆ ಹೇಳಬೇಕು. ಅದನ್ನು ಬಿಟ್ಟು ನಮಗೆ ಹೇಳಿದರೆ ಕೇಳುವವನು ನಾನಲ್ಲ’ ಎಂದು ತಿರುಗೇಟು ನೀಡಿದರು.

‘ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಕು ಎಂದು ಯಾರೋ ಹೇಳಿದರೆ ಕೇಳಿಸಿಕೊಂಡು ಸುಮ್ಮನೆ ಇರಬೇಕಾ? ರಾಜೀನಾಮೆ ನೀಡಬೇಕು ಎಂದು ಹೇಳಿದವರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರಾ? ಜನರ, ಶಾಸಕರ ಅಭಿಪ್ರಾಯದಂತೆ ಮತ್ತು ಪಕ್ಷದ ಹೈಕಮಾಂಡ್‌ ಸೂಚನೆಯಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಯ್ಕೆ ಆಗಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಅವರ ಸ್ವಾಮಿಗಳು ಕೇಳುತ್ತಾರೆ. ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಅವರ ಸ್ವಾಮೀಜಿಗಳು ಹೇಳುತ್ತಾರೆ. ಸ್ವಾಮೀಜಿಗಳು ಹೇಳಿದಂತೆ ಮುಖ್ಯಮಂತ್ರಿಗಳನ್ನು ಮಾಡಲು ಸಾಧ್ಯವೇ?’ ಎಂದು ವಾಗ್ದಾಳಿ ನಡೆಸಿದರು.

‘ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬುದು ಪಕ್ಷದ ಹೈಕಮಾಂಡ್‌ ತೀರ್ಮಾನಿಸುತ್ತದೆಯೇ ಹೊರತು ಸ್ವಾಮೀಜಿಗಳು ಹೇಳಿದಂತೆ ಮಾಡಲಾಗುವುದಿಲ್ಲ’ ಎಂದು ಹೇಳಿದರು.

‘ಸ್ವಾಮೀಜಿ ನೀಡಿರುವ ಹೇಳಿಕೆಯು ಪ್ರಜಾಪ್ರಭುತ್ವಕ್ಕೆ, ಹಿಂದುಳಿದ ವರ್ಗಕ್ಕೆ ಮಾಡಿದ ಅಪಮಾನವಾಗಿದೆ. ನಾನು ಮುಖ್ಯಮಂತ್ರಿಗಳ ಪರವಾಗಿ ಮಾತನಾಡುತ್ತೇನೆ ಎಂಬ ಪ್ರಶ್ನೆಯಲ್ಲ. ಪ್ರಜಾಪ್ರಭುತ್ವದ ಪರವಾಗಿದ್ದೇನೆ. ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಪರ ಇದ್ದಾರೆ. ಬಡವರ ಪರವಾಗಿ ಇರುವ ಕಾರಣ ನಾನು ಅವರ ಪರ ಇದ್ದೇನೆ’ ಎಂದರು.

ಇದೇ ವೇಳೆ, ‘ಅಪೆಕ್ಸ್‌ ಬ್ಯಾಂಕ್‌ ಹಗರಣದಲ್ಲಿ ನಾನು ಸಿಲುಕಿಲ್ಲ. ಬೇಕಾದರೆ ಈ ಬಗ್ಗೆ ತನಿಖೆ ಮಾಡಲಿ’ ಎಂದು ತಮ್ಮ ವಿರೋಧಿಗಳ ಬಗ್ಗೆ ಕಿಡಿಕಾರಿದರು.

ಡಿ.ಕೆ.ಸುರೇಶ್‌ರನ್ನು ಸೋಲಿಸಿದರು:

‘ಬೆಂಗಳೂರು ಗ್ರಾಮಾಂತರದ ಹಿಂದಿನ ಸಂಸದ ಡಿ.ಕೆ.ಸುರೇಶ್‌ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೂ ಯಾರು ಅವರನ್ನು ಸೋಲಿಸಿದರು? ಸ್ವಾಮೀಜಿಗಳೆಲ್ಲಾ ಒಂದಾಗಿ ಸೋಲಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹುಟ್ಟುಹಾಕಿದ ಸ್ವಾಮೀಜಿಗಳು ಇವರು’ ಎಂದು ಕಿಡಿಕಾರಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!