ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಮಾ.14ರ ಗುರುವಾರ ಅಥವಾ ಮಾ.15ರ ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುವ ಸಾಧ್ಯತೆ ಇದೆ.
ಚುನಾವಣೆ ಸಿದ್ಧತೆ ಪರಿಶೀಲಿಸಲು ಚುನಾವಣಾ ಆಯೋಗ ಸೋಮವಾರದಿಂದ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿದೆ. ಬುಧವಾರ ಅಲ್ಲಿಂದ ವಾಪಸಾಗಲಿದೆ.
ಇದಾದ ತರುವಾಯ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.ಇದಕ್ಕೆ ಇಂಬು ನೀಡುವಂತೆ, ಮಾ.13ರ ಬುಧವಾರದೊಳಗೆ ವಿವಿಧ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ಮುಗಿಸಲು ಕೇಂದ್ರ ವಿವಿಧ ಸಚಿವಾಲಯಗಳು ಪ್ರಯತ್ನಿಸುತ್ತಿವೆ ಎಂದು ವರದಿಗಳು ತಿಳಿಸಿವೆ.
ಲೋಕಸಭೆ ಚುನಾವಣೆ ಘೋಷಣೆಯಾದ ಕೂಡಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಹೀಗಾಗಿ ಸರ್ಕಾರಗಳು ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿರುವುದಿಲ್ಲ.
ಆದ್ದರಿಂದ ಅದಕ್ಕೂ ಮೊದಲೇ ಶಂಕುಸ್ಥಾಪನೆ ಅಥವಾ ಉದ್ಘಾಟನೆಯಂತಹ ಕಾರ್ಯಕ್ರಮಗಳನ್ನು ಮುಗಿಸಲು ಸಚಿವಾಲಯಗಳು ಮುಂದಾಗಿವೆ ಎಂದು ಹೇಳಲಾಗಿದೆ.
ಜಮ್ಮು- ಕಾಶ್ಮೀರಕ್ಕೂ ಚುನಾವಣೆ?
2018ರಿಂದ ಜಮ್ಮು-ಕಾಶ್ಮೀರದಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲ. ಸೆಪ್ಟೆಂಬರ್‌ನೊಳಗೆ ಅಲ್ಲಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಇದೇ ವೇಳೆ ಲೋಕಸಭೆ ಚುನಾವಣೆಯ ಜತೆಗೇ ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ಪರಿಶೀಲಿಸಲು ಕೇಂದ್ರ ಸರ್ಕಾರ ಕೋರಿತ್ತು. ಹೀಗಾಗಿ ಆಯೋಗದ ಭೇಟಿ ಮಹತ್ವ ಪಡೆದುಕೊಂಡಿದೆ.
ಕಳೆದ ಬಾರಿ ಮಾ.10ಕ್ಕೆ ಘೋಷಣೆ: ಕಳೆದ 17ನೇ ಲೋಕಸಭೆಗೆ 2019ರ ಮಾರ್ಚ್ 10ರಂದು ಚುನಾವಣೆ ಘೋಷಣೆಯಾಗಿತ್ತು. ಏ.11ರಿಂದ ಮೇ 19ರವರೆಗೆ ಏಳು ಹಂತದಲ್ಲಿ ಮತದಾನ ನಡೆದಿತ್ತು.
ಮೇ 23ಕ್ಕೆ ಫಲಿತಾಂಶ ಪ್ರಕಟವಾಗಿತ್ತು. ಈಗಿನ ಸರ್ಕಾರದ ಅವಧಿ ಜೂನ್‌ವರೆಗೆ ಇದೆ. ಹೀಗಾಗಿ ಅಷ್ಟರೊಳಗೆ ಚುನಾವಣೆ ನಡೆದು, ಹೊಸ ಸರ್ಕಾರ ರಚನೆಯಾಗಬೇಕಿದೆ.