ಸಂಪುಟ ಸಭೆಯಲ್ಲಿ ಸಚಿವರಾದ ಜಾರ್ಜ್‌, ಮಹದೇವಪ್ಪ ಕಿತ್ತಾಟ

KannadaprabhaNewsNetwork |  
Published : Oct 31, 2025, 04:30 AM ISTUpdated : Oct 31, 2025, 05:31 AM IST
KJ George H C Mahadevappa

ಸಾರಾಂಶ

ಗಂಗಾಕಲ್ಯಾಣ ಯೋಜನೆ ಎಸ್‌ಸಿಪಿ-ಟಿಎಸ್‌ಪಿ ಹಣ ಬಳಕೆ ವಿಚಾರಕ್ಕೆ ಇಬ್ಬರು ಪ್ರಭಾವಿ ಸಚಿವರ ನಡುವೆ ಸಚಿವ ಸಂಪುಟ ಸಭೆಯಲ್ಲೇ ಮಾತಿನ ಜಟಾಪಟಿ ನಡೆದಿದ್ದು, ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ ಸಂಧಾನ ಮಾಡಲು ತೀರ್ಮಾನಿಸಲಾಗಿದೆ.

  ಬೆಂಗಳೂರು  :  ಗಂಗಾಕಲ್ಯಾಣ ಯೋಜನೆಯ ಎಸ್‌ಸಿಪಿ-ಟಿಎಸ್‌ಪಿ ಹಣ ಬಳಕೆ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಪ್ರಭಾವಿ ಸಚಿವರ ನಡುವೆ ಸಚಿವ ಸಂಪುಟ ಸಭೆಯಲ್ಲೇ ಮಾತಿನ ಜಟಾಪಟಿ ನಡೆದಿದ್ದು, ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ ಸಂಧಾನ ಮಾಡಲು ತೀರ್ಮಾನಿಸಲಾಗಿದೆ.

ಗಂಗಾಕಲ್ಯಾಣ ಯೋಜನೆಯಡಿ ಎಸ್‌ಸಿ-ಎಸ್ಟಿ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯಲು ಹಾಗೂ ಪಂಪ್‌ಸೆಟ್‌ ಸರಬರಾಜು ಮಾಡಲು 2022-23ರಲ್ಲಿ ನೋಂದಾಯಿಸಿಕೊಂಡಿದ್ದ ಗುತ್ತಿಗೆದಾರರ ಅವಧಿ ವಿಸ್ತರಣೆ ಬಗ್ಗೆ ಸಂಪುಟದಲ್ಲಿ ವಿಷಯ ಪ್ರಸ್ತಾಪವಾಗಿತ್ತು.

ಈ ಕುರಿತು ಚರ್ಚೆ ನಡೆಯುವಾಗ ಸಚಿವರಾದ ಎಚ್.ಸಿ.ಮಹದೇವಪ್ಪ ಹಾಗೂ ಕೆ.ಜೆ.ಜಾರ್ಜ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಗಂಗಾಕಲ್ಯಾಣ ಯೋಜನೆಯಡಿ ಎಸ್ಸಿ-ಎಸ್ಟಿ ಫಲಾನುಭವಿಗಳಿಗಾಗಿ ಕೊರೆಸುವ ಬೋರ್‌ವೆಲ್‌ಗಳ ಘಟಕ ವೆಚ್ಚ ಹೆಚ್ಚಳ ಹಾಗೂ ಸೂಕ್ತ ಸಮಯಕ್ಕೆ ವಿದ್ಯುದೀಕರಣ ಮಾಡುವಂತೆ ಮಹದೇವಪ್ಪ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಜಾರ್ಜ್ ಅವರು ಘಟಕ ವೆಚ್ಚ ಹೆಚ್ಚಳ ಮಾಡಿದರೆ ಹೊರೆಯಾಗುತ್ತದೆ ಎಂದು ಹೇಳಿದ ಮಾತಿಗೆ ಎಚ್.ಸಿ.ಮಹದೇವಪ್ಪ ಏರು ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಇಬ್ಬರ ನಡುವೆಯೂ ವಾದ-ಪ್ರತಿವಾದ ನಡೆದಿದ್ದು, ಸಂಪುಟದಲ್ಲಿ ಗದ್ದಲ ಸೃಷ್ಟಿಯಾಯಿತು.

ಇಬ್ಬರ ನಡುವೆ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಬ್ಬರು ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸಚಿವರ ಹೆಗಲಿಗೆ ಗಂಗಾ ಕಲ್ಯಾಣ

ಫಲಾನುಭವಿಗಳ ಆಯ್ಕೆ ಹೊಣೆ

ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಯಲು ಮತ್ತು ಪಂಪ್‌ಸೆಟ್‌ ಸರಬರಾಜು ಮಾಡಲು ನೋಂದಾಯಿಸಿಕೊಂಡಿದ್ದ ಗುತ್ತಿಗೆದಾರರ ಅವಧಿಯನ್ನು 2027ರ ಜೂನ್‌ವರೆಗೆ ವಿಸ್ತರಿಸಿ ಸಂಪುಟ ಅನುಮೋದನೆ ನೀಡಿದೆ.

ಇದೇ ವೇಳೆ ಗಂಗಾಕಲ್ಯಾಣ ಯೋಜನೆಯಡಿ ಫಲಾನುಭವಿಗಳನ್ನು ಆಯಾ ವರ್ಷದ ಅ.31ರ ಒಳಗಾಗಿ ಸಂಬಂಧಪಟ್ಟ ಕ್ಷೇತ್ರದ ಶಾಸಕರು ಆಯ್ಕೆ ಮಾಡಬೇಕು. ತಪ್ಪಿದರೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಬೇಕು ಎಂದು ನಿರ್ಧರಿಸಲಾಗಿದ್ದು, ಇದು 2025-26ರ ಸಾಲಿನ ಪ್ರಕ್ರಿಯೆಯನ್ನು ಹೊರತುಪಡಿಸಿ ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ.

ಯಾಕೆ ಜಟಾಪಟಿ ? 

- ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿರುವ ಮಹದೇವಪ್ಪ. ಇಂಧನ ಖಾತೆ ಹೊಣೆ ಹೊತ್ತಿರುವ ಜಾರ್ಜ್ 

- ಗಂಗಾ ಕಲ್ಯಾಣ ಯೋಜನೆಯ ಬೋರ್‌ವೆಲ್‌ ವೆಚ್ಚ ಹೆಚ್ಚಳಕ್ಕೆ ಸಂಪುಟ ಸಭೆಯಲ್ಲಿ ಮಹದೇವಪ್ಪ ಮನವಿ 

- ಘಟಕ ವೆಚ್ಚ ಹೆಚ್ಚಳ ಮಾಡಿದರೆ ಹೊರೆಯಾಗುತ್ತದೆ ಎಂದು ಸಚಿವ ಜಾರ್ಜ್‌ ಸ್ಪಷ್ಟನೆ. ಕೆರಳಿದ ಮಹದೇವಪ್ಪ 

ಜಾರ್ಜ್‌ ಹೇಳಿಕೆಗೆ ಏರುಧ್ವನಿಯಲ್ಲಿ ಆಕ್ಷೇಪ. ಇಬ್ಬರೂ ಸಚಿವರ ನಡುವೆ ವಾದ 

- ಪ್ರತಿವಾದ. ಸಭೆಯಲ್ಲಿ ಗದ್ದಲ ಸೃಷ್ಟಿ- ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಬ್ಬರೂ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಲು ತೀರ್ಮಾನ

PREV
Read more Articles on

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು