ನಿಯಮ ಬಾಹಿರವಾಗಿ ಸಿಎ ನಿವೇಶನ ಮಂಜೂರಾತಿ ಆರೋಪ ಎದುರಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ನಿರ್ವಹಣೆಯ ಸಿದ್ಧಾರ್ಥ ವಿಹಾರ ಟ್ರಸ್ಟ್ ಕೂಡ ಸಿಎ ನಿವೇಶನ ಮಂಜೂರಾತಿ ರದ್ದುಪಡಿಸುವಂತೆ ಕೆಐಎಡಿಬಿಗೆ ಪತ್ರ ಬರೆದಿದೆ
ಬೆಂಗಳೂರು : ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ 14 ನಿವೇಶನ ವಾಪಸು ನೀಡಿದ ಬೆನ್ನಲ್ಲೇ ನಿಯಮ ಬಾಹಿರವಾಗಿ ಸಿಎ ನಿವೇಶನ ಮಂಜೂರಾತಿ ಆರೋಪ ಎದುರಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ನಿರ್ವಹಣೆಯ ಸಿದ್ಧಾರ್ಥ ವಿಹಾರ ಟ್ರಸ್ಟ್ ಕೂಡ ಸಿಎ ನಿವೇಶನ ಮಂಜೂರಾತಿ ರದ್ದುಪಡಿಸುವಂತೆ ಕೆಐಎಡಿಬಿಗೆ ಪತ್ರ ಬರೆದಿದೆ.
ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್ ಮತ್ತು ಹೈಟೆಕ್ ಡಿಫೆನ್ಸ್ ಪಾರ್ಕ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಅಧ್ಯಕ್ಷರಾಗಿರುವ ಆಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿಎ ನಿವೇಶವನ್ನು ಕೆಐಎಡಿಬಿ ಮಂಜೂರು ಮಾಡಿತ್ತು.
ಸಿದ್ಧಾರ್ಥ ವಿಹಾರ್ ಟ್ರಸ್ಟ್ ಬಹುಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನೆ, ತರಬೇತಿ ಕೇಂದ್ರ ಸ್ಥಾಪನೆಗೆ ಸಿಎ ನಿವೇಶನ ಮಂಜೂರಾತಿ ಕೋರಿತ್ತು. ಒಟ್ಟು 25 ಕೋಟಿ ರು. ಹೂಡಿಕೆ ಮಾಡಲಿದ್ದು, 150 ಮಂದಿಗೆ ಉದ್ಯೋಗ ನೀಡಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು. ಆದರೆ ತರಾತುರಿಯಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯ ಏಕಗವಾಕ್ಷಿ ಸಮಿತಿ ಸಭೆ ನಡೆಸಿ ನಿವೇಶನ ಮಂಜೂರಾತಿಗೆ ಶಿಫಾರಸು ಮಾಡಿದೆ ಎಂಬ ಆರೋಪ ಎದುರಾಗಿತ್ತು.
ಮಲ್ಲಿಕಾರ್ಜುನ ಖರ್ಗೆ ಕುಟುಂಬದ ನಿರ್ವಹಣೆಯಲ್ಲಿರುವ ಟ್ರಸ್ಟ್ ಪ್ರಭಾವ ಬೀರಿ ನಿಯಮ ಉಲ್ಲಂಘಿಸಿ ಸಿಎ ನಿವೇಶನ ಪಡೆದಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದರು. ಅಲ್ಲದೆ ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಲಾಗಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಈ ಸಂಬಂಧ ವಿವರಣೆ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.
ಇದೀಗ ಪ್ರಕರಣ ಗಂಭೀರ ಸ್ವರೂಪ ಪಡೆಯುವ ಮೊದಲೇ ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಟ್ರಸ್ಟಿ ಆಗಿರುವ ರಾಹುಲ್ ಖರ್ಗೆ ಅವರು ಸಿಎ ನಿವೇಶನ ಮಂಜೂರಾತಿ ಕೋರಿ ಸಲ್ಲಿಸಿದ್ದ ಮನವಿ ಪತ್ರವನ್ನು ಹಿಂಪಡೆಯುತ್ತಿದ್ದೇನೆ. ಮಂಜೂರಾತಿ ರದ್ದುಪಡಿಸಿ ಎಂದು ಕಳೆದ ಸೆ.20ರಂದು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ರಾಹುಲ್ ಖರ್ಗೆ ಪತ್ರದಲ್ಲೇನಿದೆ?
ಕೆಐಎಡಿಬಿಗೆ ಬರೆದಿರುವ ಪತ್ರದಲ್ಲಿ ರಾಹುಲ್ ಖರ್ಗೆ ಅವರು, ತರಬೇತಿ ಕೇಂದ್ರ ಸ್ಥಾಪನೆ ಉದ್ದೇಶದಿಂದ ಫೆ.12ರಂದು ಸಿಎ ನಿವೇಶನ ಮಂಜೂರಾತಿಗೆ ಮನವಿ ಸಲ್ಲಿಸಲಾಗಿತ್ತು. ಮೇ 30ರಂದು ಕೆಐಎಡಿಬಿ ಮಂಜೂರಾತಿ ಪತ್ರ ನೀಡಿದೆ. ಸಿದ್ಧಾರ್ಥ ವಿಹಾರ್ ಟ್ರಸ್ಟ್ ಸಾರ್ವಜನಿಕ ಶಿಕ್ಷಣ, ಸಾಂಸ್ಕೃತಿಕ ಹಾಗೂ ಚಾರಿಟೇಬಲ್ ಟ್ರಸ್ಟ್. ಇದು ಖಾಸಗಿ ಅಥವಾ ಕುಟುಂಬ ನಡೆಸುತ್ತಿರುವ ಟ್ರಸ್ಟ್ ಅಲ್ಲ. ಜತೆಗೆ ಯಾವುದೇ ಲಾಭ ಆಕಾಂಕ್ಷೆ ಹೊಂದಿಲ್ಲ. ಟ್ರಸ್ಟ್ ಬೈಲಾ ಪ್ರಕಾರ ಯಾವುದೇ ಟ್ರಸ್ಟಿಗಳು ಟ್ರಸ್ಟ್ ಆಸ್ತಿ ಅಥವಾ ಆದಾಯದಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ಲಾಭ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಜತೆಗೆ ನಿವೇಶನಕ್ಕಾಗಿ ಯಾವುದೇ ಸಬ್ಸಿಡಿ, ನಿವೇಶನದ ದರ ಕಡಿತ ಅಥವಾ ಕೇಂದ್ರ ನಿರ್ಮಾಣಕ್ಕೆ ಯಾವುದೇ ಹಣಕಾಸು ಸಹಕಾರ ಪಡೆದಿಲ್ಲ. ಮಂಜೂರಾಗಿರುವ ನಿವೇಶನ 10 ವರ್ಷದ ಗುತ್ತಿಗೆ ಮತ್ತು ಮಾರಾಟ ಆಧಾರದ ಮೇಲೆ ಮಂಜೂರಾಗಿದೆ. ಷರತ್ತುಗಳನ್ನು ಪಾಲಿಸದಿದ್ದರೆ 3 ವರ್ಷದಲ್ಲಿ ಮಂಜೂರಾತಿ ರದ್ದುಪಡಿಸಬಹುದು. ಪ್ರಸ್ತುತ ಮಂಜೂರಾತಿ ಪತ್ರ ಮಾತ್ರ ನೀಡಿದ್ದು ಯಾವುದೇ ಕ್ರಯ ಒಪ್ಪಂದ ಆಗಿಲ್ಲ ಎಂದು ಹೇಳಿದ್ದಾರೆ.
ಶೈಕ್ಷಣಿಕ ಸಂಸ್ಥೆಯು ಉದ್ದೇಶಪೂರ್ವಕ, ನಿರಾಧಾರ ಹಾಗೂ ರಾಜಕೀಯ ಪ್ರೇರಿತ ಆರೋಪಗಳನ್ನು ಎದುರಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾದ್ಯವಿಲ್ಲ. ಟ್ರಸ್ಟ್ ಸದುದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ನಿವೇಶನ ಮಂಜೂರಾತಿ ರದ್ದುಪಡಿಸಿ ಎಂದು ಪತ್ರದಲ್ಲಿ ಕೋರಿದ್ದಾರೆ.
ಬಿಜೆಪಿ ಆರೋಪಕ್ಕೆನೊಂದು ವಾಪಸ್
ನಮ್ಮ ಅಣ್ಣ ಯುಪಿಎಸ್ಸಿ ರ್‍ಯಾಂಕ್ ಪಡೆದಿರುವ ವ್ಯಕ್ತಿ. ತುಂಬಾ ಮೃದು ಸ್ವಭಾವದವರು. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ತನ್ನಿಂದ ಕುಟುಂಬದ ಸದಸ್ಯರಿಗೆ ಹಿಂಸೆ ಆಗುತ್ತಿದೆ ಎಂದು ಅಣ್ಣ ನೊಂದು ನಿವೇಶನ ವಾಪಸ್ ನೀಡಿ ಸೆ.20ರಂದು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ.
- ಪ್ರಿಯಾಂಕ್ ಖರ್ಗೆ, ಸಚಿವ
ಆರೋಪದಿಂದ ನೊಂದು ಸೈಟು ವಾಪಸು: ಪ್ರಿಯಾಂಕ್
‘ನಮ್ಮ ಅಣ್ಣ ಯುಪಿಎಸ್ಸಿ ರ್‍ಯಾಂಕ್ ಪಡೆದಿರುವ ವ್ಯಕ್ತಿ. ತುಂಬಾ ಮೃದು ಸ್ವಭಾವದವರು. ಅವರಿಂದ ಕುಟುಂಬದ ಸದಸ್ಯರಿಗೆ ಹಿಂಸೆ ಆಗುತ್ತಿದೆ ಎಂದು ನೊಂದಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ನಿವೇಶನ ಮಂಜೂರಾತಿ ರದ್ದುಪಡಿಸುವಂತೆ ಸೆ.20ರಂದು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ರಾಜಕೀಯ ಆರೋಪ ಮಾಡಿ ಇದನ್ನು ಬಿಜೆಪಿಯವರು ದೊಡ್ಡ ಸಾಧನೆ ಎಂದು ಹೇಳುತ್ತಾ ಹೊರಟಿದ್ದರು. ಆದರೆ, ರಾಜಕೀಯ ಆರೋಪದಿಂದ ನೊಂದು ಸಿಎ ನಿವೇಶನ ವಾಪಸು ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ರಾಹುಲ್ ಖರ್ಗೆ ಅವರಿಗೆ ಇಂತಹ ವಾತಾವರಣದಲ್ಲಿ ಕೆಲಸ ಮಾಡುವುದಕ್ಕೆ ಆಗಲ್ಲ. ಹೀಗಾಗಿ ಮರಳಿ ನೀಡಿದ್ದಾರೆ. ಇದರಲ್ಲಿ ಅಕ್ರಮ ಇದ್ದಿದ್ದರೆ ನರೇಂದ್ರ ಮೋದಿ, ಅಮಿತ್ ಶಾ ಬಿಡುತ್ತಿದ್ದರಾ? ವಿಜಯೇಂದ್ರ ಅವರು ಕಲಬುರಗಿಯವರೆಗೆ ಪಾದಯಾತ್ರೆ ಮಾಡುತ್ತಿದ್ದರು ಎಂದು ಹೇಳಿದರು.
ಛಲವಾದಿ ನಾರಾಯಣಸ್ವಾಮಿ ಬಿರಿಯಾನಿ ಅಂಗಡಿ ಮಾಡುವುದಕ್ಕೆ ಸಿಎ ನಿವೇಶನ ಪಡೆದಿದ್ದರು ಅಲ್ಲವೇ? ಇಂತಹವರಿಂದ ನಾವು ಪಾಠ ಕಲಿಯಬೇಕೇ? ಸಿಎ ಸೈಟ್ ತೆಗೆದುಕೊಳ್ಳುವ ಬಗ್ಗೆ ರಾಹುಲ್ ಖರ್ಗೆ ನಿರ್ಧಾರ ಮಾಡಿದ್ದರು. ಈಗ ಅವರೇ ಇಷ್ಟವಿಲ್ಲ ಅಂತ ಮರಳಿ ನೀಡಿದ್ದಾರೆ ಅಷ್ಟೇ ಎಂದರು.
ಬಿಜೆಪಿಯವರು ಮನು ಸ್ಮೃತಿ ಸ್ವಭಾವದವರು. ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಆರ್‌ಎಸ್‌ಎಸ್‌ಗೆ ಕಳುಹಿಸುವುದಿಲ್ಲ. ದಲಿತರ ಮಕ್ಕಳು ಮುಂದೆ ಬರುವುದನ್ನು ಇವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ವಿನಾಕಾರಣ ವಿವಾದ ಸೃಷ್ಟಿ ಮಾಡಿದ್ದಾರೆ.
-ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ