ಕೆಎಚ್‌ಬಿ ಅಡಿ ‘ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮ’ ಹೆಸರಿನಲ್ಲಿ ಆನೇಕಲ್‌ ತಾಲೂಕಿನಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಕ್ರಿಕೆಟ್‌ ಕ್ರೀಡಾಂಗಣ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ, ‘ನಮ್ಮ ಮನೆ’ ಯೋಜನೆಯಡಿ ಮುಂದಿನ 2 ವರ್ಷಗಳಲ್ಲಿ ರಿಯಾಯ್ತಿ ದರದಲ್ಲಿ 50 ಸಾವಿರ ನಿವೇಶನಗಳ ವಿತರಣೆ ಸೇರಿ ವಸತಿ ಇಲಾಖೆಯಡಿ ಹಲವು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶ

ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಬಿಎಲ್‌ಸಿ ಆಧಾರಿತ ಒಂದು ಲಕ್ಷ ಮನೆಗಳ ಹೊಸ ಗುರಿ ಮಂಜೂರು ಮಾಡಲಾಗುವುದು. ಸದರಿ ಗುರಿಯಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುವ ಸಹಾಯಧನವನ್ನು 1.20 ಲಕ್ಷ ರು.ನಿಂದ 2 ಲಕ್ಷ ರು.ಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 2 ಲಕ್ಷ ರು.ಗಳಿಂದ 3 ಲಕ್ಷ ರು.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಫಲಾನುಭವಿಗಳ ಆಯ್ಕೆಗೆ ಮ್ಯಾನ್ಯುವೆಲ್‌ ಲಾಟರಿ ಪ್ರಕ್ರಿಯೆ

ರಾಜ್ಯ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆಗೆ ಮ್ಯಾನ್ಯುವೆಲ್‌ ಲಾಟರಿ ಪ್ರಕ್ರಿಯೆ ಬದಲಾಗಿ ಇನ್ನು ಮುಂದೆ ಆನ್‌ಲೈನ್ ಲಾಟರಿ ಮೂಲಕ ಗ್ರಾಮ ಸಭೆಗಳಲ್ಲಿ ಆಯ್ಕೆಮಾಡಲಾಗುವುದು. ಕರ್ನಾಟಕ ಗೃಹ ಮಂಡಳಿಯಿಂದ ‘ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮ’ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಕ್ರಿಕೆಟ್‌ ಕ್ರೀಡಾಂಗಣ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ನಡೆಸಲು ಅನುಕೂಲವಾಗುವಂತೆ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸಲಾಗುವುದು. ಕೆಎಚ್‌ಬಿಯಿಂದ ‘ನಮ್ಮ ಮನೆ’ ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ 50 ಸಾವಿರ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.


ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ(ಎಎಚ್‌ಪಿ) 1.29 ಲಕ್ಷ ಮನೆಗಳ ನಿರ್ಮಾಣ ಕಾರ್ಯವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಸರ್ಕಾರದಿಂದ 1,136 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಫಲಾನುಭವಿಗಳ ವಂತಿಕೆಗೆ ಒದಗಿಸಿ 2025-26ನೇ ಸಾಲಿಗೆ ಒಟ್ಟಾರೆ 79,134 ಮನೆಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಇದರಿಂದ ಕೊಳಗೇರಿ ನಿವಾಸಿಗಳಿಗೆ ಶಾಶ್ವತ ಸೂರು ಕಲ್ಪಿಸಿದಂತಾಗಿದೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ವಸತಿ ಯೋಜನೆಗಳಡಿ 7,328 ಕೋಟಿ ರು. ವೆಚ್ಚದಲ್ಲಿ ಒಟ್ಟು 4,19,454 ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಿದೆ. ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹಿಂದಿನ ಸರ್ಕಾರ ಅನುದಾನ ನೀಡದೇ ಮಂಜೂರಾತಿ ನೀಡಿರುವ 4.90 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಹಾಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಲಾಗಿದೆ.

- 80,000 ಆಸನದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ

- ಇದರ ಜತೆ ಅಂತಾರಾಷ್ಟ್ರೀಯ ಕ್ರೀಡೆಗಳಿಗಾಗಿ ಕ್ರೀಡಾಂಗಣ

- ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ

- ವಿವಿಧ ವಸತಿ ಯೋಜನೆಗಳಡಿ ಬಿಎಲ್‌ಸಿ ಆಧಾರಿತ 1 ಲಕ್ಷ ಮನೆಗಳ ಹೊಸ ಗುರಿ

- ಆನ್‌ಲೈನ್ ಲಾಟರಿ ಮೂಲಕ ಗ್ರಾಮ ಸಭೆಗಳಲ್ಲಿ ವಸತಿ ಫಲಾನುಭವಿಗಳ ಆಯ್ಕೆ