ಕನ್ನಡಪ್ರಭ ವಾರ್ತೆ ಮೈಸೂರು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ಆಗಲು ಅರ್ಹತೆ ಇಲ್ಲ ಎಂಬ ಶಾಸಕ ಜಿ.ಟಿ ದೇವೇಗೌಡರ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ತಿರುಗೇಟು ನೀಡಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗ ಪ್ರಧಾನಿ ಅಲ್ಲ ರಾಷ್ಟ್ರಪತಿಗಳಾಗುವ ಅರ್ಹತೆಯೂ ಇದೆ. ಜಿ.ಟಿ.ದೇವೇಗೌಡರಿಗೆ ಅರಿವಿನ ಕೊರತೆ ಇದೆ ಅನ್ನಿಸುತ್ತದೆ ಎಂದರು.
ಇವರಿಗೆ ಬಡತನ, ಶೋಷಣೆ ಅನ್ನೋದು ಗೊತ್ತಿಲ್ಲ. ಇವರು ಉನ್ನತ ಶಿಕ್ಷಣ ಸಚಿವರಾಗಿದ್ದವರು, ಇದು ಪ್ರಜಾಪ್ರಭುತ್ವದ ಸೌಂದರ್ಯ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಎಲ್ಲ ರೀತಿಯ ಅವಕಾಶಗಳಿವೆ. ಮೈಸೂರು ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ಅವರ ಕೊಡುಗೆ ಏನೂ ಇಲ್ಲ ಎಂಬ ಜಿಟಿಡಿ ಹೇಳಿಕೆಗೆ ನಾನು ಬಹಿರಂಗ ಸವಾಲು ಹಾಕುತ್ತೇನೆ. ಅವರು ಬರಲಿ ಅವರ ಜೊತೆ ಬಿಜೆಪಿಯವರು ಬರಲಿ ನಾವು ಉತ್ತರ ಕೊಡುತ್ತೇವೆ ಎಂದರು.ಜಯದೇವ ಆಸ್ಪತ್ರೆ, ಮಹಾರಾಣಿ ಕಾಲೇಜು ನಿರ್ಮಾಣ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ ಕಟ್ಟಡಗಳೇ ಸಿದ್ದರಾಮಯ್ಯ ಅಭಿವೃದ್ಧಿಯ ಸಾಧನೆಗೆ ಸಾಕ್ಷಿಯಾಗಿವೆ ಎಂದರು.
ನಮ್ಮ ಜೊತೆ ಚರ್ಚೆಗೆ ಬರಲಿ, ನಾವು ಸಿದ್ದರಾಮಯ್ಯ ಅವರು ಏನು ಮಾಡಿದ್ದಾರೆ ಎಂದು ಹೇಳುತ್ತೇವೆ ಎಂದರು.ಬಿಜೆಪಿ ರಾಜಕೀಯ ಪ್ರೇರಿತ ಹೇಳಿಕೆ:
ನಾನು ಕರಸೇವಕ, ನನ್ನನ್ನೂ ಬಂಧಿಸಿ ಎಂಬ ಪ್ರತಿಭಟನಾ ಅಭಿಯಾನ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನವಾಗಿದೆ. ಹಾದಿ, ಬೀದಿಯಲ್ಲಿ ಹೋಗುವವರನ್ನು ಬಂಧಿಸಲು ಆಗುತ್ತದೆಯೇ ಎಂದರು.ನಾವೇನು ರಾಮನ ಭಕ್ತರಲ್ಲವೇ. ಬರಿ ಬರೀ ರಾಮ ರಾಮ ಎಂದರೆ ಹೊಟ್ಟೆ ತುಂಬುವುದಿಲ್ಲ. ಸರ್ಕಾರ ಮಾಡಿದ್ದೆಲ್ಲವೂ ತಪ್ಪು ತಪ್ಪು ಎನ್ನುವುದು ಏಕೆ? ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿದೆ. ಹಾಗಾಗಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಕರಣಗಳ ಸಂಬಂಧ ಸರ್ಕಾರ ಇದೀಗ ಕ್ರಮಕೈಗೊಂಡಿದೆ ಎಂದರು.
ಇದೇ ಹಿನ್ನೆಲೆಯಲ್ಲಿ ಶ್ರೀಕಾಂತ್ ಪೂಜಾರಿಯ ಬಂಧನವಾಗಿದೆ. ಆದರೆ, ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದರು.