ನಿವೃತ್ತಿ ಘೋಷಣೆ ಬಳಿಕವೂ ಡಿ.ವಿ. ಸದಾನಂದ ಗೌಡ ಸ್ಪರ್ಧೆಗೆ ಒತ್ತಡ!

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದ ಗೌಡ ತಾವು ರಾಜಕೀಯ ನಿವೃತ್ತಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಬಳಿಕವೂ ಮತ್ತೆ ಸ್ಪರ್ಧೆ ಮಾಡುವಂತೆ ನಿಯೋಗವೊಂದು ಅವರನ್ನು ಶುಕ್ರವಾರ ಭೇಟಿ ಮಾಡಿದೆ.

ವಿಜಯ್ ಮಲಗಿಹಾಳ

ಕನ್ನಡಪ್ರಭ ವಾರ್ತೆ ಬೆಂಗಳೂರು

ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ಬಹಿರಂಗವಾಗಿಯೇ ಘೋಷಿಸಿದ ಬಳಿಕವೂ ಪಕ್ಷದ ಹಿರಿಯ ನಾಯಕರ ನಿಯೋಗವೊಂದು ಅವರನ್ನು ಭೇಟಿ ಮಾಡಿ ಮತ್ತೆ ಸ್ಪರ್ಧಿಸುವಂತೆ ಒತ್ತಡ ಹೇರಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇದು ಮೇಲ್ನೋಟಕ್ಕೆ ಕಾಣುವಷ್ಟು ಸರಳವಿಲ್ಲ. ಸದಾನಂದಗೌಡರ ಮೇಲಿನ ಅಕ್ಕರೆಗಿಂತ ಅವರ ಬದಲು ಇನ್ಯಾರೋ ಈ ಕ್ಷೇತ್ರಕ್ಕೆ ವಲಸೆ ಬಂದು ಕಣಕ್ಕಿಳಿಯುವುದನ್ನು ತಡೆಯುವ ತಂತ್ರ ಅಡಗಿರುವಂತಿದೆ ಎಂಬ ಬಲವಾದ ಅನುಮಾನ ಬಿಜೆಪಿ ಪಾಳೆಯದಿಂದಲೇ ವ್ಯಕ್ತವಾಗಿದೆ.

ಸದಾನಂದಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಘೋಷಣೆಗೂ ಮೊದಲೇ ಬಿಜೆಪಿಯಿಂದ ಈ ಬಾರಿ ಸ್ಪರ್ಧಿಸಬಹುದಾದ ಹಲವು ಹೆಸರುಗಳು ತೇಲಿಬಂದಿದ್ದವು. ಸದಾನಂದಗೌಡರ ಘೋಷಣೆ ಬಳಿಕ ಆ ಹೆಸರುಗಳ ಪಟ್ಟಿಗೆ ಇನ್ನಷ್ಟು ಸೇರ್ಪಡೆಯಾದವು. ಇದು ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಕ್ಷೇತ್ರವಾಗಿದ್ದರಿಂದ ಸದಾನಂದಗೌಡರನ್ನು ಬದಲಿಸಿದರೂ ಒಕ್ಕಲಿಗ ಸಮುದಾಯದವರನ್ನೇ ಕಣಕ್ಕಿಳಿಸಬೇಕು ಎಂಬ ಚಿಂತನೆಯೂ ಪಕ್ಷದ ವರಿಷ್ಠರಲ್ಲಿದೆ.

ಮಂಡ್ಯ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್‌, ಕೇಂದ್ರ ಸಚಿವೆಯೂ ಆಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಾ.ಕೆ.ಸುಧಾಕರ್ ಜತೆಗೆ ಇದೀಗ ಮತ್ತೊಬ್ಬ ಮಾಜಿ ಸಚಿವ ಸಿ.ಟಿ.ರವಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿವೆ. ಇನ್ನೂ ಹಲವರು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಹಿಡಿತ ಕೈತಪ್ಪುವ ಆತಂಕ:ಈ ಪೈಕಿ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಹಾಗೂ ಸುಧಾಕರ್‌ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಬೆಂಗಳೂರು ಬಿಜೆಪಿಯ ಒಕ್ಕಲಿಗ ಸಮುದಾಯದ ಹಿರಿಯ ನಾಯಕರಿಗೆ ಒಲವಿಲ್ಲ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಶೋಭಾ, ರವಿ ಅಥವಾ ಸುಧಾಕರ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಲ್ಲಿ ರಾಜಧಾನಿ ಬೆಂಗಳೂರು ರಾಜಕಾರಣದ ಮೇಲೆ ಹಿಡಿತ ಸಾಧಿಸಲಿದ್ದಾರೆ. ಅದರಿಂದ ತಮಗೆ ಕುತ್ತು ಉಂಟಾಗಬಹುದು ಎಂಬ ಆತಂಕ ಈ ಹಿರಿಯ ನಾಯಕರನ್ನು ಕಾಡುತ್ತಿದೆ ಎನ್ನಲಾಗಿದೆ.

ಸದಾನಂದಗೌಡರು ಎರಡು ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೂ ಅಲ್ಲದೆ ಕೇಂದ್ರ ಸಚಿವ ಸ್ಥಾನ ಅಲಂಕರಿಸಿದರೂ ಬೆಂಗಳೂರು ರಾಜಕಾರಣ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡಲಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆಯೇ ಇದ್ದರು. ಅಷ್ಟರ ಮಟ್ಟಿಗೆ ಪಕ್ಷದ ಬೆಂಗಳೂರಿನ ಒಕ್ಕಲಿಗ ನಾಯಕರಿಗೆ ಸಮಾಧಾನ.

ಈಗ ಹೊರಗಿನಿಂದ ಬಂದು ಸ್ಪರ್ಧಿಸುವವರ ಪಟ್ಟಿಯಲ್ಲಿ ಇರುವ ನಾಯಕರು ರಾಜಕೀಯ ಮಹತ್ವಾಕಾಂಕ್ಷೆ ಇರುವಂಥವರು. ಮುಂದೆ ರಾಜಧಾನಿ ಬೆಂಗಳೂರಿನ ರಾಜಕಾರಣದಲ್ಲಿ ತಮ್ಮದೇ ಪ್ರಭಾವ ಬೀರುವ ಸಾಮರ್ಥ್ಯ ಉಳ್ಳವರು. ಸದಾನಂದಗೌಡರ ರೀತಿ ನಿರ್ಲಿಪ್ತರಾಗಿ ಇರುವಂಥವರಲ್ಲ. ಹೀಗಾಗಿ, ಸದಾನಂದಗೌಡರೇ ಮೂರನೇ ಬಾರಿಗೆ ಸ್ಪರ್ಧಿಸುವುದು ಸೂಕ್ತ ಎಂಬ ನಿಲವಿಗೆ ಪಕ್ಷದ ಬೆಂಗಳೂರು ನಾಯಕರು ಬಂದಿದ್ದಾರೆ ಎನ್ನಲಾಗಿದೆ.

ಸದಾನಂದಗೌಡರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬ ವದಂತಿ ಕಳೆದ ಹಲವು ತಿಂಗಳುಗಳಿಂದ ಹಬ್ಬಿತ್ತು. ಇದಕ್ಕೆ ಪೂರಕ ಎಂಬಂತೆ ಸದಾನಂದಗೌಡರು ತಾವು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಆದರೆ, ಗೌಡರಿಗೆ ಚುನಾವಣೆಗೆ ನಿಲ್ಲದಂತೆ ಪಕ್ಷದ ಹೈಕಮಾಂಡ್ ಹೇಳಿದೆ ಎಂಬ ಮಾತನ್ನು ಕಳೆದ ನವೆಂಬರ್ ತಿಂಗಳಲ್ಲಿ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಹೈಕಮಾಂಡ್ ಈ ರೀತಿ ಹೇಳಿಯೇ ಇಲ್ಲ ಎಂದ ಸದಾನಂದಗೌಡರು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ಬಳಿಕ ಯಡಿಯೂರಪ್ಪ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬ ಸಮಜಾಯಿಷಿ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.ಹೊಸ ತಿರುವು:ಈ ನಡುವೆ ಬುಧವಾರ ಬೆಂಗಳೂರು ಬಿಜೆಪಿ ಒಕ್ಕಲಿಗ ನಾಯಕರೂ ಆಗಿರುವ ಶಾಸಕಾಂಗ ಪಕ್ಷದ ನಾಯಕ ಆರ್‌.ಅಶೋಕ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಕರೆದುಕೊಂಡು ಸದಾನಂದಗೌಡರ ನಿವಾಸಕ್ಕೆ ಭೇಟಿ ನೀಡಿ ಮತ್ತೆ ಸ್ಪರ್ಧಿಸುವಂತೆ ಒತ್ತಾಯ ಮಾಡಿದ ಬಳಿಕ ಹೊಸ ತಿರುವು ಪಡೆದುಕೊಂಡಿತು. ಇದಕ್ಕೆ ಪ್ರತಿಯಾಗಿ ಇದುವರೆಗೆ ರಾಜಕೀಯ ನಿವೃತ್ತಿ ಎಂಬ ಮಂತ್ರ ಜಪಿಸುತ್ತಿದ್ದ ಸದಾನಂದಗೌಡರೂ ತಮ್ಮ ನಿಲುವು ಬದಲಿಸಿ ಮುಂದೆ ನೋಡೋಣ... ಎಂಬ ಮಾತನ್ನು ಬಹಿರಂಗವಾಗಿಯೇ ಹೇಳುವ ಮೂಲಕ ಅವಕಾಶ ಮುಕ್ತವಾಗಿರಿಸಿದರು.

Share this article