ಪ್ಯಾರಾ ಮೆಡಿಕಲ್‌ ಬೋರ್ಡಲ್ಲಿ ಮಾರ್ಕ್ಸ್‌ ಕಾರ್ಡ್‌ ಟೆಂಡರ್‌ ಅಕ್ರಮ : ಛಲವಾದಿ

KannadaprabhaNewsNetwork | Updated : May 06 2025, 04:39 AM IST

ಸಾರಾಂಶ

ಪ್ಯಾರಾ ವೈದ್ಯಕೀಯ ಮಂಡಳಿಯಲ್ಲಿ ಮಾರ್ಕ್‌ ಕಾರ್ಡ್‌ ಟೆಂಡರ್‌ಗೆ ಸಂಬಂಧಿಸಿ ಅಕ್ರಮ ನಡೆದಿದ್ದು  ಕಾನೂನು ಬಾಹಿರ ಟೆಂಡರ್‌ಗಳನ್ನು ಮಾಡಲಾಗುತ್ತಿದೆ - ಛಲವಾದಿ ನಾರಾಯಣಸ್ವಾಮಿ ಆರೋಪ

  ಬೆಂಗಳೂರು : ಪ್ಯಾರಾ ವೈದ್ಯಕೀಯ ಮಂಡಳಿಯಲ್ಲಿ ಮಾರ್ಕ್‌ ಕಾರ್ಡ್‌ ಟೆಂಡರ್‌ಗೆ ಸಂಬಂಧಿಸಿ ಅಕ್ರಮ ನಡೆದಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಇಲಾಖೆಯಲ್ಲಿ ಕಾನೂನು ಬಾಹಿರ ಟೆಂಡರ್‌ಗಳನ್ನು ಮಾಡಲಾಗುತ್ತಿದೆ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್‌ ಸರ್ಕಾರ ಲೂಟಿಯಲ್ಲಿ ತೊಡಗಿದ್ದು, ತಮಗೆ ಬೇಕಾದವರಿಗೆ ಮಾರ್ಕ್ಸ್ ಕಾರ್ಡ್‌ ಟೆಂಡರ್‌ಗೆ ಅವಕಾಶ ನೀಡಲಾಗುತ್ತಿದೆ. ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‍ಮೆಂಟ್ ಪೋರ್ಟಲ್‍ನಲ್ಲಿ ಟೆಂಡರ್‌ಗಳನ್ನು ಹಾಕಲಾಗುತ್ತದೆ. ಮಾರ್ಕ್ಸ್‌ ಕಾರ್ಡ್‌ ಮುದ್ರಣ ಮಾಡುವ ಕಾರ್ಯದಲ್ಲಿ ನಮ್ಮ ಸರ್ಕಾರ ಟೆಂಡರ್‌ ನೀಡಿತ್ತು. ಒಂದು ಮಾರ್ಕ್ಸ್‌ ಕಾರ್ಡ್‌ ಮುದ್ರಿಸಲು 9.45 ರು.ಗೆ ಟೆಂಡರ್‌ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಟೆಂಡರ್‌ ಕರೆದು ಮಾರ್ಕ್ಸ್‌ ಕಾರ್ಡ್‌ ಮುದ್ರಿಸಲು 100 ರು. ಕೋರಿದೆ. ಮಾತುಕತೆ ಬಳಿಕ 91 ರು.ಗೆ ಇಳಿಕೆ ಮಾಡಿದೆ ಎಂದು ದೂರಿದರು.

ನಗರದ ಸಂಜಯನಗರದಲ್ಲಿನ ಊರ್ದವ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ಗೆ ವರ್ಕ್ ಆರ್ಡರ್ ಕೊಡಲಾಗಿದೆ. ಈ ವಿಷಯ ತಿಳಿದ ಬಳಿಕ ಸರ್ಕಾರಕ್ಕೆ ಪತ್ರ ಬರೆದು ಕೆಟಿಪಿಪಿ ಕಾಯ್ದೆ ಉಲ್ಲಂಘನೆಯಾಗಿರುವ ಬಗ್ಗೆ ಗಮನಸೆಳೆಯಲಾಗಿತ್ತು. ಇದಕ್ಕೆ ಈವರೆಗೂ ಉತ್ತರ ನೀಡಿಲ್ಲ. ಟೆಂಡರ್‌ ಅನ್ನು ಊರ್ದವ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ವೆಂಕಟರೆಡ್ಡಿ ಡಿ. ಪಾಟೀಲರಿಗೆ ಇದನ್ನು ನೀಡಿದ್ದು, ಅವರು ಸಚಿವ ಡಾ.ಶರಣಪ್ರಕಾಶ್ ಪಾಟೀಲರ ಹತ್ತಿರದ ಸಂಬಂಧಿ ಅಥವಾ ಸಮೀಪವರ್ತಿಯಾಗಿದ್ದಾರೆ ಎಂದು ಆರೋಪಿಸಿದರು.

ಊರ್ದವ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬುದು ಈವೆಂಟ್ ಮೆನೇಜ್‍ಮೆಂಟ್ ಕಂಪನಿಯಾಗಿದ್ದು, ಇದಕ್ಕೂ ಪ್ರಿಂಟಿಂಗ್‍ಗೂ ಏನೂ ಸಂಬಂಧ ಇಲ್ಲ. ಅವರು ಯಾವತ್ತೂ ಮುದ್ರಣದ ಕೆಲಸ ಮಾಡಿಲ್ಲ. ಸಚಿವರಿಗೆ ಬೇಕಾದವರಿಗೆ ಕೊಡಲು ಕ್ರಮ ಕೈಗೊಂಡಿದ್ದಾರೆ. ಇದು ಕಪ್ಪುಪಟ್ಟಿಗೆ ಸೇರಿಸಲಾದ ಕಂಪನಿಯಾಗಿದೆ. ಇದರ ಮೇಲೆ ಸುಮಾರು 20-25 ಪ್ರಕರಣಗಳಿವೆ. ಇಂತಹ ಕಂಪನಿಗೆ ಟೆಂಡರ್ ಕೊಡಲಾಗಿದೆ ಎಂದು ಕಿಡಿಕಾರಿದರು.

Share this article