ದರ ಏರಿಕೆಗಾಗಿ ಹೆದ್ದಾರಿ ತಡೆದು ಬೃಹತ್‌ ರೈತ ಹೋರಾಟ-13 ಜಿಲ್ಲೆಗಳಲ್ಲಿ ಕಬ್ಬು ಕಿಚ್ಚು

Published : Oct 14, 2026, 05:19 AM IST
Sugar cane farmer

ಸಾರಾಂಶ

ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆದ ಸಭೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಭುಗಿಲೆದ್ದಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಬೆಂಗಳೂರು : ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆದ ಸಭೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಭುಗಿಲೆದ್ದಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಪ್ರತಿ ಟನ್‌ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ 13 ಹೆಚ್ಚು ಜಿಲ್ಲೆಗಳಲ್ಲಿ ರೈತರು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಿರೇಬಾಗೇವಾಡಿ ಮತ್ತು ಹತ್ತರಗಿ ಟೋಲ್‌ ಬಳಿ ಜಮಾಯಿಸಿದ ರೈತರು, ಹೆದ್ದಾರಿ ಬಂದ್‌ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪ್ರತಿಕೃತಿಗೆ ಪೊರಕೆ ಮತ್ತು ಚಪ್ಪಲಿಯಿಂದ ಹೊಡೆದು, ಪ್ರತಿಕೃತಿ ದಹಿಸಿದರು. ಉರುಳು ಸೇವೆ ನಡೆಸಿ, ಬಾರಕೋಲುಗಳನ್ನು ನೆಲಕ್ಕೆ ಬಡಿದು ಬಾರಕೋಲು ಚಳವಳಿ ನಡೆಸಿದರು. ಇದರಿಂದಾಗಿ ಬೆಳಗಾವಿ-ಮಹಾರಾಷ್ಟ್ರ ಮಾರ್ಗ ಬಂದ್‌ ಆಗಿತ್ತು. ಪ್ರತಿಭಟನೆ ವೇಳೆ ರೈತ ಮಾರುತಿ ಗವಳಿ (55) ಎಂಬುವರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಮಧ್ಯೆ, ಬೆಳಗಾವಿ ಜಿಲ್ಲೆ ಹುಕ್ಕೇರಿ ಟೋಲ್‌ ನಾಕಾದಲ್ಲಿ ಪ್ರತಿಭಟನೆ ವೇಳೆ ರೈತ ಲಕ್ಷ್ಮೀಕಾಂತ ಎಂಬುವರು ಟೋಲ್‌ ನಾಕಾದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು.

ಕೊಪ್ಪಳದ ಹಿಟ್ನಾಳ್‌ ಟೋಲ್‌ಗೇಟ್‌ ಬಳಿ ತಲೆಯ ಮೇಲೆ ಕಲ್ಲು ಹೊತ್ತು, ಕಿವಿಯಲ್ಲಿ ಹೂವು ಇಟ್ಟುಕೊಂಡು, ಉರುಳು ಸೇವೆ ಮಾಡಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿದರು. ಪ್ರತಿಭಟನೆ ವೇಳೆ ರೈತ ಮಹಿಳೆ ರತ್ನಮ್ಮ ಕಮಲಾಪುರ ಎಂಬುವರು ಪಕ್ಕದಲ್ಲಿಯೇ ಮರಕ್ಕೆ ನೇಣು ಹಾಕಿಕೊಳ್ಳಲು ಯತ್ನಿಸಿದಾಗ ರೈತರು ಹಾಗೂ ಪೊಲೀಸರು ಅವರನ್ನು ತಡೆದರು. ಈ ವೇಳೆ, ಮಹಿಳೆ ಹಾಗೂ ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆದು, ಮಹಿಳೆ ಮೂರ್ಛೆ ಹೋದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಬಾಗಲಕೋಟೆ ಬಳಿಯ ಗದ್ದನಕೇರಿ ಕ್ರಾಸ್‌ನಲ್ಲಿ ರೈತರು ಎತ್ತಿನ ಬಂಡಿ ತಂದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರಿಂದ ಹುಬ್ಬಳ್ಳಿ-ಧಾರವಾಡ, ವಿಜಯಪುರ, ಬೆಳಗಾವಿ, ರಾಯಚೂರು ಜಿಲ್ಲೆಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ಬಂದ್‌ ಆಗಿತ್ತು. ರಸ್ತೆಯಲ್ಲಿಯೇ ಒಲೆ ಹೊತ್ತಿಸಿ ಊಟ ಮಾಡಿ ಸಂಜೆವರೆಗೂ ರೈತರು ಪ್ರತಿಭಟನೆ ನಡೆಸಿದರು.

ಕಲ್ಯಾಣ ನಾಡಿನ ಬೀದರ್‌, ಯಾದಗಿರಿ, ರಾಯಚೂರು, ಕಲಬುರಗಿಯಲ್ಲೂ ರೈತರ ಪ್ರತಿಭಟನೆ ಕಾವು ಪಡೆದಿತ್ತು. ಕಲಬುರಗಿಯ ರಾಮ ಮಂದಿರ ವೃತ್ತದ ಬಳಿ ಜಮಾಯಿಸಿದ ರೈತರು ರಸ್ತೆ ತಡೆ ನಡೆಸಿದ್ದರಿಂದ ವಿಜಯಪುರ-ಬೆಂಗಳೂರು ಹೆದ್ದಾರಿ ಬಂದ್‌ ಆಗಿದೆ. ಇದೇ ವೇಳೆ, ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಪ್ರತಿಭಟನೆಯಿಂದಾಗಿ ಕಲಬುರಗಿ-ಬೆಂಗಳೂರು ಹೆದ್ದಾರಿ ಬಂದ್‌ ಆಗಿದೆ.

ಮಂಡ್ಯದ ಸಂಜಯ್‌ ವೃತ್ತದ ಬಳಿ ಜಮಾಯಿಸಿದ ರೈತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಕೆಲಕಾಲ ವಾಹನ ಸಂಚಾರ ತಡೆದರು. ಇದೇ ವೇಳೆ, ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರ ಬಳಿ ಕೂಡ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಜೋಶಿ ಕಚೇರಿ, ನಿವಾಸದ ಸುತ್ತ ಬ್ಯಾರಿಕೇಡ್ ಅಳವಡಿಕೆ

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಬಳಿಯ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಚೇರಿ ಮುಂಭಾಗ ಹಾಗೂ ಅವರ ನಿವಾಸದ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್‌ ಅಳವಡಿಸಿ, ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿತ್ತು.

ಹೆದ್ದಾರಿಗಳು ಬಂದ್

- ಬೆಳಗಾವಿಯ ಹಿರೇಬಾಗೇವಾಡಿ, ಹತ್ತರಗಿ ಟೋಲ್‌ ಗೇಟ್‌, ಧಾರವಾಡದ ಬೈಪಾಸ್‌, ಹಾವೇರಿಯ ಶಿಗ್ಗಾಂವಿ ಬಳಿಯ ಬಂಕಾಪುರ ಟೋಲ್‌ಗೇಟ್‌ ಬಳಿ ಪ್ರತಿಭಟನೆ; ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್.

- ಬಾಗಲಕೋಟೆಯ ಹುನಗುಂದ ಬಳಿ ಪ್ರತಿಭಟನೆ; ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್‌.

- ಕೊಪ್ಪಳದ ಹಿಟ್ನಾಳ್‌ ಟೋಲ್‌ಗೇಟ್‌ ಬಳಿ ಪ್ರತಿಭಟನೆ; ರಾಷ್ಟ್ರೀಯ ಹೆದ್ದಾರಿ 50; ಹುನಗುಂದ- ಹೊಸಪೇಟೆ ಬಂದ್‌.

- ಮಂಡ್ಯದಲ್ಲಿ ಪ್ರತಿಭಟನೆ; ಬೆಂಗಳೂರು-ಮೈಸೂರು ಹೆದ್ದಾರಿ ಬಂದ್‌.

- ಕಲಬುರಗಿಯಲ್ಲಿ ಪ್ರತಿಭಟನೆ; ವಿಜಯಪುರ-ಬೆಂಗಳೂರು, ಕಲಬುರಗಿ-ಬೆಂಗಳೂರು ಹೆದ್ದಾರಿ ಬಂದ್‌.

- ಬಾಗಲಕೋಟೆ ಗದ್ದನಕೇರಿ ಕ್ರಾಸ್‌ ಬಳಿ ಪ್ರತಿಭಟನೆ; ಹುಬ್ಬಳ್ಳಿ, ವಿಜಯಪುರ, ಬೆಳಗಾವಿ, ರಾಯಚೂರು ಜಿಲ್ಲೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಬಂದ್‌.

- ವಿಜಯನಗರದಲ್ಲಿ ಪ್ರತಿಭಟನೆ: ರಾಷ್ಟ್ರೀಯ ಹೆದ್ದಾರಿ 50, ನಾಂದೇಡ್‌- ಚಿತ್ರದುರ್ಗ ಹೆದ್ದಾರಿ ಬಂದ್‌.

- ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಕ್ರಾಸ್ ಬಳಿ ಪ್ರತಿಭಟನೆ; ವಿಜಯಪುರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌.

ರೈತರ ಬೇಡಿಕೆ ಏನು?

- ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿ ಮಾಡಬೇಕು

- ಕೆಜಿ ಸಕ್ಕರೆಗೆ ₹60 ಕನಿಷ್ಠ ಬೆಂಬಲ ಬೆಲೆ ಕೊಡಬೇಕು

- ಸ್ವಾಮಿನಾಥನ್ ಆಯೋಗ ಶಿಫಾರಸು ಜಾರಿ ಆಗಬೇಕು

- ರಾಜ್ಯದಲ್ಲಿ ಉತ್ಪಾದಿತ ಎಥೆನಾಲ್‌ ಖರೀದಿಸಬೇಕು

- ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಆಗಬೇಕು

- ಎಕರೆಗೆ ₹25 ಸಾವಿರದಂತೆ ಬರ ಪರಿಹಾರ ಕೊಡಬೇಕು

ಎಲ್ಲೆಲ್ಲಿ ಪ್ರತಿಭಟನೆ?

ಬೆಳಗಾವಿ, ಧಾರವಾಡ, ಕೊಪ್ಪಳ, ಮಂಡ್ಯ, ಹಾವೇರಿ, ಕಲಬುರಗಿ, ವಿಜಯಪುರ, ವಿಜಯನಗರ, ಬಾಗಲಕೋಟೆ, ಬೀದರ್‌, ಯಾದಗಿರಿ, ರಾಯಚೂರು, ಚಾಮರಾಜನಗರ

ಬಂದ್ ಆದ ಹೆದ್ದಾರಿಗಳು

- ಪುಣೆ- ಬೆಂಗಳೂರು

- ಹುಬ್ಬಳ್ಳಿ- ಸೊಲ್ಲಾಪುರ

- ವಿಜಯಪುರ- ಬೆಂಗಳೂರು

- ಕಲಬುರಗಿ- ಬೆಂಗಳೂರು

- ನಾಂದೇಡ್‌- ಚಿತ್ರದುರ್ಗ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾನು ನಿರಪರಾಧಿ, ಆದರೂ ನನ್ಮೇಲೆ ಅಪಪ್ರಚಾರ: ಸಿದ್ದು
ಅಮಿತ್‌ ಶಾಗೆ ಸ್ಟಿಂಗ್‌ ಬಗ್ಗೆ ಶೀಘ್ರವೇ ದೂರು - 14 ವರ್ಷದ ಬಾಲಕಿ ಬಗ್ಗೆ ಮಾಹಿತಿ: ಎಚ್‌ಡಿಕೆ