ಪಿಟಿಐ ಲಖನೌ
ಬಹುಜನ ಸಮಾಜಪಕ್ಷ (ಬಿಎಸ್‌ಪಿ)ದ ಪರಮೋಚ್ಚ ನಾಯಕಿ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ (67) ಅವರು ಸೋದರಳಿಯ 28 ವರ್ಷದ ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದಾರೆ. ಇದರಿಂದಾಗಿ, ಅವಿವಾಹಿತರಾಗಿರುವ ಮಾಯಾವತಿ ನಂತರ ಬಿಎಸ್ಪಿಯನ್ನು ಮುನ್ನಡೆಸುವವರು ಯಾರು ಎಂದು ಹಲವಾರು ವರ್ಷಗಳಿಂದ ಕೇಳಿಬರುತ್ತಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದಂತಾಗಿದೆ.ಲಖನೌದಲ್ಲಿ ಭಾನುವಾರ ನಡೆದ ಪಕ್ಷದ ಅಖಿಲ ಭಾರತ ಮಟ್ಟದ ಸಭೆಯಲ್ಲಿ ಮಾಯಾವತಿ ಅವರು ಆಕಾಶ್ ಆನಂದ್ ಅವರ ಹೆಸರನ್ನು ಘೋಷಿಸಿದರು ಎಂದು ಬಿಎಸ್ಪಿ ಶಹಜಹಾನ್‌ಪುರ ಜಿಲ್ಲಾಧ್ಯಕ್ಷ ಉದಯವೀರ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು. ಇತರೆ ಪದಾಧಿಕಾರಿಗಳು ಕೂಡ ಅದನ್ನು ಖಚಿತಪಡಿಸಿದರು. ಯಾರು ಈ ಆಕಾಶ್?:ಮಾಯಾವತಿ ಅವರ ಕಿರಿಯ ಸೋದರ ಆನಂದಕುಮಾರ್ ಅವರ ಪುತ್ರ. ದೆಹಲಿಯಲ್ಲಿ ಶಾಲಾ ಶಿಕ್ಷಣ ಮುಗಿಸಿ, ಲಂಡನ್‌ನಲ್ಲಿ ಎಂಬಿಎ ಪದವಿಯನ್ನು ಅವರು ಪಡೆದಿದ್ದಾರೆ. 2017ರಲ್ಲಿ ಅವರು ಭಾರತಕ್ಕೆ ಮರಳಿದರು. ಅದೇ ವರ್ಷ ಮೇ ತಿಂಗಳಿನಲ್ಲಿ ಮಾಯಾವತಿ ಜತೆ ಸಹರಾನ್‌ಪುರದಲ್ಲಿ ನಡೆದಿದ್ದ ಠಾಕೂರ್-ದಲಿತ ಸಂಘರ್ಷ ಸ್ಥಳಕ್ಕೆ ಭೇಟಿ ನೀಡಿದ್ದರು. 2017ರಲ್ಲಿ ಬಿಜೆಪಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಕೆಲವೇ ತಿಂಗಳು ಮೊದಲು ಪಕ್ಷದ ಕಾರ್ಯಕರ್ತರಿಗೆ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ಪರಿಚಯಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿದ್ದ ಆಕಾಶ್, ಟ್ವೀಟರ್‌ಗೆ ಮಾಯಾವತಿ ಪ್ರವೇಶ ಪಡೆಯಲು ಕಾರಣಕರ್ತರು. ಆ ಚುನಾವಣೆಯಲ್ಲಿ ಮಹಾಗಠಬಂಧನ ನಾಯಕರಾದ ಎಸ್‌ಪಿಯ ಅಖಿಲೇಶ್ ಯಾದವ್, ಆರ್‌ಎಲ್‌ಡಿಯ ಅಜಿತ್ ಸಿಂಗ್ ಜತೆ ವೇದಿಕೆ ಹಂಚಿಕೊಂಡಿದ್ದರು.ಇತ್ತೀಚೆಗೆ ನಡೆದ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಛತ್ತೀಸ್‌ಗಢದ ಮೇಲುಸ್ತುವಾರಿಯನ್ನೂ ಆಕಾಶ್ ಅವರಿಗೆ ಮಾಯಾವತಿ ಕೊಟ್ಟಿದ್ದರು. ಮಾಯಾ ಅವರ ರಾಜಕೀಯ ತಂತ್ರದ ಪ್ರಕಾರ ಪಾದಯಾತ್ರೆ, ಮೆರವಣಿಗೆ ಮಾಡುವಂತಿಲ್ಲ. ಆದರೆ ಆಕಾಶ್ ಅವರು ರಾಜಸ್ಥಾನದಲ್ಲಿ 14 ದಿನಗಳ ಪಾದಯಾತ್ರೆ ನಡೆಸಿ ಗಮನ ಸೆಳೆದಿದ್ದರು. ಆದಾಗ್ಯೂ 2018ರಲ್ಲಿ 6ರಷ್ಟಿದ್ದ ಶಾಸಕರ ಸಂಖ್ಯೆ ಈ ಬಾರಿ 2ಕ್ಕೆ ಕುಸಿದಿತ್ತು. ಆಕಾಶ್ ಸಕ್ರಿಯವಾಗಿ ಪ್ರಚಾರ ಮಾಡಿದ್ದರೂ ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಬಿಎಸ್ಪಿ ಶೂನ್ಯ ಸಂಪಾದಿಸಿತ್ತು.