ವರಿಷ್ಠರ ಭೇಟಿ ಆದೆ, ಎಲ್ಲ ಒಳ್ಳೇದೇ ಆಗುತ್ತೆ : ಬಿವೈವಿ

KannadaprabhaNewsNetwork |  
Published : Jul 13, 2025, 01:18 AM ISTUpdated : Jul 13, 2025, 05:50 AM IST
BJP Karnataka Chief Vijayendra Yediyurappa (Photo/ANI)

ಸಾರಾಂಶ

ದೆಹಲಿಯಲ್ಲಿ ಪಕ್ಷದ ಹೈಕಮಾಂಡ್‌ನ ನಾಯಕರನ್ನು ಭೇಟಿಯಾಗಿದ್ದೇನೆ. ಎಲ್ಲವೂ ಒಳ್ಳೆಯದಾಗಲಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  

 ಬೆಂಗಳೂರು :  ದೆಹಲಿಯಲ್ಲಿ ಪಕ್ಷದ ಹೈಕಮಾಂಡ್‌ನ ನಾಯಕರನ್ನು ಭೇಟಿಯಾಗಿದ್ದೇನೆ. ಎಲ್ಲವೂ ಒಳ್ಳೆಯದಾಗಲಿದೆ ಎಂದಷ್ಟೇ ಹೇಳಬಲ್ಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ದೆಹಲಿಯಿಂದ ಶನಿವಾರ ನಗರಕ್ಕೆ ವಾಪಸ್‌ ಆಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷ ನಾವು ವಿರೋಧ ಪಕ್ಷದಲ್ಲಿ ಆರಾಮವಾಗಿ ಇರುತ್ತೇವೆ. 2028ಕ್ಕೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆಯೇ ಹೊರತು ಇವರೊಂದಿಗೆ ಗುದ್ದಾಡುವ ಅವಶ್ಯತೆಯಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ನವೆಂಬರ್‌ ಕ್ರಾಂತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ನವೆಂಬರ್‌ನಲ್ಲಿ ಕ್ರಾಂತಿ, ಮಹಾಕ್ರಾಂತಿ ಏನೇನಾಗುವುದೋ ಕಾದು ನೋಡಿ. ಆಡಳಿತ ಪಕ್ಷದಲ್ಲಿ ಯುದ್ಧ ಪ್ರಾರಂಭವಾಗಿದೆ. ಯಾರನ್ನು ಯಾರು ಬಲಿ ತೆಗೆದುಕೊಳ್ಳುತ್ತಾರೋ ಕಾದು ನೋಡಿ. 2019ರಲ್ಲಿ ಆಗಿದ್ದು 2025ರಲ್ಲಿ ಆಗಬೇಕು ಅಂತೇನಿಲ್ಲ ಎಂದು ಹೇಳಿದರು.

ಈ ಸರ್ಕಾರ ಇದ್ದರೇನು? ಬಿದ್ದರೇನು?:

ನಾವು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಸರ್ಕಾರದ ವಿರುದ್ಧ ಜನ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರ ಇದ್ದರೆ ಏನು? ಬಿದ್ದರೆ ಏನು? ಮುಖ್ಯಮಂತ್ರಿ ಬದಲಾವಣೆಯಾದರೆ ಏನು? ಈ ಸರ್ಕಾರದಲ್ಲಿ ರಾಜ್ಯ ಅಭಿವೃದ್ಧಿ ಆಗುವುದಿಲ್ಲ. ಜನರ ಮೇಲೆ ಪರಿಣಾಮ ಬೀರಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಿಎಂ-ಹೈಕಮಾಂಡ್‌ ಸಂಬಂಧ ಹಳಸಿದೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲಿ ಇದ್ದರು. ರಾಹುಲ್‌ ಗಾಂಧಿ 10 ನಿಮಿಷ ಭೇಟಿಗೆ ಸಮಯ ಸಿಗದೆ ವಾಪಸ್‌ ಬಂದಿದ್ದಾರೆ. ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ ನಡುವೆ ಸಂಬಂಧ ಹಳಸಿದೆ ಎಂಬುದು ಇದರ ಅರ್ಥ. ರಾಜ್ಯ ಸರ್ಕಾರದ ಮೇಲೆ ಮೋಡ ಕವಿದ ವಾತಾವರಣ ಇದೆ. ಯಾವಾಗ ಗುಡುಗು, ಸಿಡಿಲಿನ ಮಳೆ ಆರಂಭವಾಗುವುದೋ ಗೊತ್ತಿಲ್ಲ. ಕಾದು ನೋಡಬೇಕು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಸಿಎಂ ಕುರ್ಚಿಗೆ ಪೈಪೋಟಿ:

ಕಾಂಗ್ರೆಸ್‌ ಪಕ್ಷ ಮತ್ತು ಸರ್ಕಾರದ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಸತ್ಯ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಸಿಎಂ ಕುರ್ಚಿಗೆ ಹಗ್ಗಜಗ್ಗಾಟದ ಪೈಪೋಟಿ ನಡೆಯುತ್ತಿದೆ. ಇದರಿಂದ ಜನರಿಗೆ ಒಳ್ಳೇಯದು ಆಗುವುದಿಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರಿಗೂ ರಾಹುಲ್ ಗಾಂಧಿ ಭೇಟಿಯಾಗಲು ಸಾಧ್ಯವಾಗದೆ ವಾಪಸ್‌ ಆಗಿರುವುದು ಹೊಸ ಬೆಳವಣಿಗೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

- ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಶೀಘ್ರ ಚುನಾವಣೆ ಸಾಧ್ಯತೆ

- ವಿಜಯೇಂದ್ರ ಮತ್ತೆ ಅಧ್ಯಕ್ಷ ಆಗುತ್ತಾರಾ ಎಂಬ ಕುತೂಹಲ

- ಹೊಸಬರಿಗೆ ಅಧ್ಯಕ್ಷ ಹುದ್ದೆ ನೀಡಿ: ಅತೃಪ್ತ ನಾಯಕರ ಪಟ್ಟು

- ಇದರ ಮಧ್ಯೆ ದಿಲ್ಲಿಗೆ ತೆರಳಿ ವರಿಷ್ಠರ ಭೇಟಿ ಆದ ಬಿವೈವಿ

- ಪುನಃ ಅಧ್ಯಕ್ಷರಾಗುವ ಆತ್ಮವಿಶ್ವಾಸ ಪ್ರದರ್ಶಿಸಿದ ರಾಜ್ಯಾಧ್ಯಕ್ಷ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ಬೆಂಗಳೂರು ಪಾಲಿಕೆ ತಡೆ