ಶಾಸಕ ನರೇಂದ್ರಸ್ವಾಮಿ ಒಬ್ಬ ಜನ ಮೆಚ್ಚುಗೆಯ ನಾಯಕ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Feb 19, 2024, 01:30 AM IST
18ಕೆಎಂಎನ್ ಡಿ18 | Kannada Prabha

ಸಾರಾಂಶ

ನೀವೆಲ್ಲರೂ ನರೇಂದ್ರಸ್ವಾಮಿ ಅವರನ್ನು ಮಂತ್ರಿ ಮಾಡಿ ಎನ್ನುತ್ತಿದ್ದೀರಿ. ಆದರೆ, ಸದ್ಯಕ್ಕೆ ಮಂತ್ರಿ ಸ್ಥಾನ ಖಾಲಿ ಇಲ್ಲ. ನಿಮ್ಮ ಒತ್ತಾಯ ಸಮಂಜಸವಾಗಿದ್ದರೂ ಅದಕ್ಕೆ ಸೂಕ್ತ ಸಮಯ ಇದಲ್ಲ. ಮುಂದೆ ಸಂಪುಟ ಪುನಾರಚನೆ ಮಾಡುವ ಸಮಯದಲ್ಲಿ ನರೇಂದ್ರಸ್ವಾಮಿ ಅವರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ನರೇಂದ್ರಸ್ವಾಮಿ ಒಬ್ಬ ಜನಮೆಚ್ಚುಗೆಯ ನಾಯಕ. ಆತ ಎಲ್ಲಾ ಮಂತ್ರಿಗಳೊಂದಿಗೆ ಉತ್ತಮ ಒಡನಾಟ, ಸಂಬಂಧ ಹೊಂದಿದ್ದಾರೆ. ಅದನ್ನು ಬಳಸಿಕೊಂಡು ಕ್ಷೇತ್ರಕ್ಕೆ ಅಭಿವೃದ್ಧಿ ಕಾಮಗಾರಿಗಳ ಮಂಜೂರು ಮಾಡಿಸುತ್ತಿದ್ದಾರೆ. ನೀವೆಲ್ಲರೂ ನರೇಂದ್ರಸ್ವಾಮಿ ಅವರನ್ನು ಮಂತ್ರಿ ಮಾಡಿ ಎನ್ನುತ್ತಿದ್ದೀರಿ. ಆದರೆ, ಸದ್ಯಕ್ಕೆ ಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಯವಾಗಿಯೇ ಕಾಲೆಳೆದರು.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಿಮ್ಮ ಒತ್ತಾಯ ಸಮಂಜಸವಾಗಿದ್ದರೂ ಅದಕ್ಕೆ ಸೂಕ್ತ ಸಮಯ ಇದಲ್ಲ. ಮುಂದೆ ಸಂಪುಟ ಪುನಾರಚನೆ ಮಾಡುವ ಸಮಯದಲ್ಲಿ ನರೇಂದ್ರಸ್ವಾಮಿ ಅವರಿಗೆ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಮಳವಳ್ಳಿ ಕ್ಷೇತ್ರದ ಜನರು ನಮ್ಮ ಅಭ್ಯರ್ಥಿಯನ್ನು ಆಶೀರ್ವಾದ ಮಾಡುತ್ತಿದ್ದೀರಿ. ಅದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಳವಳ್ಳಿ ಕ್ಷೇತ್ರ ನನ್ನ ಮತ ಕ್ಷೇತ್ರವಿದ್ದಂತೆ ಎಂದು ಭಾವಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ನಾವು ಅನೇಕ ಭರವಸೆ ಕೊಟ್ಟಿದ್ದೆವು.

ಅದಕ್ಕೆ ಅನುಗುಣವಾಗಿ 470 ಕೋಟಿ ರು. ವೆಚ್ಚದ ಯೋಜನೆ ಮಂಜೂರು ಮಾಡಿಸಿದ್ದೇನೆ. ಅಷ್ಟು ಸಾಲದೆಂಬಂತೆ ಇನ್ನೂ ಅನೇಕ ಯೋಜನೆಗಳನ್ನೊಳಗೊಂಡ ಮನವಿಯನ್ನು ಶಾಸಕರು ಕೊಟ್ಟಿದ್ದಾರೆ. ಆ ಮನವಿಯನ್ನೂ ಸ್ವೀಕರಿಸಿ, ಅನುಷ್ಠಾನಕ್ಕೆ ತರುವುದಾಗಿ ಹೇಳಿದರು.

ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ನುಡಿದಂತೆ ನಡೆದಿದ್ದೇವೆ. ಬಿಜೆಪಿ, ಜೆಡಿಎಸ್ ರೀತಿ ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳುವವರಲ್ಲ. ನಾವು ಕೊಟ್ಟ ಮಾತನ್ನ ನೂರಕ್ಕೆ ನೂರು ಅನುಷ್ಠಾನಕ್ಕೆ ತರುತ್ತೇವೆ. ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಗೆಎ ನಾನೇ ಚಾಲನೆ ಕೊಟ್ಟಿದ್ದೆ. ಈಗ ನೀವೇ ಅದನ್ನು ಉದ್ಘಾಟಿಸಬೇಕು ಎನ್ನುತ್ತಿದ್ದಾರೆ. ಅದನ್ನ ನಾನೇ ಬಂದು ಉದ್ಘಾಟನೆ ಮಾಡುತ್ತೇನೆ ಎಂದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ