ಸಚಿವರ ಧೋರಣೆ ಬಗ್ಗೆ ಮತ್ತೆ ಶಾಸಕರು ಗರಂ : ಶಾಸಕಾಂಗ ಪಕ್ಷದ ಸಭೆಯಲ್ಲೂ ಮುಖ್ಯಮಂತ್ರಿಯವರ ಮುಂದೆ ಅಸಮಾಧಾನ

ಸಾರಾಂಶ

ಶಾಸಕರ ಬಗ್ಗೆ ಸಚಿವರು ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ನಮ್ಮ ಮನವಿ, ಅಹವಾಲುಗಳನ್ನು ಸಚಿವರು ಪರಿಗಣಿಸುತ್ತಿಲ್ಲ ಎಂದು ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ವಿವಿಧ ಶಾಸಕರು ಮುಖ್ಯಮಂತ್ರಿಯವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಬೆಂಗಳೂರು : ಶಾಸಕರ ಬಗ್ಗೆ ಸಚಿವರು ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ನಮ್ಮ ಮನವಿ, ಅಹವಾಲುಗಳನ್ನು ಸಚಿವರು ಪರಿಗಣಿಸುತ್ತಿಲ್ಲ ಎಂದು ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ವಿವಿಧ ಶಾಸಕರು ಮುಖ್ಯಮಂತ್ರಿಯವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದ್ದರೂ ಕೆಲವು ಸಚಿವರು ತಮ್ಮ ಕಚೇರಿಗೆ ಬಂದ ಶಾಸಕರನ್ನು ಗುರುತಿಸುವ ಕೆಲಸವನ್ನೂ ಮಾಡುತ್ತಿಲ್ಲ. ನಮ್ಮ ಮನವಿ, ಅಹವಾಲುಗಳಿಗೆ ಆಯಿತು, ನೋಡೋಣ, ಮಾಡೋಣ ಎನ್ನುವ ಹಾರಿಕೆ ಉತ್ತರ ನೀಡಿ ಕಳುಹಿಸುತ್ತಾರೆ. ಮತ್ತೆ ನಾವು ಆ ಬಗ್ಗೆ ಕೇಳಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ದೂರಿದರು ಎಂದು ತಿಳಿದು ಬಂದಿದೆ.

ಲೋಕೋಪಯೋಗಿ ಇಲಾಖೆ ಸೇರಿದಂತೆ ಇನ್ನು ಕೆಲವು ಇಲಾಖೆಗಳ ಸಚಿವರಂತೂ ಪ್ರತಿಪಕ್ಷದವರಿಗೆ ನೀಡುವಷ್ಟು ಮಾನ್ಯತೆಯನ್ನೂ ಸ್ವಪಕ್ಷೀಯ ಶಾಸಕರಿಗೆ ನೀಡುತ್ತಿಲ್ಲ ಎಂದು ದೂರಿದ್ದಾರೆ.

ವರ್ಗಾವಣೆಗೆ ಕೌನ್ಸೆಲಿಂಗ್‌ ಪದ್ಧತಿ ಬೇಡ:

ಕಂದಾಯ ಇಲಾಖೆಯ ಪಿಡಿಒ ಮತ್ತು ಉಪನೋಂದಣಾಧಿಕಾರಿಗಳ ವರ್ಗಾವಣೆಯ ಕೌನ್ಸೆಲಿಂಗ್‌ ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಗಾಗಿ, ಕೌನ್ಸೆಲಿಂಗ್‌ ಬದಲು ಈ ಹಿಂದೆ ಇದ್ದಂತೆ ಶಾಸಕರ ಶಿಫಾರಸ್ಸು ಆಧಾರದಲ್ಲಿ ನಡೆಸುವ ಪದ್ಧತಿ ಮರು ಜಾರಿ ಮಾಡಬೇಕೆಂದು ಸಭೆಯಲ್ಲಿ ಶಾಸಕರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

Share this article