ವಿಧಾನಸಭೆ ಟ್ರೋಲ್‌ ಜೋಡಿ ದೂರ.. ದೂರ..! ದೇವರ ತಪ್ಪು ಅಧಿವೇಶನದಲ್ಲಿ ಮಂಡನೆ! ಬೀಡಿ ಮೇಲೋ, ಸಿಗರೆಟ್‌ ಮೇಲೋ!?

ಸಾರಾಂಶ

ದೇವರ ತಪ್ಪು ಅಧಿವೇಶನದಲ್ಲಿ ಮಂಡನೆ!

-ದೇವಾನುದೇವತೆಗಳ ತಪ್ಪು ಕಂಡುಹಿಡಿದ ಸಾಮ್ರಾಟ್‌ । ಟ್ರೋಲ್‌ ಜೋಡಿ ಅಧಿವೇಶನದಲ್ಲಿ ದೂರ ದೂರವಾದ ಕತೆ

 ದೇವರ ತಪ್ಪು ಅಧಿವೇಶನದಲ್ಲಿ ಮಂಡನೆ!

-ದೇವಾನುದೇವತೆಗಳ ತಪ್ಪು ಕಂಡುಹಿಡಿದ ಸಾಮ್ರಾಟ್‌ । ಟ್ರೋಲ್‌ ಜೋಡಿ ಅಧಿವೇಶನದಲ್ಲಿ ದೂರ ದೂರವಾದ ಕತೆ

ವಿಷ್ಯಾ ಏನಂದ್ರೆ... ಸಾಮ್ರಾಟರು ಕೆಪಿಎಸ್ಸಿ ಅಕ್ರಮ, ಪರೀಕ್ಷಾ ಅಧ್ವಾನಗಳ ಬಗ್ಗೆ ಕಲಾಪದಲ್ಲಿ ರೋಷಾವೇಷದಿಂದ ಮಾತನಾಡುತ್ತಾ ಸರ್ಕಾರವನ್ನು ತರಾಟೆ ಮೇಲೆ ತರಾಟೆಗೆ ತೆಗೆದುಕೊಂಡರು. ಹೀಗೆ ಈ ಭರದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ. ಆ ದೇವರು ತಪ್ಪು ಮಾಡುತ್ತಾನೆ. ಆದರೆ, ಜನರ ವಿಚಾರವಾಗಿ ಯಾರೂ ತಪ್ಪು ಮಾಡಬಾರದು ಎಂದು ಫರ್ಮಾನು ಹೊರಡಿಸಿಬಿಟ್ಟರು.

ದೇವರ ತಪ್ಪು ಕಲಾಪದಲ್ಲಿ ಪತ್ತೆ

ಪ್ರತಿಪಕ್ಷ ನಾಯಕ ಅಶೋಕ್ ಇದ್ದಾರಲ್ವ, ಅವರು ಸಾಮಾನ್ಯರಂತು ಅಲ್ಲ. ಹಾಗಂತ ಸರ್ಕಾರದ ತಪ್ಪುಗಳನ್ನು ಎಳೆದೆಳೆದು ಜನರ ಮುಂದೆ ಎಸೆದು ಸೂಪರ್ ಮ್ಯಾನ್ ಆಗಿದ್ದಾರೆ ಅಂತಲ್ಲ. ಆದರೆ, ಅವರಿಗೆ ಕೆಲವೊಂದು ವಿಶೇಷ ಶಕ್ತಿ ಪ್ರಾಪ್ತವಾಗಿದೆ. ಅಂತಹದೊಂದು ಶಕ್ತಿ ಈ ಬಾರಿ ಕಲಾಪದಲ್ಲಿ ಪ್ರದರ್ಶನವಾಯ್ತು.

ಅದೇನು ಅಂದ್ರೆ- ಸಾಮ್ರಾಟ್ ಅಶೋಕ್ ಖಾವಂದರು ದೇವರ ತಪ್ಪು ಪತ್ತೆ ಮಾಡಿಬಿಟ್ಟರು...

ವಿಷ್ಯಾ ಏನಂದ್ರೆ, ಸಾಮ್ರಾಟರು ಕೆಪಿಎಸ್ಸಿ ಅಕ್ರಮ, ಪರೀಕ್ಷಾ ಅಧ್ವಾನಗಳ ಬಗ್ಗೆ ಕಲಾಪದಲ್ಲಿ ರೋಷಾವೇಷದಿಂದ ಮಾತನಾಡುತ್ತಾ ಸರ್ಕಾರವನ್ನು ತರಾಟೆ ಮೇಲೆ ತರಾಟೆ ತೆಗೆದುಕೊಂಡರು. ಈ ಭರದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ. ಆ ದೇವರು ತಪ್ಪು ಮಾಡುತ್ತಾನೆ. ಆದರೆ, ಜನರ ವಿಚಾರವಾಗಿ ಯಾರೂ ತಪ್ಪು ಮಾಡಬಾರದು ಎಂದು ಫರ್ಮಾನು ಹೊರಡಿಸಿಬಿಟ್ಟರು.

ಇದನ್ನೇ ಕಾಯುತ್ತಿದ್ದವರಂತಿದ್ದ ಸಚಿವ ದಿನೇಶ್ ಗುಂಡೂರಾವ್ ಅವರು, ದೇವರು ತಪ್ಪು ಮಾಡುತ್ತಾನೆ ಅಂತ ಅಂದ್ರಲ್ಲ, ಅದು ಏನು ಅಂತ ಖಾವಂದರು ವಿವರಿಸುವಂತವರಾಗಬೇಕು ಎಂದು ಭಿನ್ನವಿಸಿದರು.

ಈ ಪ್ರಶ್ನೆಗೆ ಸಾಮ್ರಾಟರ ಬಾಯಲ್ಲಿ ಕಡುಬು ಸಿಕ್ಕಿಕೊಂಡಂತಾಯ್ತು. ಆದರೂ ನಗುತ್ತಾ, ಭಕ್ತರು ಕೇಳುವ ವರವನ್ನು ನೀಡದೆ ದೇವರು ತಪ್ಪು ಮಾಡುತ್ತಾನೆ ಅನ್ನೋ ಭಾವದಲ್ಲಿ ಹೇಳಿದ್ದು ಬೇರೆ ಅರ್ಥದಲ್ಲಿ ಅಲ್ಲಪ್ಪ ಎಂದು ತಲೆ ಕೆರೆದರೆ, ಸದನ ಮುಸಿ ಮುಸಿ ನಕ್ತು.

ವಿಧಾನಸಭೆ ಟ್ರೋಲ್‌ ಜೋಡಿ ದೂರ.. ದೂರ..!

ಇದು ವಿಧಾನಸಭೆಯ ಟ್ರೋಲ್‌ ಜೋಡಿ ಎನಿಸಿದ ಫಸ್ಟ್‌ ಟೈಂ ಶಾಸಕರಾದ ಪ್ರದೀಪ್‌ ಈಶ್ವರ್‌ ಹಾಗೂ ನಯನಾ ಮೋಟಮ್ಮ ಅವರ ಪ್ರಹಸನ.

ಮೊದಲಿಗೆ ಸ್ವಲ್ಪ ಫ್ಲಾಶ್ ಬ್ಯಾಕ್ ರೀಲ್ಸ್...

ಸಂದರ್ಭ-ಬೆಳಗಾವಿ ವಿಧಾನಮಂಡಲ ಅಧಿವೇಶನ. ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಯತ್ನಕ್ಕೆ ಪ್ರತಿಪಕ್ಷ ಬಿಜೆಪಿಯವರು ಪ್ರತಿಭಟನೆ ನಡೆದಿದ್ದ ದಿನ. ಅಂದು ಪ್ರದೀಪ್‌ ಈಶ್ವರ್‌ ರೋಷಾವೇಷದಲ್ಲಿ ‘ಒಂದು ಸಾವಿಗೆ ಇಷ್ಟೆಲ್ಲ ಮಾತಾಡ್ತಿದ್ದಾರಲ್ಲ. ಕೋವಿಡ್‌ ಸಮಯದಲ್ಲಿ ಸಾವಿರಾರು ಜನ ಸತ್ತರು. ಅವರಿಗೆಲ್ಲ ಜಸ್ಟೀಸ್‌ ಕೊಡಿ ಎಂದು ಕೇಳೋಕೆ ಆಗಲ್ವಾ ಇವರಿಗೆ’ ಎಂದು ಅಬ್ಬರಿಸಿ ಬೊಬ್ಬಿರಿದರು,

ಈ ಅಬ್ಬರದಿಂದ ಇಂಪ್ರೆಸ್ ಆದವರು ಪಕ್ಕದಲ್ಲೇ ಕುಳಿತಿದ್ದ ನಯನಾ ಮೋಟಮ್ಮ. ಪ್ರದೀಪ್‌ ಅವರ ವೀರಾವೇಷ ಕಂಡು ಆನಂದತುಂದಿಲರಾದ ನಯನಾ ಜೋರಾಗಿ ಮೇಜು ತಟ್ಟಿ ಹರ್ಷ ಪ್ರಕಟಿಸಿದರು.

ಈ ಪ್ರಹಸನಕ್ಕೆ ತುಸು ರೇಜಿಗೆ ಹುಟ್ಟಿಸಿಕೊಂಡ ಸ್ಪೀಕರ್ ಯು.ಟಿ.ಖಾದರ್‌, ‘ಹೇಯ್‌ ಸಾವು ಆಗ್ಲಿಲ್ಲ ಮಾರಾಯ್ರೆ ಪ್ರದೀಪ್‌. ಸಾಯದವರನ್ನು ಯಾಕೆ ಸಾಯಿಸ್ತೀರಿ’ ಎಂದಾಗ ಆನಂದತುಂದಿಲ ಮೂಡ್‌ನಲ್ಲಿದ್ದ ನಯನಾ ತಲೆ ಮೇಲೆ ಕೈಹೊತ್ತುಕೊಂಡ ದೃಶ್ಯ.

ಬ್ಯಾಕ್ ಗ್ರೌಂಡ್‌ನಲ್ಲಿ ಮ್ಯೂಸಿಕ್- ಮೋಯೆ, ಮೋಯೆ....ಮೋಯೆ, ಮೋಯೆ.

ಇಂತಹದೊಂದು ರೀಲ್ ವೈರಲ್ ಆಗಿದ್ದು ನಮ್ಮ ಓದುಗರ ಗಮನಕ್ಕೆ ಬಂದಿರಲಿಕ್ಕೂ ಸಾಕು.

ಇದೊಂದೇ ಅಲ್ಲ, ಕಲಾಪದ ವಾದ-ವಿವಾದಲ್ಲಿ ವ್ಯಸ್ತರಾಗಿ ಸದಾ ಬೊಬ್ಬಿರಿವ ಪ್ರದೀಪ್‌ ಈಶ್ವರ್‌ ಉದ್ದೇಶಿಸಿ ಸ್ಪೀಕರ್ ಖಾದರ್ ಸಾಹೇಬರು ‘ಕೈಯಲ್ಲಿ ಕಬ್ಬಿಣ ಏನಾದ್ರೂ ಕೊಡಿ ಕುತ್ಕೊಳ್ಳಲಿ’ ಎಂದಿದ್ದು, ಪ್ರದೀಪ್ ಆರ್ಭಟಗಳಿಗೆ ತಮ್ಮ ಆಂಗಿಕ ಭಾವಗಳಿಂದ ಮಾತ್ರವಲ್ಲದೆ ವಾಗ್ಝರಿಯ ಮೂಲಕವೂ ಸಾಥ್‌ ನೀಡುವ ನಯನಾ ಮೋಟಮ್ಮ ಅವರಿಗೆ ನಿಮ್ಮ ಉಪದ್ರ ಜಾಸ್ತಿ ಆಯ್ತು ಎನ್ನುತ್ತಾ ತಣ್ಣೀರೆರಚಿದ್ದು...

ಇಂತಹ ಹಲವು ರೀಲ್, ಟ್ರೋಲ್‌ಗಳು ಕನ್ನಡದ ಮಹಾಜನತೆಯನ್ನು ರಂಜಿಸಿದ್ದಕ್ಕೆ ಈ ನಾಡು ಸಾಕ್ಷಿಯಾಗಿದ್ದಿದೆ.

ಈಗ ಫ್ಲಾಶ್ ಬ್ಯಾಕ್ ಸಾಕು, ಪ್ರಸೆಂಟ್‌ಗೆ ಬರುವಾ...

ವಿಧಾನಮಂಡಲದ ಜಂಟಿ ಅಧಿವೇಶನದ ಮೊದಲ ದಿನ. ಈ ಟ್ರೋಲ್ ಜೋಡಿ ಸದನಕ್ಕೆ ಬಂದರೆ ಅವರು ಕೂರುವ ಆಸನಗಳು ಬದಲಾಗಿವೆ. ಜೋಡಿ ಕೂರುತ್ತಿದ್ದವರನ್ನು ನೀನೊಂದು ತೀರ ನಾ ನೊಂದು ತೀರ ಮಾಡಿಬಿಟ್ಟಿದ್ದಾರೆ ಸ್ಪೀಕರ್ ಸಾಹೇಬರು.

ಇದನ್ನು ಕಂಡು ಬೇಸರಗೊಂಡ ನಯನಾ ಮೋಟಮ್ಮ ಮೊಗಸಾಲೆಯಲ್ಲಿ ಪ್ರದೀಪ್‌ ಈಶ್ವರ್‌ ಬಳಿ ಬಂದು ‘ಏನ್ರೀ ಪ್ರದೀಪ್‌ ನಮ್ಮಿಬ್ಬರನ್ನು ಬೇರೆ ಬೇರೆ ಕೂರಿಸಿಬಿಟ್ಟಿದ್ದಾರೆ’ ಎಂದು ತುಂಬ ಬೇಸರದಿಂದ ನುಡಿದರೆ, ಸುತ್ತಮುತ್ತ ಇದ್ದವರೆಲ್ಲ ನೀವು ಇನ್ನು ಆ ಪರಿ ಟ್ರೋಲ್‌ ಆಗುತ್ತಿದ್ದರೆ ಸ್ಪೀಕರ್‌ ತಾನೇ ಏನು ಮಾಡ್ತಾರೆ ಅಂದುಬಿಡೋದಾ?!

ಇದು ಟ್ರೋಲ್ ಜೋಡಿಗೆ ಒಳ್ಳೆ ಕಾಲವಲ್ಲ, ಬಿಡಿ. ಛೇ...

ಕವಿಯಾದ ಶರವಣ

ಕಲಾಪದಲ್ಲಿ ಶರಪರಂಪ ಮಾಡುವ ಜೆಡಿಎಸ್ ನಾಯಕ ಶರವಣ ಅವರು ಫಾರ್ ಎ ಚೇಂಜ್ ಕವಿಯಾದ ಪ್ರಸಂಗ ವಿಧಾನಪರಿಷತ್ತಿನಲ್ಲಿ ಈ ಬಾರಿ ನಡೆಯಿತು.

ದೈಹಿಕ ಶಿಕ್ಷಕರ ಕೊರತೆ ಬಗ್ಗೆ ಚರ್ಚೆ ನಡೆದಿತ್ತು. ಯೋಗದ ಮಹತ್ವ ವಿವರಿಸುತ್ತಾ ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಗೂ ಬಿಪಿ, ಶುಗರ್‌ ಬರುತ್ತಿದೆ. ಇದಕ್ಕೆ ಮುದ್ದಾದ ಮಕ್ಕಳಿಗೂ ಸ್ಕೂಲ್‌ನಲ್ಲೇ ಯೋಗ ಮಾಡಿಸಬೇಕು ಎಂದರು ಶರವಣ.

ಅಷ್ಟಕ್ಕೆ ಸುಮ್ಮನಾಗದೆ ಬಿಪಿ, ಶುಗರ್‌ ಅರಿಶಿಣ ಕುಂಕುಮ ಇದ್ದಂಗೆ. ಅದು ಬಂತು ಅಂದರೆ ಸ್ವೀಕಾರ ಮಾಡಲೇಬೇಕು ಎಂದು ತಮ್ಮ ವಾಕ್ಚಾತುರ್ಯ ತೋರಿದರು. ಆಗ ಮಧ್ಯಪ್ರವೇಶ ಮಾಡಿದ ಸಭಾಪತಿ ‘ಏ..ಶರವಣ, ಬಿಪಿ, ಶುಗರ್‌ ಇದೆಯೇನೋ ನಿನಗೆ’ ಎಂದು ಮರ್ಮಕ್ಕೆ ತಾಕುವ ಪ್ರಶ್ನೆ ಕೇಳಿದರು.

ಸದನದಲ್ಲಿ ಶರವಣ ಪಕ್ಕ ಕೂರುವ ಭೋಜೇಗೌಡರು, ‘ಒಂದೊಂದು ಸಲ ಕೂಗಾಡುವುದನ್ನು ನೋಡಿದ್ರೆ ಗೊತ್ತಾಗಲ್ವೇ’ ಎಂದು ಕಿಚಾಯಿಸಿದರು.

ಭೋಜೇಗೌಡರ ಪಕ್ಕ ಕುಳಿತರೆ ಎಲ್ಲಾ ಬಂದು ಬಿಡುತ್ತೇ ಎಂದು ಮಾರುತ್ತರಿಸಿ ಶರವಣ ‘ಯೋಗದಿಂದ ಸರ್ವರೋಗ ನಿವಾರಣೆ. ಆರೋಗ್ಯಕ್ಕಾಗಿ ಯೋಗ ಕ್ಲಾಸು ಮುಖ್ಯ’ ಎನ್ನುವಾಗಲೇ ಮತ್ತೆ ಹೊರಟ್ಟಿ ‘ನಿನಗೂ ಇದೆಯಾ ಬಿಪಿ, ಶುಗರ್‌’ ಎಂದು ಮರು ಪ್ರಶ್ನಿಸಿದರು.

ಒಂದೇ ಪ್ರಶ್ನೆ ಎರಡು ಬಾರಿ ಮುಖಾಮುಖಿಯಾದ ಪರಿಣಾಮ ಶರವಣ ಅವರೊಳಗಿನ ಕವಿ ಎದ್ದೇ ಬಿಟ್ಟ...

ಎದ್ದವನೇ ಹೌದು..

20ರಲ್ಲಿ ಫಿಗರ್‌ ಆಗಿದ್ವಿ, 30ರಲ್ಲಿ ಶುಗರ್‌ ಆದ್ವೀ.

40ರಲ್ಲಿ ಪ್ರೆಶರ್‌, 50ರಲ್ಲಿ ಕ್ಯಾನ್ಸರ್‌, 60ರಲ್ಲಿ ಢಮಾರುಉಉಉ...

ಇನ್ನು 70, 80, 90ರಲ್ಲೂ ನಿಮ್ಮಂತೆ ಆರೋಗ್ಯವಾಗಿದ್ದರೆ...

ಅವರೇ ಸೂಪರ್ರೂ...

ಎಂದಾಗ ಸದನ ಮೆಚ್ಚಿ ಅಹುದಹುದೆಂದಿತು.

ಬೀಡಿ ಮೇಲೋ, ಸಿಗರೆಟ್‌ ಮೇಲೋ!?

ಕಡಲೂರು ಮಂಗಳೂರು ಹಾಗೂ ಮಲ್ಪೆಯ ಮೀನು ಮಾರುಕಟ್ಟೆಯಲ್ಲಿ ಇದೀಗ ಭಾರಿ ಡಿಬೇಟ್ ಆರಂಭಗೊಂಡಿದೆ.

ಅದಕ್ಕೆ ವಿಷಯ ಒದಗಿಸಿದವರು ಬೀಡಿ ವರ್ಕರ್ಸ್‌ ಯೂನಿಯನ್‌ ಅಧ್ಯಕ್ಷ ಮೊಹಮ್ಮದ್‌ ರಫಿ. ಮೊನ್ನೆ ರಫಿ ಸಾಹೇಬರು ಒಂದು ಪ್ರೆಸ್ ಮೀಟ್ ಮಾಡಿದರು. ಅಲ್ಲಿ ಸಾಹೇಬರು-

ಒಂದು ‘ಸ್ಫೋಟಕ’ ಹೇಳಿಕೆ ನೀಡಿದರು. ಅದು-ಬೀಡಿ ಕ್ಯಾನ್ಸರ್‌ಕಾರಕ ಅಲ್ಲ. ಕಂಪಾರಿಟಿಲಿ ಬೀಡಿ ಎಂಬುದು ಸಿಗರೆಟ್‌ ಗಿಂತ ಒಳ್ಳೆಯದು. ಸೋ ಸೇದುವ ಬಯಕೆಯಿದ್ದವರು ಸಿಗರೆಟ್ ಬಿಸಾಕಿ ಬೀಡಿ ಸೇದಾಕಿ ಎಂದರು.

ಈ ತಮ್ಮ ಹೇಳಿಕೆಗೆ ಪೂರಕವಾಗಿ ಸಾಹೇಬರು ಬೀಡಿಯಿಂದ ಕ್ಯಾನ್ಸರ್‌ ಬರುತ್ತದೆ ಎಂಬುದಕ್ಕೆ ವೈಜ್ಞಾನಿಕ ದಾಖಲೆ ಇಲ್ಲ. ಸೋ, ಬೀಡಿಯ ಮೇಲೆ ಇರುವ ಶೇ.28 ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಬೇಕು. ಸಿಗರೆಟ್ ಮೇಲೆ ಬೇಕಾದಷ್ಟು ತೆರಿಗೆ ಹಾಕಬೇಕು ಎಂದರು.

ಇದನ್ನು ಕೇಳಿ ಕನಲಿದ ವರದಿಗಾರರೊಬ್ಬರು ಇಷ್ಚು ಹೇಳ್ತಿರಲ್ಲ, ನೀವು ಸೇದೋದು ಬೀಡಿನೋ ಸಿಗರೆಟೋ ಎಂದು ಏನೋ ಕೇಳುವುದರಲ್ಲಿದ್ದರು, ಅಷ್ಚರೊಳಗೆ ಮಹಮ್ಮದ್‌ ರಫಿ, ತಮ್ಮ ಪ್ಯಾಂಟ್‌ ಕಿಸೆಯಿಂದ ಬೀಡಿಯ ಕಟ್ಟೊಂದನ್ನು ಹೊರತೆಗೆದು ‘ಬೀಡಿ ಕಾರ್ಮಿಕರ ಸಂಘಟನೆ ಅಧ್ಯಕ್ಷನಾಗಿ ನಾನೇ ದಶಕಗಳಿಂದ ಬೀಡಿ ಸೇದುತ್ತಿದ್ದೇನೆ. ನನಗೀಗ 70ಕ್ಕೂ ಹೆಚ್ಚು ವರ್ಷ ಇಷ್ಟೂ ವರ್ಷಗಳಿಂದ ಬೀಡಿ ಸೇದುತ್ತಿದ್ದರೂ ಈವರೆಗೂ ಯಾವ ಆರೋಗ್ಯ ಸಮಸ್ಯೆಯೂ ಬಂದಿಲ್ಲ’ ಎಂದು ಘಂಟಾಘೋಷ ಮಾಡಿದರು.

ಈ ಡಿಬೇಟ್ ಬೆಂಕಿ ಹತ್ತಿಕೊಂಡು ಜಿಲ್ಲಾದ್ಯಂತ ಹೊಗೆ ವ್ಯಾಪಿಸಿಕೊಂಡಿದೆ. ಆದರೆ, ಈ ಹೊಗೆ ಸಿಗರೆಟ್ ನದ್ದೋ ಅಥವಾ ಬೀಡಿಯದ್ದೋ ಎಂಬುದು ಇನ್ನೂ ಬಗೆಹರಿದಿಲ್ಲ.

ದೊಡ್ಡ ರಾಜಕಾರಣಿಯ ಪುಟ್ಟ ಹೆಂಡ್ತಿ ಬಂದ್ರು ದಾರಿ ಬಿಡಿ...

ಹಂಪಿ ಉತ್ಸವದಲ್ಲಿ ಲಕ್ಷಾಂತರ ಜನ ಸೇರಿದ್ದರು. ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರೂ ಉತ್ಸವಕ್ಕೆ ಆಗಮಿಸಿದ್ದರು. ವಿಜಯನಗರ ಜಿಲ್ಲಾ ಪೊಲೀಸರಿಗೆ ಟೇನ್ಷನ್ನೋ, ಟೇನ್ಷನ್‌...

ಅತ್ತ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ವೇದಿಕೆ ಮುಂಭಾಗದ ಆಸನಗಳತ್ತ ತೆರಳಲು ವಿವಿಐಪಿ ಪಾಸ್‌ ಹಿಡಿದುಕೊಂಡು ರಾಜಕಾರಣಿಗಳ ಕುಟುಂಬದವರು, ಅಧಿಕಾರಿಗಳ ಕುಟುಂಬ ಸದಸ್ಯರು ಆಗಮಿಸಿದ್ದರು.

ಆದರೆ, ವಿವಿಐಪಿ ವಿಂಗ್‌ನಲ್ಲಿ ಕುರ್ಚಿಗಳು ಖಾಲಿ ಇಲ್ಲ. ಸೋ, ವಿವಿಐಪಿ ಪಾಸ್ ಇದ್ದವರನ್ನೆಲ್ಲ ಅಲ್ಲಿಗೆ ಬಿಟ್ಟರೆ ಒಬ್ಬರ ಮೇಲೆ ಒಬ್ಬರು ಕೂರಬೇಕಾಗುತ್ತಿತ್ತು. ಸೋ, ಪೊಲೀಸರು ಪಾಸ್ ಇದ್ದವರಿಗೂ ತಡೆಹಾಕಿದರು.

ಆಗ ಅಲ್ಲಿಗೆ ಬಂದವರು ದೊಡ್ಡ ರಾಜಕಾರಣಿಯೊಬ್ಬರ ಪುಟ್ಟ ಹೆಂಡತಿ.

‘ನಾನೂ ಪ್ರಮುಖ ರಾಜಕಾರಣಿ ಅವರ ಹೆಂಡ್ತಿ, ಒಳಗೆ ಬಿಡಿ. ನನ್ನ ಬಳಿ ವಿವಿಐಪಿ ಪಾಸ್‌ ಇದೆ ಒಳಗೆ ಬಿಡ್ರಿ’ ಎಂದರು. ಆದರೆ ಪೊಲೀಸರು ಜಗ್ಗಲಿಲ್ಲ. ಪುಟ್ಟೆಂಡ್ತಿ ಗೋಗರೆದರು. ಇದಕ್ಕೆ ಪೊಲೀಸಪ್ಪ ‘ನಾನವರ ಹೆಂಡ್ತಿ, ಇವರ ಹೆಂಡ್ತಿ ಅಂತ ಬಂದೋರಿಗೆಲ್ಲ ಬಿಡಕ್ಕೆ ಆಗಲ್ಲಮ್ಮ’ ಎಂದರು. ಸಿಟ್ಟಾದ ಪುಟ್ಟೆಂಡ್ತಿ ತಮ್ಮ ಮೊಬೈಲ್ ತೆಗೆದು ತಾವು ಪತಿದೇವರೊಂದಿಗೆ ಇದ್ದ ಫೋಟೋ ತೋರಿಸಿ ನಾನೇ ಅವರ ಹೆಂಡ್ತಿ ಕಣ್ ರೀ.. ಎಂದು ಅಬ್ಬರಿಸಿ ‘ನಿಮಗ್‌ ಮ್ಯಾರೇಜ್‌ ಸರ್ಟಿಫಿಕೇಟ್‌ ಕೊಡಬೇಕಾ?’ ಎಂದು ಪೊಲೀಸರಿಗೆ ಜೋರು ಮಾಡಿದರು.

ಆಗ ಪೊಲೀಸಪ್ಪನ ಬಳಿ   ಬೇರೆ ದಾರಿಯಿರಲಿಲ್ಲ.

ಗಿರೀಶ್ ಗರಗ

ಶ್ರೀಕಾಂತ ಗೌಡಸಂದ್ರ

ಸಂಪತ್ ತರೀಕೆರೆ

ಸಂದೀಪ್ ವಾಗ್ಲೆ

ಕೃಷ್ಣ ಲಮಾಣಿ ಹೊಸಪೇಟೆ

Share this article