ದೇಶವೇ ತಲೆ ತಗ್ಗಿಸುವಂತಹ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಬಜೆಟ್‌ನಲ್ಲಿ ನೂರು ರು.ಗಳಲ್ಲಿ 6.5 ರು.ಗಳು ಮಾತ್ರ ಒಬಿಸಿಗೆ ಮೀಸಲಾಗಿಡಲಾಗಿದೆ.
ಮಾಲೂರು : ದೇಶದಲ್ಲಿ ಶೇ.10 ರಷ್ಟಿರುವ ಬಂಡವಾಳಶಾಯಿಗಳ ಪರವಾಗಿರುವ ಪ್ರಧಾನಿ ಮೋದಿ ಅವರು ದೇಶದ ಸಂಪತ್ತಾದ ಶೇ.90 ಜನಸಾಮಾನ್ಯರ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಅನ್ಯಾಯ ಮಾಡಿದ್ದಾರೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಅವರು ಮಾಲೂರು ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ-೨ ರ ಸಮಾವೇಶದಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರು ಕೇವಲ ೨೨ ಖ್ಯಾತ ಉದ್ಯಮಿಗಳಿಗಾಗಿ ಕೇಂದ್ರ ಸರ್ಕಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಉದ್ಯಮಮಿಗಳ ಸಾಲ ಮನ್ನಾ
ದೇಶದ ಈ 22 ಪ್ರಭಾವಿಗಳ 16 ಲಕ್ಷ ಕೋಟಿ ರು.ಗಳ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ, ಕಾರ್ಮಿಕರ, ಶೋಷಿತರ ಸಾಲ ಮನ್ನಾ ಮಾಡಲು ಹಿಂಜರಿಯುತ್ತಾರೆ. ಇವರಿಗೆ ಮನ್ನಾ ಮಾಡಿರುವ ಮೊತ್ತದಲ್ಲಿ ಇನ್ನೂ ೨೪ ವರ್ಷ ಕಾಲ 70 ಕೋಟಿ ಸಾಮಾನ್ಯ ಸಾಲ ಮನ್ನಾ ಮಾಡಬಹುದಾಗಿದೆ. ಕಳೆದ ಹತ್ತು ವರ್ಷದಲ್ಲಿ ಎಲ್ಲ ಕ್ಷೇತ್ರವನ್ನು ಹಾಳು ಮಾಡಿರುವ ಮೋದಿ ಸರ್ಕಾರದಿಂದ ದೇಶ ಎತ್ತ ಸಾಗುತ್ತಿದೆ ಗೊತ್ತಾಗುತ್ತಿಲ್ಲ ಎಂದರು.
ದೇಶದ ಪ್ರಮುಖ ಐಎಎಸ್ ಅಧಿಕಾರಿಗಳ ಪಟ್ಟಿ ನೋಡಿದಾಗ ಬಹಳ ಆಶ್ಚರ್ಯವಾಗುತ್ತದೆ. 90 ಐಎಎಸ್ ಅಧಿಕಾರಿಗಳಲ್ಲಿ ಶೇ.50 ರಷ್ಟು ಇರಬೇಕಾದ ಒಬಿಸಿಯಿಂದ ಕೇವಲ 3 ಜನರಿದ್ದಾರೆ. ಶೇ.15 ರಷ್ಟು ಇರುವ ದಲಿತ ಸಮುದಾಯದ ಒಬ್ಬರು ಹಾಗೂ ಆದಿವಾಸಿಯಿಂದ ಒಬ್ಬರಿದ್ದಾರೆ. ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿ ಅಲ್ಲದೇ ಇನ್ನೇನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಕಾಂಗ್ರೆಸ್ ಬಂದರೆ ಜಾತಿ ಗಣತಿ
ಪ್ರಮುಖ ೨೦೦ ಕಾರ್ಖಾನೆಗಳ ಮಾಲೀಕತ್ವದಲ್ಲಿ ಒಬ್ಬ ದಲಿತ, ಹಿಂದುಳಿಂದ ವರ್ಗದವರಿಲ್ಲ. ಇನ್ನೂ ದೇಶವೇ ತಲೆ ತಗ್ಗಿಸುವಂತಹ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಬಜೆಟ್‌ನಲ್ಲಿ ನೂರು ರು.ಗಳಲ್ಲಿ ೬.೫ ರು.ಗಳು ಮಾತ್ರ ಒಬಿಸಿಗೆ ಮೀಸಲಾಗಿಡಲಾಗಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಘೋಷಿಸಿರುವ ಐದು ಗ್ಯಾರಂಟಿ ಜತೆ ಜಾತಿ ಗಣತಿ ಮಾಡಿಸಿ ದೇಶದಲ್ಲಿರುವ ಪ್ರತಿ ಜನಾಂಗದ ಸಂಖ್ಯೆಯ ಎಕ್ಸರೇ ತೆಗೆದುತೋರಿಸಲಾಗುತ್ತದೆ ಎಂದರು.
ನನಗೆ ರಾಜಕೀಯ ಗುರುವಾಗಿದ್ದ ನನ್ನ ಅಜ್ಜಿ ನೀಡಿದ ಮಾರ್ಗದರ್ಶನದಂತೆ ನಾಯಕನಾದವನು ಸಮಾಜದಲ್ಲಿ ತಾರತಮ್ಯ ವನ್ನು ಹುಡುಕಿ ಕೊಂಡು ಮುನ್ನುಗುತ್ತಿದ್ದು, ಈ ಸಂದರ್ಭದಲ್ಲಿ ಬರುವ ಹೀಯಾಳಿಸುವಿಕೆ, ಬೆದರಿಕೆಗಳಿಗೆ ಅಂಜುವುದಿಲ್ಲ. ದೇಶದ ಪ್ರತಿ ರಾಜ್ಯದ ರೈತರು,ಮಹಿಳೆಯರು,ಪದವಿ ಯುವಕರು ತೊಂದರೆಯನ್ನು ಅನುಭವಿಸುತ್ತಿದ್ದು,ಅವರ ಸಮಸ್ಯೆ ನೀಗಿಸಲು ಕರ್ನಾಟಕ ರಾಜ್ಯ ತೆಗೆದುಕೊಂಡ ಐದು ಗ್ಯಾರಂಟಿ ಕರ‍್ಯಕ್ರಮ ಉತ್ತಮವಾಗಿದ್ದು,ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕೈ ತೆಗಳುವುದೇ ಮೋದಿ ಸಾಧನೆ
ಎ.ಐ.ಸಿ.ಸಿ.ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯ ಪ್ರತಿ 30 ಭಾಷಣದಲ್ಲೂ 20 ನಿಮಿಷ ಕಾಂಗ್ರೆಸ್ ನ್ನು ತೆಗಳುತ್ತಿದ್ದು, ಇದೇ ಅವರ ಹತ್ತು ವರ್ಷದ ಸಾಧನೆಯಾಗಿದೆ ಎಂದರು.ಮೋದಿ ಬಗ್ಗೆ ಪ್ರಸ್ತಾಪಿಸಬೇಡಿ,ಟೀಕಿಸಬೇಡಿ ಎಂದು ನಮ್ಮ ಪಕ್ಷದವರೇ ನನಗೆ ಸಲಹೆ ನೀಡುತ್ತಾರೆ. ಆದರೆ ಮೋದಿ ಅವರು ಬಿಜೆಪಿ ಪಕ್ಷದ ಹೆಸರು ಹೇಳದೆ ಮೋದಿ ಗ್ಯಾರಂಟಿ ಎನ್ನುತ್ತಾರೆ, ನಾವಾದರೂ ಕಾಂಗ್ರೆಸ್ ಹೆಸರು ಹೇಳುವ ಮೂಲಕ ನಮ್ಮ ಪ್ರಗತಿ ಪಟ್ಟಿ ತಿಳಿಸುತ್ತೇವೆ. ಆದರೆ ಮೋದಿ ಎಲ್ಲ ನಾನೇ ಅನ್ನುತ್ತಾರೆ ಎಂದು ಟೀಕಿಸಿದರು.
ಪ್ರಜಾತಂತ್ರಕ್ಕೆ ಮೋದಿ ಮಾರಕ
ಮೋದಿ ನಡುವಳಿಕೆ ಪ್ರಜಾಪ್ರಭುತ್ವಕ್ಕೆ ಮಾರಕ. ಮೋದಿ ಕೇವಲ ಸುಳ್ಳುಗಳನ್ನು ಹೇಳುವ ಸುಳ್ಳಿನ ಸರದಾರ. ನಿಮ್ಮ ಬಳಿ ಬಿಜೆಪಿ ಯವರು ಮತ ಕೇಳಲು ಬಂದರೆ ಅವರ ಹತ್ತಿರ ಬರಗಾಲಕ್ಕೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ತರಿಸಿದ್ದೀರಿ ಎಂದು ಕೇಳಿ, ಜಿಎಸ್ಟಿ ಎಷ್ಟು ಹಣ ವಾಪಾಸ್ ನೀಡಿದ್ದೀರಿ ಎಂದು ಪ್ರಶ್ನಿಸಿ ಎಂದರು.
ಕೋಲಾರ ಜನತೆ ‘ಕೈ’ ಬಿಡುವುದಿಲ್ಲಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸೋಲಿನ ಭೀತಿಯಿಂದ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದ ದೇವೇಗೌಡರು ಈಗ ಜಾತ್ಯತೀತ ಬಿಟ್ಟು ಕೋಮುವಾಗಿ ಪಕ್ಷದೊಂದಿಗೆ ಒಂದಾಗಿದ್ದಾರೆ. ಮೋದಿ ಪ್ರಧಾನಿ ಯಾದರೆ ದೇಶ ಬಿಟ್ಟು ಹೋಗುವೆ ಎಂದಿದ್ದ ದೇವೇಗೌಡರು ಈಗ ಮೋದಿಯನ್ನು ಹೊಗಳಲು ಶುರು ಮಾಡಿದ್ದಾರೆ. ಇದನ್ನು ಹೇಳಿದರೆ ದೇವೇಗೌಡರಿಗೆ ಸಿಟ್ಟು ಬರುತ್ತಿದೆ. ನನಗೆ ಗರ್ವ ಹೆಚ್ಚಾಗಿದೆ ಎನ್ನುತ್ತಾರೆ. ಅವರೇ ಏನೇ ಹೇಳಲ್ಲಿ ಕೋಲಾರದಲ್ಲಿ ನಮ್ಮ ಅಭ್ಯರ್ಥಿಯನ್ನು ಜನ ಕೈಬಿಡುವುದಿಲ್ಲ ಎಂಬ ಗ್ಯಾರಂಟಿ ಇದೆ ಎಂದರು.
ಡಿಸಿಎಂ ಡಿ.ಕೆ.ಶಿವುಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ,ಅಮ್ ಅದ್ಮಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಸಚಿವರಾಗ ಕೃಷ್ಣೇ ಭೈರೇಗೌಡ, ಕೆ.ಹೆಚ್.ಮುನಿಯಪ್ಪ, ಉಸ್ತುವಾರಿ ಸಚಿವರಾದ ಭೈರತಿ ಸುರೇಶ್, ಎಂ.ಸಿ.ಸುಧಾಕರ್,ನಜೀರ್ ಅಹಮದ್, ಶಾಸಕ ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪ ಶಶಿಧರ್, ಕೊತ್ತೂರು ಮಂಜುನಾಥ್, ವಿ.ಆರ್.ಸುದರ್ಶನ್, ಪಿ.ಆರ್.ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ತ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂಧನ್, ವಿಜಯನಾರಸಿಂಹ ಇನ್ನಿತರರು ಇದ್ದರು.ರಾಹುಲ್, ಖರ್ಗೆ ನಿರ್ಗಮನ
ಕ್ಷೇತ್ರದ ೫ ತಾಲೂಕಿನಿಂದ ಬಂದಿದ್ದ 50 ಸಾವಿರಕ್ಕೂ ಹೆಚ್ಚು ಕರ‍್ಯಕರ್ತರು ಭಾಗವಹಿಸಿದ್ದ ಸಮಾವೇಶದಲ್ಲಿ ಮಲ್ಲಿಕಾರ್ಜುನ್‌ಖರ್ಗೆ ಹಾಗೂ ರಾಹುಲ್ ಭಾಷಣ ನಂತರ ಭಾಷಣ ಮಾಡಲು ಎದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಪ್ರಾರಂಭಿಸುತ್ತಿದ್ದಂತೆ ಹೆಲಿಕಾಫ್ಟರ್ ಗೆ ಸಮಯವಾಗಿದೆ ಎಂದು ಹೇಳಿ ರಾಹುಲ್ ಗಾಂಧಿ, ಖರ್ಗೆ ವೇದಿಕೆಯಿಂದ ನಿರ್ಗಮಿಸಿದರು.
ಸಿಎಂ ಭಾಷಣಕ್ಕೆ ಜನರಿಲ್ಲ
ಇದರಿಂದ ಸ್ವಲ್ಪ ಕಸಿವಿಸಿಗೊಂಡ ಮುಖ್ಯಮಂತ್ರಿಗಳು ಕತ್ತಲಾಗುತ್ತಿರುವುದರಿಂದ ಕಾಫ್ಟರ್ ಪ್ರಯಾಣ ಕಷ್ಟವಾಗಿರುವುದರಿಂದ ರಾಹುಲ್ ಗಾಂಧಿ ಹೊರಟ್ಟಿದ್ದಾರೆ ಎಂದು ಹೇಳಿ ಭಾಷಣ ಮುಂದುವರೆಸಿದರು. ಡಿಸಿಎಂ ಡಿ.ಕೆ.ಶಿವುಕುಮಾರ್, ಮಾಜಿ ಶಾಸಕ ರಮೇಶ್ ಕುಮಾರ್, ನಜೀರ್ ಅಹಮದ್, ಶಾಸಕ ನಂಜೆಗೌಡ,ನಾರಾಯಣಸ್ವಾಮಿ ಬಿಟ್ಟರೆ ವೇದಿಕೆ ಸಂಪೂರ್ಣ ಖಾಲಿಯಾಗಿತ್ತು, ಕಾರ್ಯಕರ್ತರು ಸಹ ಜಾಗ ಖಾಲಿ ಮಾಡುತ್ತಿದ್ದು,ಖಾಲಿ ಖುರ್ಚಿಗಳಿಗೆ ಮುಖ್ಯಮಂತ್ರಿಗಳು ಭಾಷಣ ಮಾಡುವಂತಾಯಿತು.