ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂಬರುವ ಜಿಬಿಎ ಚುನಾವಣೆಯಲ್ಲಿ ಬಿಜೆಪಿಯವರು ಮತಕಳ್ಳತನ ಮಾಡುತ್ತಾರೆ ಎಂಬ ಭಯ ಯಾರಿಗೂ ಬೇಡ. ಧೈರ್ಯದಿಂದ ಚುನಾವಣೆ ಎದುರಿಸಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮತದಾರರನ್ನು ಓಲೈಸಬೇಕೆಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಹಾಗೂ ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಗಂಗಾನಗರ ಮತ್ತು ಚಾಮುಂಡಿ ನಗರದಲ್ಲಿ ನಾಗರಿಕರಿಗೆ ಶನಿವಾರ ಉಚಿತ ರೇಷನ್ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದರ ಜೊತೆಗೆ ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಪ್ರಕಟಿಸಿ ಹೆಚ್ಚಿನ ಅನುದಾನವನ್ನೂ ಮೀಸಲಿಟ್ಟಿರುವುದು ಎಲ್ಲರಿಗೂ ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ 2,250 ಕೋಟಿ ರು. ವೆಚ್ಚದಲ್ಲಿ ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ಮಾರ್ಗ ಹಾಗೂ ಮೇಲು ಸೇತುವೆ ನಿರ್ಮಾಣ, ನಗರದೊಳಗಿನ ದಟ್ಟಣೆ ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆ ನಿರ್ಮಾಣ, 73 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಭಾಗ-1ರ ಅನುಷ್ಠಾನ ಹಾಗೂ 2027ರ ಅಂತ್ಯದೊಳಗೆ ಪರಿಷ್ಕೃತ ಮಾಸ್ಟರ್ ಪ್ಲಾನ್-2041 ಜಾರಿಗೊಳಿಸಲು ಬಜೆಟ್ ನಲ್ಲಿ ನಿರ್ಧರಿಸಲಾಗಿದೆ. ಒಟ್ಟಾರೆ ಬೆಂಗಳೂರು ನಗರಕ್ಕೆ 7 ಸಾವಿರ ಕೋಟಿ ರುಪಾಯಿಗಳ ಅನುದಾನವನ್ನು ಮೀಸಲಿಟ್ಟಿರುವುದು ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ನಿಟ್ಟಿನಲ್ಲಿ ಮುನ್ನಡಿ ಇಟ್ಟಿದೆ. ನಮಗೆ ರಂಜಾನ್, ಯುಗಾದಿ, ಕ್ರಿಸ್ಮಸ್ ಎಲ್ಲವೂ ಒಂದೇ. ಎಲ್ಲ ಧರ್ಮದವರೂ ಸಹಬಾಳ್ವೆಯಿಂದ ಜೀವನ ನಡೆಸುವುದು ಅತ್ಯಗತ್ಯ ಎಂದು ಸಚಿವ ಬೈರತಿ ಸುರೇಶ್ ಹೇಳಿದರು.