ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ ಸರ್ಕಾರದಲ್ಲಿ ನರೇಗಾದ ಮಹಾತ್ಮ ಯೋಜನೆಗೆ ಮಹಾತ್ಮಗಾಂಧಿಯ ಹೆಸರನ್ನು ಸೇರ್ಪಡೆ ಮಾಡಿ ಘೋಷಿಸಿದ್ದರು.
ಕನ್ನಡಪ್ರಭ ವಾರ್ತೆ ಕೋಲಾರಮಹಾತ್ಮ ಗಾಂಧಿಯ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರಿನ ಯೋಜನೆಯಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾತ ಮಿಷನ್ ಮಸೂದೆ ಏಕಪಕ್ಷೀಯವಾಗಿ ಜಾರಿ ಮಾಡಿರುವುದು ಖಂಡನೀಯ ಎಂದು ನಗರ ಯೋಜನಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಬಾಪು ಮಹಾತ್ಮ ಗಾಂಧಿ ಸ್ಮರಣಾರ್ಥ ಅವರಿಗೆ ಗೌರವ ಸೂಚಿಸುವ ಸಲುವಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ ಸರ್ಕಾರದಲ್ಲಿ ನರೇಗಾದ ಮಹಾತ್ಮ ಯೋಜನೆಗೆ ಮಹಾತ್ಮಗಾಂಧಿಯ ಹೆಸರನ್ನು ಸೇರ್ಪಡೆ ಮಾಡಿ ಘೋಷಿಸಿದ್ದರು. ಆದರೆ ಚಳಿಗಾಲದ ಅಧಿವೇಶನದಲ್ಲಿ ಮಹಾತ್ಮಗಾಂಧಿ ಹೆಸರನ್ನು ಬದಲಾಯಿಸಿ ರಾಮ್ ಎಂಬ ಹೆಸರನ್ನು ಸೇರ್ಪಡೆ ಮಾಡಿ ಓಟ್ ಬ್ಯಾಂಕ್‌ಗಾಗಿ ಧಾರ್ಮಿಕ ಭಾವನೆಗಳನ್ನು ಹುಟ್ಟು ಹಾಕಿರುವುದಲ್ಲದೆ ಉದ್ಯೋಗ ಸೃಷ್ಟಿ ಬದಲಾಗಿ ಕೊರತೆಯುಂಟಾಗಲಿದೆ. ಈ ಯೋಜನೆಯನ್ನು ಕಾರ್ಪೋರೇಟ್ ಕಂಪನಿಗಳ ಲಾಭಕ್ಕಾಗಿ ಯೋಜನೆಗಳನ್ನು ತಿದ್ದುಪಡಿ ಮಾಡಿರುವುದು ಜನ ವಿರೋಧ ಧೋರಣೆ ಎಂದು ಕಿಡಿಕಾರಿದರು. ದೇಶದಲ್ಲಿ 1.6 ಕೋಟಿ ಮಂದಿ ಉದ್ಯೋಗ ಸೃಷ್ಟಿಸಿತ್ತು ಈ ಪೈಕಿ ಎಸ್.ಸಿ ಶೇ. 17ರಷ್ಟು ಹಾಗೂ ಎಸ್.ಟಿ. ಶೇ. 11ರಷ್ಟು ಮಂದಿ ಕೂಲಿಗಾರರಿಗೆ ಬದುಕಿಗೆ ಆಸರೆಯಾಗಿದ್ದನ್ನು ಮಾರ್ಪಡು ಮಾಡುವ ಮೂಲಕ ಕೊಳ್ಳಿ ಇಡುವ ಕೆಲಸ ಮಾಡಿದೆ. 51.68 ಲಕ್ಷ ಮಂದಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಎಳ್ಳು ನೀರು ಬಿಡುವಂತಾಗಿದೆ ಎಂದು ಆರೋಪಿಸಿದರು.ಮನರೇಗಾದಲ್ಲಿ ಬೇಡಿಕೆ ಆಧಾರಿತವಾಗಿ ಕೆಲಸ ಕೇಳಿದರೆ ಅದನ್ನು ಸರ್ಕಾರವು ಒದಗಿಸಿ ಹಣ ಪಾವತಿಸಬೇಕಾಗಿತ್ತು, ಆದರೆ ಈಗ ಹೊಸ ಮಸೂದೆಯ ವಿಧಿ 4 (5) ಪ್ರಮಾಣಿಕ ಹಂಚಿಕೆ ಸ್ಥಿರವಾದ ಬಜೆಟ್ ಮಿತಿ ಪರಿಚಯಿಸಲಾಗಿದೆ. ಅದರಲ್ಲಿ ಕೇಂದ್ರ ಸೂಚಿಸಿದರೆ ಮಾತ್ರ ಮಾನವ ದಿನಗಳು ಸೃಜಿಸಬೇಕು. ಈ ಹಂಚಿಕೆಗಿಂತ ಹೆಚ್ಚಿನ ಯಾವುದೇ ವೆಚ್ಚ ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಮನರೇಗಾದಲ್ಲಿ ಕೇಂದ್ರ ಸರ್ಕಾರ ಶೇ. 100ರಷ್ಟು ಜತೆಗೆ ಶೇ. 75ರಷ್ಟು ಸಾಮಗ್ರಿಗಳ ವೆಚ್ಚ ಭರಿಸುತ್ತಿತ್ತು. ರಾಜ್ಯ ಸರ್ಕಾರ ಕೇವಲ ನಿರುದ್ಯೋಗ ಭತ್ಯೆ ಮತ್ತು ಶೇ. 25ರಷ್ಟು ಕಚ್ಚಾವಸ್ತುಗಳ ವೆಚ್ಚ ಭರಿಸುತ್ತಿತ್ತು, ಆದರೆ ಬದಲಾದ ಯೋಜನೆಯಲ್ಲಿ ವೇತನ ಮತ್ತು ಸಾಮಾಗ್ರಿಗಳಿಗಾಗಿ ಕೇಂದ್ರ-ರಾಜ್ಯಗಳ ನಡುವೆ 60:40 ಪ್ರಾಮಾಣಿಕ ಹಂಚಿಕೆ ಮೀರಿದರೆ ರಾಜ್ಯಗಳೇ ಶೇ. 100ರಷ್ಟು ವೆಚ್ಚ ಭರಿಸಬೇಕೆಂದು ತಿದ್ದುಪಡಿ ಮಾಡುವುದು ಜನ ವಿರೋಧಿಯ ಪರಮಾವಧಿಯಾಗಿದೆ ಎಂದು ದೂರಿದರು. ಮನರೇಗಾದಲ್ಲಿ ನೀರು ಪೂರೈಕೆ ಭೂಮಿ ಅಭಿವೃದ್ದಿ ಬರ ನಿರೋಧಕಕ್ಕೆ ಸಂಬಂಧಿಸಿದಂತೆ ಕೆರೆಗಳ ಆಭಿವೃದ್ಧಿ ಶಾಲಾ ಕಟ್ಟಡಗಳ ಅಭಿವೃದ್ಧಿ ಬದುಗಳ ನಿರ್ಮಾಣ ಇತ್ಯಾದಿ ಶಾಶ್ವತವಾದ ಯೋಜನೆಗಳಿಗೆ ಒತ್ತು ನೀಡಿದೆ ಇದನ್ನು ಕೆಲಸಗಾರರ ಅಂಕಿ ಅಂಶಗಳು ಇತ್ಯಾದಿಗಳನ್ನು ಆಡಿಟ್ ಮತ್ತು ಹಾಜರಿಪಟ್ಟಿಯ ಮೂಲಕ ಮೂಲಕ ನಿರ್ವಹಣೆ ಮಾಡಲಾಗುತ್ತಿತ್ತು, ಆದರೆ ಹೊಸ ಯೋಜನೆಯಲ್ಲಿ ನೀರಿನ ಭದ್ರತೆ ಮೂಲಸೌಲಭ್ಯಗಳನ್ನು ಒದಗಿಸುವುದಾಗಿದೆ. ಅಲ್ಲದೆ ಇದರಲ್ಲಿ ಕೆಲಸಗಾರರಿಗೆ ಬಯೋಮೆಟ್ರೀಕ್ ಆಧಾರಿತ ವ್ಯವಸ್ಥೆ, ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆ. ವಂಚನೆ ತಡೆಗೆ ಕೃತಕ ಬುದ್ದಿ ಮತ್ತೆ ಬಳಕೆ, ಜನತಾ ಮಾಹಿತಿ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ ಎಂದು ವ್ಯತ್ಯಾಸಗಳನ್ನು ವಿವರಿಸಿದರು.
ಕೇಂದ್ರ ಸರ್ಕಾರವು 30ಕ್ಕೂ ಹೆಚ್ಚು ಕಾಂಗ್ರೆಸ್ ಯೋಜನೆಗಳನ್ನು ಹೆಸರು ಬದಲಾಯಿಸಿಕೊಂಡು ಪುಕ್ಕಟೆ ಪ್ರಚಾರ ಗಿಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಹಲವಾರು ಯೋಜನೆಗಳನ್ನು ಉದಾಹರಿಸಿದ ಅವರು ಹೆಸರು ಬದಲಾವಣೆ ಮಾತ್ರಕ್ಕೆ ದೊಡ್ಡ ಸಾಧನೆಯಾಗಿಲ್ಲ ಎಂದು ವ್ಯಂಗವಾಡಿದರು.ಕೇರಳದ ಕಾಸರಗೊಡು ಮಲೆಯಾಳಂ ಭಾಷೆ ಕಡ್ಡಾಯ ಘೋಷಣೆ ವಿರುದ್ದ ಸರ್ಕಾರ ಕಾನೂನು ಬದ್ದವಾದ ಹೋರಾಟ ಮಾಡಲಿದೆ, ವಿ.ಬಿ. ಜಿ.ರಾಮ್ ಜೀ ಯೋಜನೆಯ ಜನ ವಿರೋಧಿ ದೋರಣೆಗಳ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸ್ಸೀರ್ ಆಹಮದ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಶಾಸಕರಾದ ಕೊತ್ತೂರು ಮಂಜುನಾಥ್, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಹಾಲು ಒಕ್ಕೂಟದ ನಿರ್ದೇಶಕ ಷಂಷೀರ್. ಮುಖಂಡರಾದ ಮೈಲಾಂಡ್ಲ ಮುರಳಿ, ಸೈಯದ್ ಅಪ್ಸರ್, ಅಬ್ದುಲ್ ಖಯ್ಯೂಂ, ಅಥಾವುಲ್ಲಾ, ಚಂಜಿಮಲೆ ರಮೇಶ್, ಸೀಸಂದ್ರ ಗೋಪಾಲ್, ಮಣಿಘಟ್ಟ ಸೊಣ್ಣೇಗೌಡ, ಮಂಜುನಾಥ್, ವೀರೇಂದ್ರ ಪಾಟೀಲ್ ಇದ್ದರು.