ನವದೆಹಲಿ: ರಾಜಕಾರಣದಲ್ಲಿ ಕೆಲವು ವ್ಯಕ್ತಿಗಳನ್ನು ಪದೇ ಪದೇ ಲಾಂಚ್ ಮಾಡುತ್ತಿರಬೇಕು. ಏಕೆಂದರೆ, ಒಂದು ದಾರಿ ಸರಿ ಇರದಿದ್ದರೆ ಮತ್ತೊಂದು ಹಾದಿಯಲ್ಲಿ ಸಾಗುವ ಸ್ಟಾರ್ಟಪ್ ಕಂಪನಿಗಳಂತೆ ಅವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ ಅವರು ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲವಾದರೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಮೋದಿ ಅವರು ಈ ಲೇವಡಿ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸ್ಟಾರ್ಟಪ್ ಮಹಾಕುಂಭದಲ್ಲಿ ಬುಧವಾರ ಮಾತನಾಡಿದ ಪ್ರಧಾನಿ, ಹಲವಾರು ವ್ಯಕ್ತಿಗಳು ಸ್ಟಾರ್ಟಪ್‌ಗಳನ್ನು ಆರಂಭಿಸುತ್ತಾರೆ. ಆದರೆ ಅಂಥವರ ಸಂಖ್ಯೆ ರಾಜಕಾರಣದಲ್ಲಿ ಹೆಚ್ಚಿದೆ. ಏಕೆಂದರೆ ಕೆಲವರನ್ನು ಪದೇ ಪದೇ ಲಾಂಚ್ ಮಾಡಬೇಕಾಗಿರುತ್ತದೆ ಎಂದು ಕುಟುಕಿದರು.
ಚುನಾವಣೆ ಮುಗಿದ ಬಳಿಕ ತಮ್ಮ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಪೂರ್ಣಾವಧಿ ಬಜೆಟ್ ಮಂಡಿಸಲಿದೆ. ಸಾಮಾನ್ಯವಾಗಿ ಚುನಾವಣೆ ಸಂದರ್ಭಗಳಲ್ಲಿ ಇಂತಹ ದೊಡ್ಡ ಕಾರ್ಯಕ್ರಮಗಳನ್ನು ಮುಂದೂಡಲಾಗುತ್ತದೆ.
ಆದರೆ ಈ ಕಾರ್ಯಕ್ರಮವನ್ನು ಚುನಾವಣೆ ಘೋಷಣೆಯಾದ ಬಳಿಕವೂ ಮಾಡಲಾಗುತ್ತಿದೆ ಎಂದರೆ ಇದು ಬದಲಾವಣೆಯ ಸಂಕೇತ ಎಂದು ಬಣ್ಣಿಸಿದರು.
2014ರಲ್ಲಿ ದೇಶದಲ್ಲಿ ಕೇವಲ 100 ಸ್ಟಾರ್ಟಪ್‌ಗಳು ಇದ್ದವು. ಅವುಗಳ ಸಂಖ್ಯೆ ಈಗ 1.25 ಲಕ್ಷಕ್ಕೇರಿಕೆಯಾಗಿದೆ. 12 ಲಕ್ಷ ಮಂದಿ ನೇರವಾಗಿ ಇವುಗಳ ಜತೆ ತೊಡಗಿಸಿಕೊಂಡಿದ್ದಾರೆ. ಸ್ಟಾರ್ಟಪ್‌ಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದರು.