ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಜನಾಂದೋಲನಾ ಸಮಾವೇಶದಲ್ಲಿ ಮಾತನಾಡಿ, ನಿನ್ನೆ ಉಪಮುಖ್ಯಮಂತ್ರಿಗಳು ಭಾಷಣ ಮಾಡುವಾಗ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಮಹಿಳೆಯರು ಹೇಳಿದ್ದರು. ಎರಡು ತಿಂಗಳಿಂದ ಮಹಿಳೆಯರ ಖಾತೆಗೆ ಹಣ ಜಮೆಯಾಗದಿರುವುದು ನನ್ನ ಗಮನಕ್ಕೂ ಬಂದಿದೆ. ತಾಂತ್ರಿಕ ಕಾರಣಗಳಿಂದ ಅಡಚಣೆಯಾಗಿತ್ತು. ಅದನ್ನೆಲ್ಲಾ ಸರಿಪಡಿಸಲಾಗಿದ್ದು, ಇವತ್ತಿನಿಂದ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆ. ನುಡಿದಂತೆ ನಡೆಯುವವರು ಕಾಂಗ್ರೆಸ್‌ನವರು ಎಂದರು.
ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಗಿಮಿಕ್ ಮಾಡುತ್ತಿದ್ದು, ಅವರಿಗಿರುವ ಕ್ಲೀನ್ ಇಮೇಜ್ ಹಾಳು ಮಾಡಲು ಮುಡಾ ಹಗರಣವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ಸರ್ಕಾರದದ ಹಗರಣಗಳನ್ನ ಕರ್ನಾಟಕದ ಜನರು ಮರೆತಿಲ್ಲ. ಮೈಸೂರು ಮುಡಾದಲ್ಲಿ ದೇವೇಗೌಡರ ಕುಟುಂಬ ಹಗರಣ ಮಾಡಿದ್ದಾರೆಂದು ಯಡಿಯೂರಪ್ಪ ಹೇಳಿದ್ದರು. ಈಗ ಅದನ್ನೆ ಮರೆತು ಜೊತೆಯಾಗಿದ್ದಾರೆ. ವಿಜಯೇಂದ್ರ ಹಾಗೂ ಯಡಿಯೂರಪ್ಪರಿಗೆ ಆ ಹಗರಣ ತನಿಖೆ ಮಾಡಿಸುವ ಧೈರ್ಯ ಇದೆಯಾ?, ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದು ದೂರಿದರು.